ಬೆಂಗಳೂರು: ಬೈಕ್ ಢಿಕ್ಕಿ; ಬಿಎಂಟಿಸಿ ಬಸ್ ನಿರ್ವಾಹಕನಿಗೆ ಗಾಯ
Update: 2021-07-13 20:32 IST
ಬೆಂಗಳೂರು, ಜು.13: ವೇಗವಾಗಿ ಬಂದ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬಿಎಂಟಿಸಿ ನಿರ್ವಾಹಕರೊಬ್ಬರು ಗಾಯಗೊಂಡಿರುವ ಘಟನೆ ವಿಜಯನಗರ ಬಳಿ ನಡೆದಿದೆ.
ಈ ಘಟನೆ ಜು.7ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ವಿಜಯನಗರ ಮುಖ್ಯರಸ್ತೆಯಲ್ಲಿ ಬಿಎಂಟಿಸಿ ಬಸ್ ನಿಲ್ಲಿಸಿ ನಿರ್ವಾಹಕ ಕೆಳಗೆ ಇಳಿದಿದ್ದಾರೆ. ಈ ವೇಳೆ ಏಕಾಏಕಿ ನುಗ್ಗಿದ ಬೈಕ್ ಸವಾರ, ನಿರ್ವಾಹಕನಿಗೆ ಢಿಕ್ಕಿ ಹೊಡೆದಿದ್ದಾನೆ. ಈ ದೃಶ್ಯವೂ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆ ಬಳಿಕ ಗಾಯಗೊಂಡಿದ್ದ ನಿರ್ವಾಹಕರನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ಪ್ರಾಣಪಾಯದಿಂದ ನಿರ್ವಾಹಕ ಪರಾಗಿದ್ದಾರೆ. ಈ ಸಂಬಂಧ ವಿಜಯನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.