ರಫೇಲ್ ಅವ್ಯವಹಾರ ಆರೋಪ: ಸದನ ಸಮಿತಿ ತನಿಖೆಗೆ ಒತ್ತಾಯಿಸಿ ಕಾಂಗ್ರೆಸ್ ಧರಣಿ

Update: 2021-07-10 16:16 GMT

ಬೆಂಗಳೂರು, ಜು.10: ಪ್ರಧಾನಿ ನರೇಂದ್ರ ನರೇಂದ್ರ ಮೋದಿ ನೇತೃತ್ವದ ಸರಕಾರದಲ್ಲಿ ರಫೇಲ್ ವಿಮಾನ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತು ಜಂಟಿ ಸದನ ಸಮಿತಿಯಿಂದ ತನಿಖೆಗೆ ವಹಿಸಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಧರಣಿ ನಡೆಸಿದರು.

ಶನಿವಾರ ನಗರದ ಕಾಂಗ್ರೆಸ್ ಭವನ ಮುಂಭಾಗ ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ನೇತೃತ್ವದಲ್ಲಿ ಧರಣಿ ನಡೆಸಿದ ಕಾರ್ಯಕರ್ತರು, ಈ ಕೂಡಲೇ ಜಂಟಿ ಸದನ ಸಮಿತಿಗೆ (ಜೆಪಿಸಿ) ಒಪ್ಪಿಸಬೇಕೆಂದು ಒತ್ತಾಯಿಸಿದರು.

ಪ್ರಧಾನಿ ನರೇಂದ್ರ ನರೇಂದ್ರ ಮೋದಿ ನೇತೃತ್ವದ ಸರಕಾರದಲ್ಲಿ ರಫೇಲ್ ವಿಮಾನ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತು ಜಂಟಿ ಸದನ ಸಮಿತಿಯಿಂದ ತನಿಖೆಗೆ ವಹಿಸಬೇಕೆಂದು ಕಾಂಗ್ರೆಸ್ ಈ ಹಿಂದೆಯೇ ಆಗ್ರಹಿಸಿತ್ತು. ಆದರೆ, ತನಿಖೆಗೆ ಮೋದಿ ಸರಕಾರ ಮುಂದಾಗಿರಲಿಲ್ಲ. ಇನ್ನು, ಇತ್ತೀಚಿಗೆ ಫ್ರಾನ್ಸ್ ಸರಕಾರ ರಫೇಲ್ ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿದೆ. ಅಲ್ಲದೆ, ನರೇಂದ್ರ ಮೋದಿ ಸರಕಾರ ಮಾತ್ರ ತನಿಖೆಗೆ ವಹಿಸದೆ ಮೀನಾಮೇಷ ಎಣಿಸುತ್ತಿದೆ. ಇದರಿಂದ ಅವ್ಯವಹಾರದ ಬಗ್ಗೆ ಅನೇಕ ಅನುಮಾನಗಳು ಮೂಡುತ್ತಿವೆ ಎಂದು ಪ್ರತಿಭಟನಾಕಾರರು ದೂರಿದರು.

ಭ್ರಷ್ಟಾಚಾರದ ಬಗ್ಗೆ ರಾಜಿ ಇಲ್ಲ ಎನ್ನುವ ಪ್ರಧಾನಿ ಮೋದಿ ಅವರು, ಸದನ ಸಮಿತಿಗೆ ವಹಿಸಲು ತಡ ಮಾಡುವುದೇಕೆ ಎಂಬುದು ದೇಶದ ಜನತೆಗೆ ಈಗ ಅನುಮಾನ ಮೂಡಿಸುತ್ತಿದೆ. ಅಲ್ಲದೆ, ಮೋದಿ ಸರಕಾರ ಜಂಟಿ ಸದನ ಸಮಿತಿಗೆ ರಫೇಲ್ ಹಗರಣವನ್ನು ಒಪ್ಪಿಸಲು ವಿಳಂಬವೇಕೆ ಎಂಬುದನ್ನು ಜನತೆಗೆ ತಿಳಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದರು.

ಫ್ರಾನ್ಸ್ ಸರಕಾರ ರಫೇಲ್ ವ್ಯಾಪಾರದಲ್ಲಿ ಒಳ ಒಪ್ಪಂದವಾಗಿದೆ. ಭ್ರಷ್ಟಾಚಾರ ನಡೆದಿರುವ ಬಗ್ಗೆ ಅನುಮಾನವಿದೆ. ಅದಕ್ಕಾಗಿ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದೆ. ರಫೇಲ್ ವಿಮಾನ ಖರೀದಿ ಅವ್ಯವಹಾರದಲ್ಲಿ ಪ್ರತಿ ವಿಮಾನಕ್ಕೂ ಹೆಚ್ಚುವರಿ ಹಣವನ್ನು ನೀಡಿ ಭಾರತ ಫ್ರಾನ್ಸ್ ನಿಂದ  ಖರೀದಿಸಲಾಗಿದೆ ಎಂಬ ಅನುಮಾನ ಪ್ರಾರಂಭದಿಂದಲೂ ಕೇಳಿಬಂದಿದೆ. ಆದರೂ ಇದನ್ನು ತನಿಖೆಗೆ ವಹಿಸಲು ಕೇಂದ್ರ ಬಿಜೆಪಿ ಸರಕಾರ ಮೀನಾಮೇಷ ಎಣಿಸುತ್ತಿದೆ. ಬಿಜೆಪಿಯ ವಕ್ತಾರ ಸಂಬಿತ್ ಪಾತ್ರ ಕಾಂಗ್ರೆಸ್ ಪಕ್ಷದ ಬಗ್ಗೆ ಆಧಾರರಹಿತ ಟೀಕೆ ನಡೆಸಿದ್ದಾರೆ. ರಫೇಲ್ ಹಗರಣದ ಕಮಿಷನ್ ಪಡೆದಿರುವ ಕೇಂದ್ರ ಸರಕಾರ ಶೇಕಡವಾರು ಎಷ್ಟು ಕಮಿಷನ್ ಪಡೆದಿದೆ ಎಂಬುದನ್ನು ಸಂಬಿತ್ ಪಾತ್ರ ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್ ಮುಖಂಡ ಎಸ್.ಮನೋಹರ್ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಜಿ.ಜನಾರ್ದನ್ ಎ.ಆನಂದ್, ಶೇಖರ್, ಉಮೇಶ್, ಪುಟ್ಟರಾಜ, ಮಹೇಶ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News