ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ 51.12ರಷ್ಟು ಪದವಿ ವಿದ್ಯಾರ್ಥಿ, ಬೋಧಕರಿಗೆ ವ್ಯಾಕ್ಸಿನ್

Update: 2021-07-09 17:47 GMT

ಬೆಂಗಳೂರು, ಜು. 9: `ಬಿಬಿಎಂಪಿ ವ್ಯಾಪ್ತಿಯಲ್ಲಿ ಸರಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳ ವಿದ್ಯಾರ್ಥಿಗಳು, ಬೋಧಕ ಮತ್ತಿತರೆ ಸಿಬ್ಬಂದಿಗೆ ಕೋವಿಡ್ ಲಸಿಕೀಕರಣ ವೇಗವಾಗಿ ಸಾಗುತ್ತಿದ್ದು, ಗುರುವಾರದ (ಜು.8) ಹೊತ್ತಿಗೆ ಶೇ.51.12ರಷ್ಟು ಮಂದಿಗೆ ವ್ಯಾಕ್ಸಿನ್ ಕೊಡಲಾಗಿದೆ' ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ. 

ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಬಿಬಿಎಂಪಿಯ ಒಟ್ಟು 8 ವಲಯಗಳಲ್ಲಿನ ಸರಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳಲ್ಲಿ 59,179 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈ ಪೈಕಿ 31,147 ವಿದ್ಯಾರ್ಥಿಗಳಿಗೆ ಲಸಿಕೆ ನೀಡಿ ಶೇ.52.63ರಷ್ಟು ಗುರಿ ತಲುಪಲಾಗಿದೆ. ಹಾಗೆಯೇ, 3,076 ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದು, ಈ ಪೈಕಿ 2,518 ಸಿಬ್ಬಂದಿಗೆ ಲಸಿಕೆ ನೀಡಿ ಶೇ.81.86ರಷ್ಟು ಗುರಿ ತಲುಪಲಾಗಿದೆ ಎಂದಿದು ಮಾಹಿತಿ ನೀಡಿದ್ದಾರೆ. 

`ಬಿಬಿಎಂಪಿಯ ಎಂಟೂ ವಲಯಗಳಲ್ಲಿ ವಿದ್ಯಾರ್ಥಿಗಳ ಲಸಿಕೀಕರಣ ಅತ್ಯಂತ ವೇಗವಾಗಿ, ವ್ಯವಸ್ಥಿತವಾಗಿ ಸಾಗಿದ್ದು ಆದಷ್ಟು ಬೇಗ ಲಸಿಕೀಕರಣ ಮುಗಿಸಲಾಗುವುದು. ಈವರೆಗೂ ಕೋವಿಡ್ ಲಸಿಕೆ ಪಡೆಯದ ವಿದ್ಯಾರ್ಥಿಗಳು ತಪ್ಪದೇ ತಮ್ಮ ಕಾಲೇಜುಗಳಲ್ಲಿ ತೆಗೆದುಕೊಳ್ಳಬೇಕು' ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News