ರಾಕ್ ಲೈನ್ ವೆಂಕಟೇಶ್ ಮನೆಗೆ ಮುತ್ತಿಗೆ ಯತ್ನ: ಜೆಡಿಎಸ್ ಕಾರ್ಯಕರ್ತರು ಪೊಲೀಸ್ ವಶಕ್ಕೆ

Update: 2021-07-10 16:54 GMT

ಬೆಂಗಳೂರು, ಜು.10: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಟೀಕಿಸಿದ್ದಾರೆಂದು ಸಿನೆಮಾ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಅವರ ಮನೆಗೆ ಜೆಡಿಎಸ್ ಕಾರ್ಯಕರ್ತರು ಮುತ್ತಿಗೆಗೆ ಯತ್ನಿಸಿದರು.

ಶನಿವಾರ ನಗರದ ಮಹಾಲಕ್ಷ್ಮೀ ಲೇಔಟ್‍ನಲ್ಲಿರುವ ರಾಕ್‍ಲೈನ್ ವೆಂಕಟೇಶ್ ಅವರ ಮನೆ ಸಮೀಪ ಜಮಾಯಿಸಿದ ಪ್ರತಿಭಟನಾಕಾರರು, ರಾಕ್‍ಲೈನ್ ವೆಂಕಟೇಶ್ ಅವರು ಈ ಕೂಡಲೇ ಕುಮಾರಸ್ವಾಮಿ ಅವರ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದರು.

ಇನ್ನು, ಪ್ರತಿಭಟನೆಯ ಸುಳಿವು ಪಡೆದ ಪೊಲೀಸರು, ವೆಂಕಟೇಶ್ ನಿವಾಸದ ಬಳಿ ಬ್ಯಾರಿಕೇಡ್ ಅಳವಡಿಸಿದ್ದರು. ಸ್ಥಳದಲ್ಲಿ ಜಮಾಯಿಸಿದ ಜೆಡಿಎಸ್ ಕಾರ್ಯಕರ್ತರು, ಬ್ಯಾರಿಕೇಡ್‍ಗಳನ್ನು ತಳ್ಳಿಕೊಂಡು ಮನೆಯ ಒಳಕ್ಕೆ ನುಗ್ಗಲು ಯತ್ನಿಸಿದಾಗ ಹಲವು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು.

ಮಂಡ್ಯದ ಕೆಆರ್‍ಎಸ್ ಅಣೆಕಟ್ಟೆ ಸಮೀಪದ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಮತ್ತು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ನಡುವೆ ಹಲವು ದಿನಗಳಿಂದ ವಾಕ್ಸಮರ ನಡೆಯುತ್ತಿದೆ. ಸುಮಲತಾ ಜತೆ ಗುರುತಿಸಿಕೊಂಡಿರುವ ರಾಕ್‍ಲೈನ್ ವೆಂಕಟೇಶ್, ಶುಕ್ರವಾರ ಕುಮಾರಸ್ವಾಮಿ ಅವರನ್ನು ಕಟುವಾಗಿ ಟೀಕಿಸಿ ಹೇಳಿಕೆ ನೀಡಿದ್ದರು.

ಭದ್ರತೆ: ಪುನಃ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಸಾಧ್ಯತೆ ಹಿನ್ನೆಲೆ ರಾಕ್‍ಲೈನ್ ವೆಂಕಟೇಶ್ ಹಾಗೂ ಸಂಸದೆ ಸುಮಲತಾ ಅವರ ನಿವಾಸದ ಬಳಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.

ಮದ್ಯದ ಅಮಲಿನಲ್ಲಿ ರಾಕ್‍ಲೈನ್ ಮಾತನಾಡಿದ್ದಾರಾ: ಆರ್.ಪ್ರಕಾಶ್ ಪ್ರಶ್ನೆ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುರಿತು ಸಿನೆಮಾ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಅವರು ಮದ್ಯದ ಅಮಲಿನಲ್ಲಿ ಮಾತನಾಡಿದ್ದಾರಾ ಎಂದು ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಪ್ರಶ್ನಿಸಿದ್ದಾರೆ.

ಶನಿವಾರ ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ನಿನ್ನೆ ಮದ್ಯ ಸೇವನೆ ಮಾಡಿ ಮಾತನಾಡಿದ್ದಾರೆ ಅನಿಸುತ್ತದೆ. ಇನ್ನು ಸಂಸದೆ ಸುಮಲತಾ ಅಂಬರೀಶ್ ಅವರ ಬಗ್ಗೆ ರಾಕ್‍ಲೈನ್ ವೆಂಕಟೇಶ್ ಅವರು ಏಕವಚನದಲ್ಲಿ ಮಾತನಾಡಿದ್ದು, ಅಂಬರೀಶ್ ಅಭಿಮಾನಿಗಳು ವೆಂಕಟೇಶ್ ವಿರುದ್ಧ ಪ್ರತಿಭಟಿಸಲಿ ಎಂದರು.

ಕುಮಾರಸ್ವಾಮಿ ಅವರು ಹಳ್ಳಿ ಭಾಷೆ ಬಳಸಿದ್ದಕ್ಕೆ ಇಷ್ಟೊಂದು ನಾಟಕವೇಕೆ ಎಂದ ಅವರು, ಸತ್ತಿರುವ ವ್ಯಕ್ತಿಗಳ ಬಗ್ಗೆ ಮಾತನಾಡಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳುವ ರಾಕ್‍ಲೈನ್ ವೆಂಕಟೇಶ್, ಸ್ವತಃ ಏಕವಚನದಲ್ಲಿ ದೊಡ್ಡ ಕಲಾವಿದ ವಜ್ರಮುನಿ ಅವರ ಹೆಸರು ಹೇಳಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.

ವೆಂಕಟೇಶ್ ಅವರಿಗೂ ಕನ್ನಡನಾಡಿಗೂ ಏನು ಸಂಬಂಧ. ಅವರು ವ್ಯಾಪಾರ ಮಾಡಲು ಬಂದಿದ್ದಾರೆ. ಬಂಡವಾಳ ಹಾಕಿ ಬಂಡವಾಳ ಮಾಡಿಕೊಂಡು, ಮೀಟರ್ ಬಡ್ಡಿ ವ್ಯವಹಾರ ಮಾಡುತ್ತಿದ್ದೀರ ಮಾಡಿ. ನಿಮ್ಮ ವ್ಯವಹಾರ ಎಲ್ಲವೂ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News