ಬೆಂಗಳೂರು: ಫಾ.ಸ್ಟ್ಯಾನ್ ಸ್ವಾಮಿಗೆ ಶ್ರದ್ಧಾಂಜಲಿ, ಸಾರ್ವಜನಿಕ ಹಕ್ಕೊತ್ತಾಯ
ಬೆಂಗಳೂರು, ಜು.14: 'ಕರಾಳ ಯುಎಪಿಎ ವಿರೋಧಿ ಸಮಾನ ಮನಸ್ಕರ ವೇದಿಕೆ' ಆಶ್ರಯದಲ್ಲಿ ಇಂದು ಬೆಂಗಳೂರಿನಲ್ಲಿ ಫಾದರ್ ಸ್ಟ್ಯಾನ್ ಸ್ವಾಮಿಯವರಿಗೆ ಶ್ರದ್ಧಾಂಜಲಿ ಹಾಗೂ ಸಾರ್ವಜನಿಕ ಹಕ್ಕೊತ್ತಾಯದ ಬಹಿರಂಗ ಸಭೆ ನಡೆಯಿತು.
ಕೋವಿಡ್‌ನ ಕಟ್ಟುನಿಟ್ಟಿನ ನಿರ್ಬಂಧಗಳ ನಡುವೆಯೂ ಸುಮಾರು 150 ಜನ ವಿವಿಧ ಸಂಘಟನೆಗಳ ಕಾರ್ಯಕರ್ತರು-ಮುಖಂಡರು ಹಾಗೂ ಹಲವು ಗಣ್ಯರು ಸಭೆಯಲ್ಲಿ ಪಾಲ್ಗೊಂಡು, ಕರಾಳ ಯುಎಪಿಎ ಮತ್ತು ಎನ್‌ಐಎ ರದ್ದಾಗಬೇಕು, ಬಂಧಿತ ಹೋರಾಟಗಾರರ ಬಿಡುಗಡೆಯಾಗಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.
ಹಿರಿಯ ವಕೀಲ ಕೆ. ಬಾಲನ್ ಯುಎಪಿಎ ಮತ್ತು ಎನ್‌ಐಎ ಕುರಿತು ಮಾತನಾಡುತ್ತ, ಇದು ಈ ಮೊದಲಿನ ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿಯೇ ಕಾಯ್ದೆಯಾಗಿ ಬಂದಿದ್ದು, ಅದರೊಳಗೆ ಜಗತ್ತಿನಲ್ಲೆಲ್ಲೂ ಇಲ್ಲದಂಥ ಅತಿ ಕ್ರೂರವೂ, ಮಾನವೀಯತೆಗೆ ತದ್ವಿರುದ್ಧವೂ ಆದಂಥ ಮತ್ತಷ್ಟು ಕಲಂಗಳನ್ನು ಕಾಲಕಾಲಕ್ಕೆ ಸೇರಿಸಿದ್ದಲ್ಲದೆ, ಅದರ ನಿರಾತಂಕ ಜಾರಿಗಾಗಿ ಎನ್‌ಐಎ ತನಿಖಾ ಸಂಸ್ಥೆಯನ್ನೂ ಸ್ಥಾಪಿಸಲಾಯಿತು. ನಂತರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಇವುಗಳ ವ್ಯಾಪ್ತಿ ಮತ್ತು ಅಧಿಕಾರಗಳನ್ನು ಮತ್ತಷ್ಟು ಹಿಗ್ಗಿಸಿ ಇವತ್ತಿನ ಅಕರಾಳ ವಿಕರಾಳ ಸ್ವರೂಪಕ್ಕೆ ತಂದಿಟ್ಟಿದೆ. ಈ ಎಲ್ಲ ಪಕ್ಷಗಳಿಗೂ ನೆಲ-ಜಲ-ಖನಿಜ ಮೊದಲ್ಗೊಂಡು ದೇಶದ ಸಕಲ ಸಂಪತ್ತನ್ನೂ ದೊಡ್ಡ ಬಂಡವಾಳಿಗ ಕಾರ್ಪೊರೇಟ್ ಶಕ್ತಿಗಳಿಗೆ ಬಿಡಿಗಾಸಿಗೆ ಧಾರೆ ಎರೆಯುವುದು ಹಾಗೂ ಅದನ್ನು ವಿರೋಧಿಸುವ ಆದಿವಾಸಿ-ದಲಿತ-ಅಲ್ಪಸಂಖ್ಯಾತ ಮತ್ತಿತರ ಸಮುದಾಯಗಳು ಮತ್ತು ಪ್ರಜಾತಾಂತ್ರಿಕ ಸಂಘಟನೆಗಳನ್ನು ಬಗ್ಗುಬಡಿಯುವುದಕ್ಕಾಗಿ ಇಂತಹ ಘೋರ ಕಾಯ್ದೆ ಅಗತ್ಯವಾಗಿದೆ ಎಂದರು.
ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ಸ್ಟ್ಯಾನ್ ಸ್ವಾಮಿಯಂಥ ಧೀಮಂತ ಸಂತನ ಕ್ರೂರ ಕೊಲೆಗೆ ಶ್ರದ್ಧಾಂಜಲಿ ಸಲ್ಲಿಸುವುದು ಮತ್ತು ಇಂತಹ ಕಾಯ್ದೆಗಳ ವಿರುದ್ಧ ಮಾತನಾಡುವುದು ಕೂಡ ದೇಶದ್ರೋಹ ಎಂಬಂಥ ಪ್ರಚಾರವನ್ನು ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ. ಈಗಾಗಲೇ ಅದರ ವಿವಿಧ ರೂಪಗಳಲ್ಲಿ ರದ್ದಾಗಿರುವ ಯುಎಪಿಎಯನ್ನು ಕೂಡಲೇ ರದ್ದು ಮಾಡುವಂತೆ ನಾವೆಲ್ಲರೂ ನಿರಂತರ ಹೋರಾಟ ಮಾಡದಿದ್ದರೆ ಈ ದೇಶದಲ್ಲಿ ಜನಸಾಮಾನ್ಯರಿಗೆ ಭವಿಷ್ಯವೇ ಇಲ್ಲದಂತಾಗುತ್ತದೆ. ನಮ್ಮ ಮುಂದಿನ ಪೀಳಿಗೆಗೆ ಈ ಲಾಭಬಡುಕರು ಏನನ್ನೂ ಉಳಿಸುವುದಿಲ್ಲ. ಯುಎಪಿಎ ಮತ್ತು ಎನ್‌ಐಎ ರದ್ದಾಗಲೇಬೇಕು ಎಂದು ಆಗ್ರಹಿಸಿದರು.
ಪಿಯುಸಿಎಲ್‌ನ ಪ್ರೊ. ವೈ.ಜೆ.ರಾಜೇಂದ್ರ ಮಾತನಾಡಿ, ವಿಚಾರಣೆಯಾಗಲಿ ಜಾಮೀನಾಗಲಿ ಇಲ್ಲದೆ, ಚಿಕಿತ್ಸೆಗೆ ಅವಕಾಶವನ್ನೂ ನೀಡದೆ, ಸ್ವಾಮಿ ಅವರನ್ನು ಅಮಾನುಷ ಹಿಂಸೆಗೆ ಈಡುಮಾಡಿ ಕೊಂದಿದ್ದರಲ್ಲಿ ಎನ್‌ಐಎ ಅಧಿಕಾರಿಗಳು ಮತ್ತು ಸ್ಥಳೀಯ ಕೋರ್ಟುಗಳು ಮಾತ್ರವಲ್ಲ, ಹೈಕೋರ್ಟಿನಂಥ ಉನ್ನತ ನ್ಯಾಯಾಲಯ ಕೂಡ ಭಾಗೀದಾರನಾಗಿದೆ. ಹೀಗಾಗಿ ಈ ಕುರಿತು ಉನ್ನತ ವಿಚಾರಣೆ ನಡೆದು ಎಲ್ಲ ತಪ್ಪಿತಸ್ಥರಿಗೂ ಶಿಕ್ಷೆಯಾಗಬೇಕು, ಯುಎಪಿಎ/ಎನ್‌ಐಎ ರದ್ದಾಗಬೇಕು, ಎಲ್ಲ ರಾಜಕೀಯ ಕೈದಿಗಳನ್ನೂ ಬೇಷರತ್ ಬಿಡುಗಡೆ ಮಾಡಬೇಕು ಎಂದು ಪಿಯುಸಿಎಲ್ ಆಗ್ರಹಿಸುತ್ತದೆ ಎಂದರು.
ಈ ಹಕ್ಕೊತ್ತಾಯಗಳು ಈಡೇರುವವರೆಗೂ ಹೋರಾಟ ರಾಜ್ಯದಾದ್ಯಂತ ನಡೆಯಬೇಕಿದೆ. ಅದಕ್ಕಾಗಿ ಇನ್ನೂ ವಿಸ್ತೃತವಾದ ಸಮಾಲೋಚನಾ ಸಭೆ ನಡೆಸಿ, ಬೃಹತ್ ಪ್ರತಿಭಟನಾ ಹೋರಾಟ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ಸಮಾನ ಮನಸ್ಕ ಸಂಘಟನೆಗಳೂ ಒಗ್ಗೂಡಬೇಕಿದೆ, ಜನಸಾಮಾನ್ಯರೂ ಸ್ವಯಂಪ್ರೇರಿತವಾಗಿ ಹೋರಾಟದಲ್ಲಿ ಭಾಗವಹಿಸಬೇಕಿದೆ ಎಂದು ಸಿರಿಮನೆ ನಾಗರಾಜ್ ಮನವಿ ಮಾಡಿದರು.
ದಲಿತ ಮುಖಂಡ ಎಸ್.ಗೋಪಾಲ್, ಪ್ರೊ. ಎನ್.ವಿ.ನರಸಿಂಹಯ್ಯ ಮಾತನಾಡಿ ಸ್ವಾಮಿಯವರ ಹತ್ಯೆಯನ್ನು ಖಂಡಿಸಿ, ಯುಎಪಿಎ ಮತ್ತು ಎನ್‌ಐಎ ರದ್ದತಿಗಾಗಿ ಒತ್ತಾಯಿಸಿದರು.
ಮಾನವ ಹಕ್ಕು ಕಾರ್ಯಕರ್ತ ಟಿ. ನರಸಿಂಹ ಮೂರ್ತಿ ಸ್ವಾಗತಿಸಿ, ವಂದಿಸಿದರು.