ಬೆಂಗಳೂರು: ಕೊಲೆ ಪ್ರಕರಣ; 6 ಮಂದಿ ಆರೋಪಿಗಳ ಬಂಧನ
ಬೆಂಗಳೂರು, ಜು.9: ಮದ್ಯದ ಅಮಲಿನಲ್ಲಿ ಕಿರುಕುಳ ನೀಡುತ್ತಿದ್ದ ಪತಿಯನ್ನು ಕೊಲೆಗೈದಿದ್ದ ಆರೋಪ ಪ್ರಕರಣ ಸಂಬಂಧ ಆರು ಮಂದಿಯನ್ನು ಡಿಜೆಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಡಿಜೆಹಳ್ಳಿಯ ರೌಡಿಗಳಾದ ಆಂಥೋನಿ, ಪ್ಯಾಟ್ರಿಕ್ ಹಾಗೂ ಅವರ ಸಹಚರರಾದ ಅಜಯ್, ಸ್ಟೀಫನ್, ಶಿವಕುಮಾರ್, ಅರುಣ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಜು.2ರಂದು ಕಾವಲ್ ಭೈರಸಂದ್ರದ ಅಂಬೇಡ್ಕರ್ ಕಾಲೇಜು ಮುಂಭಾಗದಲ್ಲಿ ಕೃಷ್ಣಮೂರ್ತಿ(35) ಎಂಬಾತನನ್ನು ಕೊಲೆ ಮಾಡಲಾಗಿತ್ತು. ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ಕೃಷ್ಣಮೂರ್ತಿ ಕಳೆದ 10 ವರ್ಷಗಳ ಹಿಂದೆ ರುತ್ ಎಂಬಾಕೆಯನ್ನು ಎರಡನೆ ವಿವಾಹವಾಗಿದ್ದು ಮೊದಲ ಹಾಗೂ ಎರಡನೆ ಸೇರಿ ಇಬ್ಬರು ಪತ್ನಿಯರಿಗೂ ಪ್ರತ್ಯೇಕ ಮನೆ ಮಾಡಿಕೊಟ್ಟಿದ್ದನು ಎನ್ನಲಾಗಿದೆ.
ಇತ್ತೀಚೆಗೆ ಮದ್ಯ ಸೇವಿಸಿ ಕೃಷ್ಣಮೂರ್ತಿ ಪ್ರತಿದಿನ ಎರಡನೆ ಪತ್ನಿಗೆ ಕಿರುಕುಳ ಕೊಡುತ್ತಿದ್ದು, ಇದರಿಂದ ಬೇಸತ್ತ ಪತ್ನಿಯು ಆತನನ್ನ ಕೊಲೆ ಮಾಡಲು ಮುಂದಾಗಿದ್ದಳು ಎಂದು ಹೇಳಲಾಗುತ್ತಿದೆ. ಇನ್ನು, ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ ಪರಿಚಿತ ಆರೋಪಿ ದಿನೇಶ್ ಎಂಬಾತನ ಸಹಾಯದಿಂದ ಕೊಲೆ ಮಾಡಿಸಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ಇನ್ನು, ಕೊಲೆಕೃತ್ಯದ ಪ್ರಮುಖ ರೂವಾರಿ ಎನ್ನಲಾದ ಪತ್ನಿ ರುತ್ ತಲೆಮರೆಸಿಕೊಂಡಿದ್ದು, ಈಕೆಯ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.