ಬೆಂಗಳೂರು: ಹುಂಡಿ ಕಳವು ಆರೋಪ; ಆರೋಪಿಯ ಬಂಧನ
Update: 2021-07-09 19:34 IST
ಬೆಂಗಳೂರು, ಜು.9: ದೇವಾಲಯದ ಹುಂಡಿಯಲ್ಲಿ ಹಣ ಕಳವು ಮಾಡುತ್ತಿದ್ದ ಓರ್ವನನ್ನು ಇಲ್ಲಿನ ಆರ್ ಎಂಸಿ ಯಾರ್ಡ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕೆಜಿಎಫ್ ಮೂಲದ ರವಿಕುಮಾರ್(26) ಬಂಧಿತ ಆರೋಪಿಯಾಗಿದ್ದು, ಈತನಿಂದ ದೇವರ 2 ತಾಳಿ ಸೇರಿ 1.5 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.
ಯಶವಂತಪುರ ಬಳಿಯ ನಾಗಮ್ಮದೇವಿ ಹಾಗೂ ಅಂಗಾಳ ಪರಮೇಶ್ವರಿ ದೇವಾಲಯದ ಹುಂಡಿಯನ್ನು ಹೊಡೆದು ಕಳ್ಳತನ ಮಾಡಲು ಮುಂದಾಗಿದ್ದ ಆರೋಪಿ ಹುಂಡಿಯಲ್ಲಿ ಹಣ ಇಲ್ಲದ್ದಕ್ಕೆ ದೇವರ ವಿಗ್ರಹದಲ್ಲಿನ ತಾಳಿ ಕದ್ದು ಪರಾರಿಯಾಗಿದ್ದ.
ಈ ಬಗ್ಗೆ ಖಚಿತ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡ ಆರ್‍ಎಂಸಿ ಯಾರ್ಡ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅವರು ಹೇಳಿದರು.