×
Ad

ನಿಗದಿತ ಕಾಲಮಿತಿಯೊಳಗೆ 'ಜಲಜೀವನ್ ಮಿಷನ್' ಪೂರ್ಣಗೊಳಿಸಲು ಕೇಂದ್ರ ಸಚಿವರ ಸಲಹೆ

Update: 2021-07-13 13:24 IST

ಬೆಂಗಳೂರು, ಜು.13: ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಇಂದು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಜಲಜೀವನ್ ಮಿಷನ್ ಯೋಜನೆಯ ಪ್ರಗತಿ ಪರಿಶೀಲಿಸಿದರು.

ಕರ್ನಾಟಕದ ಜಲಜೀವನ್ ಮಿಷನ್ ಕಾರ್ಯಕ್ರಮವನ್ನು ನಿಗದಿತ ಅವಧಿಯೊಳಗೇ ಪೂರ್ಣಗೊಳಿಸುವಂತೆ ಕೇಂದ್ರ ಸಚಿವರು ಸಲಹೆ ನೀಡಿದರು. ಜಲಜೀವನ್ ಮಿಷನ್ ಯೋಜನೆ ಮೂಲಕ 2024ರ ವೇಳೆಗೆ ದೇಶದ 18.93 ಕೋಟಿ ಗ್ರಾಮೀಣ ಮನೆಗಳಲ್ಲಿ 15.70 ಕೋಟಿ ಮನೆಗಳಿಗೆ ಕ್ರಿಯಾತ್ಮಕ ನಳ ಸಂಪರ್ಕ ನೀಡುವ ಗುರಿ ಹೊಂದಲಾಗಿದೆ. ಈ ಯೋಜನೆಯಡಿ ಕೇವಲ ಸೌಲಭ್ಯ ಕಲ್ಪಿಸುವುದು ಮಾತ್ರವಲ್ಲ, ನಿರಂತರವಾಗಿ ಕುಡಿಯುವ ನೀರು ಒದಗಿಸುವುದು ಸರ್ಕಾರದ ಆದ್ಯತೆ. ಅಂತೆಯೇ ರಾಜ್ಯದಲ್ಲಿ ಆದ್ಯತಾ ಜಿಲ್ಲೆಗಳಾದ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಕ್ರಿಯಾತ್ಮಕ ನಳ ಸಂಪರ್ಕಗಳನ್ನು ಆದ್ಯತೆಯ ಮೇರೆಗೆ ಒದಗಿಸುವಂತೆ ಸಚಿವರು ತಿಳಿಸಿದರು.

ನಳ ಸಂಪರ್ಕ ನೀಡುವುದರೊಂದಿಗೆ ಪೂರೈಸುವ ನೀರಿನ ಗುಣಮಟ್ಟವನ್ನೂ ಖಾತರಿ ಪಡಿಸುವಂತೆ ಸಚಿವರು ಸಲಹೆ ನೀಡಿದರು.

ರಾಜ್ಯದಲ್ಲಿ ಯೋಜನೆಯ ಪ್ರಗತಿಯ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯದ 91.19 ಲಕ್ಷ ಗ್ರಾಮೀಣ ಕುಟುಂಬಗಳಿಗೆ ತಲಾ 55 ಎಲ್ ಪಿಸಿಡಿ ಶುದ್ಧನೀರು ಒದಗಿಸುವ ಗುರಿ ಇದೆ. ಈ ಯೋಜನೆಯಡಿ 2021-22ನೇ ಆರ್ಥಿಕ ವರ್ಷದಲ್ಲಿ 25.17 ಲಕ್ಷ ಮನೆಗಳಿಗೆ ಕ್ರಿಯಾತ್ಮಕ ನಳ ಸಂಪರ್ಕ ಒದಗಿಸಲು ಉದ್ದೇಶಿಸಲಾಗಿದೆ. 2022-23ರಲ್ಲಿ 27.15 ಲಕ್ಷ ಹಾಗೂ 2023 ಡಿಸೆಂಬರ್ ಅಂತ್ಯದ ವೇಳೆಗೆ 10.72 ಲಕ್ಷ ಮನೆಗಳಿಗೆ ಕ್ರಿಯಾತ್ಮಕ ನಳ ಸಂಪರ್ಕ ಒದಗಿಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.

ಆದ್ಯತಾ ಜಿಲ್ಲೆಗಳಾದ ರಾಯಚೂರು ಜಿಲ್ಲೆಗೆ 2,000 ಕೋಟಿ ರೂ. ವೆಚ್ಚದಲ್ಲಿ ಬಹುಗ್ರಾಮ ಯೋಜನೆ ರೂಪಿಸಲಾಗಿದ್ದು, ಸಚಿವ ಸಂಪುಟ ಅನುಮೋದನೆ ನೀಡಲಾಗಿದೆ. ಶೀಘ್ರವೇ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಲಿದೆ. ಯಾದಗಿರಿ ಜಿಲ್ಲೆಯಲ್ಲೂ ಬಹುಗ್ರಾಮ ಯೋಜನೆ ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ವಿವರಿಸಿದರು.

ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News