ಅಧಿಕವಾಗುತ್ತಿರುವ ಜನಸಂಖ್ಯೆಯಿಂದ ಅಭಿವೃದ್ಧಿಗೆ ತೊಂದರೆಯಾಗುತ್ತಿದೆ, ನಿಯಂತ್ರಣ ಕ್ರಮ ಅಗತ್ಯ: ಆದಿತ್ಯನಾಥ್‌

Update: 2021-07-11 15:50 GMT

ಲಕ್ನೋ, ಜು.11: ವಿಶ್ವ ಜನಸಂಖ್ಯಾ ದಿನದ ಸಂದರ್ಭದಲ್ಲಿ ರವಿವಾರ ಉತ್ತರ ಪ್ರದೇಶ ಸರಕಾರವು 2021-2030ರ ಅವಧಿಗಾಗಿ ನೂತನ ಜನಸಂಖ್ಯಾ ನೀತಿಯನ್ನು ಬಿಡುಗಡೆಗೊಳಿಸಿದೆ. ನೂತನ ನೀತಿಯಲ್ಲಿ ಜನನ ದರವನ್ನು 2026ರ ವೇಳೆಗೆ ಪ್ರತಿ ಸಾವಿರಕ್ಕೆ ಶೇ.2.1ಕ್ಕೆ ಮತ್ತು 2030ರ ವೇಳೆಗೆ ಶೇ.1.9ಕ್ಕೆ ತಗ್ಗಿಸುವ ಗುರಿಯನ್ನು ಹೊಂದಲಾಗಿದೆ. ರಾಜ್ಯದ ಒಟ್ಟು ಫಲವತ್ತತೆ ದರವು ಈಗ ಶೇ.2.7ರಷ್ಟಿದೆ.

ನೂತನ ಜನಸಂಖ್ಯಾ ನೀತಿಯನ್ನು ಅನಾವರಣಗೊಳಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ರಾಜ್ಯದಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸಲು ಎರಡು ಮಕ್ಕಳ ಜನನದ ನಡುವೆ ಅಂತರವನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ಹೆಚ್ಚುತ್ತಿರುವ ಜನಸಂಖ್ಯೆಯು ಅಭಿವೃದ್ಧಿಯಲ್ಲಿ ತೊಡಕಾಗಿದೆ ಮತ್ತು ಅದನ್ನು ನಿಯಂತ್ರಿಸಲು ಹೆಚ್ಚಿನ ಪ್ರಯತ್ನಗಳು ನಡೆಯಬೇಕಾಗಿವೆ ಎಂದ ಅವರು ,ಹೆಚ್ಚುತ್ತಿರುವ ಜನಸಂಖ್ಯೆಯು ಅಭಿವೃದ್ಧಿಗೆ ಅಡಚಣೆಯಾಗುತ್ತದೆ ಎಂಬ ಕಳವಳಗಳು ಆಗಿಂದಾಗ್ಗೆ ವಿಶ್ವಾದ್ಯಂತ ವ್ಯಕ್ತವಾಗುತ್ತಲೇ ಇವೆ ಮತ್ತು ಕಳೆದ ನಾಲ್ಕು ದಶಕಗಳಿಂದಲೂ ಆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಜನಸಂಖ್ಯಾ ಬೆಳವಣಿಗೆಯು ಬಡತನದೊಂದಿಗೂ ಸಂಬಂಧಿಸಿದೆ. ಜನಸಂಖ್ಯಾ ನೀತಿ 2021-2030 ರಲ್ಲಿ ಪ್ರತಿ ಸಮುದಾಯದ ಬಗ್ಗೆಯೂ ಕಾಳಜಿಯನ್ನು ವಹಿಸಲಾಗಿದೆ ಎಂದರು.

ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಿರುವ ದೇಶಗಳು ಮತ್ತು ರಾಜ್ಯಗಳು ಧನಾತ್ಮಕ ಫಲಿತಾಂಶಗಳನ್ನು ಕಂಡಿವೆ. ಆದರೂ ಈ ಸಂಬಂಧ ಹೆಚ್ಚಿನ ಪ್ರಯತ್ನಗಳು ಅಗತ್ಯವಾಗಿವೆ ಎಂದ ಆದಿತ್ಯನಾಥ, ಉ.ಪ್ರದೇಶ ಸರಕಾರವು ಸಮಾಜದ ಎಲ್ಲ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ನೂತನ ನೀತಿಯನ್ನು ಅನುಷ್ಠಾನಿಸುತ್ತಿದೆ ಎಂದು ತಿಳಿಸಿದರು.

ಕರಡು ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಶನಿವಾರ ರಾಜ್ಯ ಕಾನೂನು ಆಯೋಗದ ಜಾಲತಾಣದಲ್ಲಿ ಪ್ರಕಟಿಸಲಾಗಿತ್ತು. ಪ್ರಸ್ತಾವಿತ ನೀತಿಯ ಮೂಲಕ ಗರ್ಭ ನಿರೋಧಕ ಕ್ರಮಗಳ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸಲು ಮತ್ತು ಗರ್ಭ ನಿರೋಧಕ ಸಾಧನಗಳ ಲಭ್ಯತೆಯನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು ಮತ್ತು ಸುರಕ್ಷಿತ ಗರ್ಭಪಾತಕ್ಕಾಗಿ ಸೂಕ್ತ ವ್ಯವಸ್ಥೆಯೊಂದನ್ನು ಒದಗಿಸಲಾಗುವುದು. ಕರಡು ಮಸೂದೆಯು ಎರಡು ಮಕ್ಕಳ ನೀತಿಗೆ ಒತ್ತು ನೀಡಿದ್ದು,ಇದನ್ನು ಉಲ್ಲಂಘಿಸುವವರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸುವುದಕ್ಕೆ,ಸರಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವುದಕ್ಕೆ ಮತ್ತು ಯಾವುದೇ ಸರಕಾರಿ ಸಬ್ಸಿಡಿ ಪಡೆಯುವುದಕ್ಕೆ ನಿಷೇಧ,ಹಿರಿಯ ನಾಗರಿಕರ ರಕ್ಷಣೆಗೆ ಸಮಗ್ರ ವ್ಯವಸ್ಥೆ,11ರಿಂದ 19 ವರ್ಷ ವಯೋಮಾನದವರಿಗೆ ಶಿಕ್ಷಣ,ಆರೋಗ್ಯ ಮತ್ತು ಪೌಷ್ಟಿಕತೆಗಾಗಿ ಹೆಚ್ಚಿನ ಸೌಲಭ್ಯಗಳು ಸೇರಿದಂತೆ ಹಲವಾರು ಕ್ರಮಗಳನ್ನು ಪ್ರಸ್ತಾವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News