ಸಾಮಾಜಿಕ ಜಾಲತಾಣ ಪೋಸ್ಟ್‌ ಗಳ ವಿರುದ್ಧ ದೇಶದ್ರೋಹ ಪ್ರಕರಣ: ಕರ್ನಾಟಕಕ್ಕೆ ಅಗ್ರಸ್ಥಾನ

Update: 2021-07-13 14:17 GMT
Photo: Indianexpress

ಬೆಂಗಳೂರು: 2010 ಮತ್ತು 2020ರ ನಡುವೆ ಕರ್ನಾಟಕದಲ್ಲಿ ಒಟ್ಟು 204 ಮಂದಿಯ ವಿರುದ್ಧ ೫೩ ದೇಶದ್ರೋಹ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ 20 ಪ್ರಕರಣಗಳನ್ನು 42 ಮಂದಿಯ ವಿರುದ್ಧ ಅವರು ಸಾಮಾಜಿಕ ತಾಣದಲ್ಲಿ ಪ್ರಕಟಿಸಿದ್ದ ಪೋಸ್ಟ್‌ ಗಳ ಕುರಿತು ದಾಖಲಿಸಲಾಗಿದೆ ಎಂದು article14 ವೆಬ್‌ ಸೈಟ್‌ ತಿಳಿಸಿದೆ. ಈ ವೆಬ್‌ ಸೈಟ್‌ ಗಾಗಿ ಮೋಹಿತ್‌ ರಾವ್‌ ವರದಿ ತಯಾರಿಸಿದ್ದಾರೆ. 

article14 ವೆಬ್‌ ಸೈಟ್‌, ಭಾರತದಲ್ಲಿ ಜನವರಿ 2010 ಮತ್ತು ಫೆಬ್ರವರಿ 2021 ರ ನಡುವೆ ದಾಖಲಾದ ದೇಶದ್ರೋಹ ಪ್ರಕರಣಗಳನ್ನು ಮಾಧ್ಯಮ, ಪೊಲೀಸ್‌ ಹಾಗೂ ಕಾನೂನು ಮೂಲಗಳನ್ನು ಬಳಸಿಕೊಂಡು ತಮ್ಮ ಡಾಟಾ ಬೇಸ್‌ ನಲ್ಲಿ ದಾಖಲಿಸಿಕೊಳ್ಳುತ್ತಿದೆ.

ದೇಶದ್ರೋಹ ಪ್ರಕರಣ ದಾಖಲಾಗಿರುವ ಜನರ ಸಂಖ್ಯೆಗೆ ಅನುಗುಣವಾಗಿ ಕರ್ನಾಟಕವು ಭಾರತದಲ್ಲಿ ಮೊದಲ ಸ್ಥಾನದಲ್ಲಿದ್ದರೆ ಒಟ್ಟು ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಮೊದಲ ಸ್ಥಾನ ಪಡೆದುಕೊಂಡಿದೆ. ಸಾಮಾಜಿಕ ತಾಣದಲ್ಲಿ ಪೋಸ್ಟ್‌ ಮಾಡಿದ್ದಕ್ಕೆ, ಕಮೆಂಟ್‌ ಮಾಡಿದ್ದಕ್ಕೆ ಈ ಪ್ರಕರಣಗಳನ್ನು ದಾಖಲಿಸಲಾಗಿದೆ.

ಆರ್ಟಿಕಲ್‌ 14 ರ ಡಾಟಾಬೇಸ್‌ ಪ್ರಕಾರ, ಆಡಿಯೋ, ಫೋಟೊ, ವೀಡಿಯೋ ಹಾಗೂ ಬರಹಗಳನ್ನು ಪೋಸ್ಟ್‌ ಮಾಡಿದ್ದಕ್ಕೆ 152 ಮಂದಿಯ ವಿರುದ್ಧ 102 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ 55.9% ಪಾಲು ಕರ್ನಾಟಕ ಮತ್ತು ಉತ್ತರಪ್ರದೇಶದ್ದಾಗಿದೆ ಎಂದು ವರದಿ ತಿಳಿಸಿದೆ.

ಆರ್ಟಿಕಲ್‌ 14 ಈ ಕುರಿತು ಮೂರು ಸರಣಿಗಳನ್ನು ಪ್ರಕಟಿಸಲಿದ್ದು, ಕರ್ನಾಟಕದಲ್ಲಿ 151 ವರ್ಷ ಹಳೆಯ ದೇಶದ್ರೋಹ ಪ್ರಕರಣವನ್ನು ಸಾಮಾಜಿಕ ಮಾಧ್ಯಮಕ್ಕೆ ಅನ್ವಯಿಸಿದ ಕುರಿತು ಪ್ರಥಮ ಸರಣಿಯಲ್ಲಿ ವಿವರಿಸಲಾಗಿದೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುತೇಕ ಮುಸ್ಲಿಮರು ಸಾಲದ ಸುಳಿಯಲ್ಲಿ ಸಿಲುಕುವುದು, ಕೆಲಸ ಕಳೆದುಕೊಳ್ಳುವುದು ಮುಂತಾದ ಕಷ್ಟನಷ್ಟಗಳನ್ನು ಅನುಭವಿಸಿದ್ದಾರೆಂದು ತಿಳಿದು ಬಂದಿದೆ.

ಸುಪ್ರೀಂ ಕೋರ್ಟ್‌ ನಲ್ಲಿ ದೇಶದ್ರೋಹ ಕಾನೂನಿನ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ರಿಟ್‌ ಅರ್ಜಿ ಸಲ್ಲಿಸಿ 137 ದಿನಗಳು ಕಳೆದಿವೆ. ದೇಶದ್ರೋಹ ಪ್ರಕರಣದಡಿಯಲ್ಲಿ ಬಂಧಿಸಲ್ಪಟ್ಟ ಕಿಶೋರ್‌ ಚಂದ್ರ ವಾಂಗ್ಚೆಮ್‌ ಹಾಗೂ ಕನ್ಹಯ್ಯಾ ಲಾಲ್‌ ಶುಕ್ಲಾ ಎಂಬ ಇಬ್ಬರು ಈ ಅರ್ಜಿಯನ್ನು ಸಲ್ಲಿಸಿದವರಾಗಿದ್ದಾರೆ. ಏಶ್ಯನ್‌ ಸ್ಕೂಲ್‌ ಆಫ್‌ ಜರ್ನಲಿಸಂನ ಚೇರ್‌ ಮ್ಯಾನ್‌ ಹಾಗೂ ಏಶ್ಯಾನೆಟ್‌ ಸ್ಥಾಪಕ ಶಶಿ ಕುಮಾರ್‌ ಕೂಡಾ ಈ ಅರ್ಜಿಯಲ್ಲಿ ಮಧ್ಯಪ್ರವೇಶಿಸಿದ್ದರು. ಜುಲೈ 12, 2021ರಂದು ಪ್ರಕರಣವನ್ನು ಆಲಿಸಲು ತೀರ್ಮಾನಿಸಲಾಗಿತ್ತು. ಆದರೆ ಇದೀಗ ಜುಲೈ 27ಕ್ಕೆ ಮುಂದೂಡಲಾಗಿದೆ.

ಕಳೆದ ಐದು ವರ್ಷಗಳಲ್ಲಿ ದೇಶದ್ರೋಹ ಕಾನೂನಿಗೆ ಸಂಬಂಧಿಸಿ ಎರಡು ಸಾಂವಿಧಾನಿಕ ಸವಾಲುಗಳನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿತ್ತು. 2016ರಲ್ಲಿ ವಕೀಲರು ಕೋರ್ಟ್‌ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು ಮತ್ತು ಪೊಲೀಸ್‌ ಮಹಾ ನಿರ್ದೇಶಕರಿಂದ ಪ್ರಮಾಣೀಕರಣವನ್ನೂ ಕೋರಲಾಗಿತ್ತು. "ದೇಶದ್ರೋಹ ಪ್ರಕರಣವು ಹಿಂಸಾಚಾರದ ಪ್ರಚೋದನೆಗೆ ಕಾರಣವಾಗುತ್ತದೆಯೇ? ಮತ್ತು ಸಾರ್ವಜನಿಕ ಅಸಮತೋಲನ ಸೃಷ್ಟಿಸುವ ಸಾಧ್ಯತೆಯಿದೆಯೇ? ಎಂದು ಪ್ರಶ್ನಿಸಿತ್ತು. ಖಾಸಗಿ ದೂರುಗಳು ದಾಖಲಾದ ಸಂದರ್ಭಗಳಲ್ಲಿ ಮ್ಯಾಜಿಸ್ಟ್ರೇಟ್‌ ನಿಂದ ಒಂದೇ ರೀತಿಯ ಪ್ರಮಾಣಪತ್ರವನ್ನೂ ಕೇಳಲಾಗಿತ್ತು. ಸುಪ್ರೀಂ ಕೋರ್ಟ್‌ ಈ ಅರ್ಜಿಯನ್ನು ತಿಸ್ಕರಿಸಿತ್ತು.

2021ರಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎಸ್‌ಎ ಬೊಬ್ಡೆ ನೇತೃತ್ವದ ನ್ಯಾಯಪೀಠವು ದೇಶದ್ರೋಹದ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಮೂವರು ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತು. ಇಂಟರ್ನೆಟ್‌ ಬಳಕೆಯು ಹೆಚ್ಚಾದ ಸಂದರ್ಭದಲ್ಲಿ ಮತ್ತು ಜನರ ಖಾಸಗಿ ಆಲೋಚನೆಗಳು ಸಾರ್ವಜನಿಕವಾಗಿ ಸಾಮಾಜಿಕ ತಾಣದಲ್ಲಿ ಪ್ರಕಟಗೊಳ್ಳುವುದನ್ನು ಪೊಲೀಸರು ದೇಶದ್ರೋಹವೆಂದು ಪರಿಗಣಿಸಿದ ಸಂದರ್ಭದಲ್ಲಿ ಈ ಪ್ರಶ್ನೆಗಳು ಉದ್ಭವವಾಗಿದ್ದವು.

ಆರ್ಟಿಕಲ್ 14 ಕರ್ನಾಟಕದಾದ್ಯಂತ ದಾಖಲಾದ 32 ದೇಶದ್ರೋಹದ ಪ್ರಕರಣಗಳಲ್ಲಿ ಆರೋಪಿ ಅಥವಾ ಅವರ ವಕೀಲರನ್ನು ಸಂಪರ್ಕಿಸಿದೆ. ಜನವರಿ ಮತ್ತು ಫೆಬ್ರವರಿಯಲ್ಲಿ ಅವರ ಮನೆಗಳಿಗೆ ಭೇಟಿ ಸೇರಿದಂತೆ 25 ಪ್ರಕರಣಗಳಲ್ಲಿ ವಿವರವಾದ ಸಂದರ್ಶನಗಳನ್ನು ನಡೆಸಲಾಗಿತ್ತು.

ಕರ್ನಾಟಕದಲ್ಲಿ, ಸಾಮಾಜಿಕ ಮಾಧ್ಯಮಕ್ಕೆ ಸಂಬಂಧಿಸಿದ 20 ದೇಶದ್ರೋಹ ಪ್ರಕರಣಗಳಲ್ಲಿ ಒಂಬತ್ತು ಪ್ರಕರಣಗಳು ಗ್ರಾಮೀಣ ಅಂತರ್ಜಾಲ ಬಳಕೆದಾರರ ವಿರುದ್ಧವೆ ದಾಖಲಾಗಿದೆ.

ಹೆಚ್ಚಿನವರು ಮೊದಲ ಬಾರಿಗೆ ಸ್ಮಾರ್ಟ್‌ ಫೋನ್‌ ಬಳಕೆದಾರರಾಗಿದ್ದರು. ಸ್ಥಳೀಯ ಮೊಬೈಲ್ ಅಂಗಡಿಯವರು ಮೊಬೈಲ್‌ ಕೊಳ್ಳುವ ವೇಳೆ  ಫೇಸ್‌ಬುಕ್, ವಾಟ್ಸಾಪ್ ಮತ್ತು ಯುಟ್ಯೂಬ್‌ನಲ್ಲಿ ಡೌನ್‌ಲೋಡ್ ಮಾಡಿ ಖಾತೆಗಳನ್ನು ರಚಿಸಿದ್ದಾರೆ. ನಂತರ ಅಲ್ಲಿನ ಗ್ರಾಮಸ್ಥರನ್ನು ಫೇಸ್‌ಬುಕ್‌ನಲ್ಲಿ ‘ಸ್ನೇಹಿತರು’ ಎಂದು ಸೇರಿಸಲಾಯಿತು ಮತ್ತು ಹೊಸ ಸಂಖ್ಯೆಯನ್ನು ಗ್ರಾಮ ಮಟ್ಟದ ವಾಟ್ಸಾಪ್ ಗುಂಪುಗಳಿಗೆ ಸೇರಿಸಲಾಗಿತ್ತು ಎಂದು ವರದಿ ತಿಳಿಸಿದೆ.

ಹಲವರು ಇಂಗ್ಲಿಷ್ ಅಥವಾ ಕನ್ನಡವನ್ನು ಓದಲಾಗುವುದಿಲ್ಲ ಎಂದು ಹೇಳಿದ್ದು, ಅವರು ವಾಸ್ತವವಾಗಿ ಅನಕ್ಷರಸ್ಥರಾಗಿದ್ದಾರೆ. ಅವರು ಫೇಸ್‌ಬುಕ್‌ನ್ನು ಹೆಚ್ಚಾಗಿ ಲೈಕ್‌ ಒತ್ತಲು ಅಥವಾ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಲು ಬಳಸುತ್ತಿದ್ದರು ಎಂದು ವರದಿ ತಿಳಿಸಿದೆ.

ಆರ್ಟಿಕಲ್‌ 14 ದೇಶದ್ರೋಹ ಪ್ರಕರಣಗಳ ಡಾಟಾಬೇಸ್‌ ಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ. 

ಸಂಪೂರ್ಣ ಇಂಗ್ಲಿಷ್‌ ವರದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News