ಯೂರೋ ಕಪ್ ಫುಟ್ಬಾಲ್: ಇಂಗ್ಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ಇಟಲಿ

Update: 2021-07-12 03:11 GMT

ಲಂಡನ್, ಜು.12: ಇಂಗ್ಲೆಂಡ್ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 3-2 ಗೋಲುಗಳಿಂದ ಸೋಲಿಸಿದ ಬಲಿಷ್ಠ ಇಟಲಿ ಯೂರೋ ಕಪ್ ಫುಟ್ಬಾಲ್ ಟೂರ್ನಿಯ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ವೆಂಬ್ಲೆಯಲ್ಲಿ ಸೋಮವಾರ ನಡೆದ ರೋಚಕ ಪಂದ್ಯ 1-1 ಗೋಲುಗಳಿಂದ ಡ್ರಾ ಆದ ಬಳಿಕ ಪೆನಾಲ್ಟಿ ಶೂಟೌಟ್‌ಗೆ ಮೊರೆ ಹೋಗಬೇಕಾಯಿತು. ಪೆನಾಲ್ಟಿ ಶೂಟೌಟ್‌ನಲ್ಲಿ 3-2 ಗೋಲುಗಳ ಅಂತರದಿಂದ ಇಟಲಿ ತಂಡವು ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ 1968ರ ನಂತರ ಮೊದಲ ಬಾರಿಗೆ ಯುರೋಪಿಯನ್ ಚಾಂಪಿಯನ್‌ಶಿಪ್ ಅನ್ನು ಗೆದ್ದುಕೊಂಡಿತು.

ಪಂದ್ಯ ಆರಂಭವಾಗಿ ಎರಡನೇ ನಿಮಿಷದಲ್ಲೇ ಇಂಗ್ಲೆಂಡ್ ತಂಡ ಗೋಲು ಗಳಿಸಿತ್ತು. ಲ್ಯೂಕ್ ಶಾ ಭರ್ಜರಿ ಗೋಲಿನೊಂದಿಗೆ ಇಂಗ್ಲೆಂಡ್‌ ತಂಡಕ್ಕೆ ಕನಸಿನ ಆರಂಭವನ್ನು ನೀಡಿದ್ದರು. ಬಳಿಕ 67 ನಿಮಿಷದಲ್ಲಿ ಇಟಲಿಯ ಲಿಯೊನಾರ್ಡೊ ಬೊನುಸಿ ಗೋಲು ಗಳಿಸುವ ಮೂಲಕ ಪಂದ್ಯ 1-1 ಗೋಲುಗಳಿಂದ ಡ್ರಾ ಆಯಿತು.

ಬಳಿಕ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ 3-2 ಗೋಲುಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಇಟಲಿ ತಂಡ ಯುರೋಪಿಯನ್ ಚಾಂಪಿಯನ್‌ಶಿಪ್ ಅನ್ನು ಗೆದ್ದುಕೊಂಡಿತು. ಈ ಮೂಲಕ ಮೊದಲ ಬಾರಿ ಯುರೋಪಿಯನ್ ಚಾಂಪಿಯನ್‌ಶಿಪ್ ಟ್ರೋಫಿ ಗೆಲ್ಲುವ ಇಂಗ್ಲೆಂಡ್ ಕನಸು ಭಗ್ನವಾಯಿತು.

1966ರಲ್ಲಿ ತವರಿನಲ್ಲಿ ಫಿಫಾ ವಿಶ್ವಕಪ್ ಗೆದ್ದ ನಂತರ ಇಂಗ್ಲೆಂಡ್ ತನ್ನ ಮೊದಲ ಯುರೋಪಿಯನ್ ಚಾಂಪಿಯನ್‌ಶಿಪ್ ಟ್ರೋಫಿ ಮತ್ತು ಅವರ ಮೊದಲ ಪ್ರಮುಖ ಅಂತರರಾಷ್ಟ್ರೀಯ ಫುಟ್‌ಬಾಲ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿತ್ತು. 

2006ರ ಫಿಫಾ ವಿಶ್ವಕಪ್ ಗೆಲುವಿನ ನಂತರ ಇಟಲಿ ಗೆದ್ದ ಮೊದಲ ಪ್ರಮುಖ ಅಂತರರಾಷ್ಟ್ರೀಯ ಟ್ರೋಫಿ ಇದಾಗಿದೆ. ಇಟಲಿ ಯುರೋ 2000 ಮತ್ತು ಯುರೋ 2012 ರಲ್ಲಿ ಫೈನಲ್ ತಲುಪಿತ್ತು. ಆದರೆ ಕ್ರಮವಾಗಿ ಫ್ರಾನ್ಸ್ ಮತ್ತು ಸ್ಪೇನ್ ವಿರುದ್ಧ ಸೋತಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News