ವಂಚನೆ ಆರೋಪ: 3 ಕೋಟಿ ರೂ. ಮೌಲ್ಯದ ದುಬಾರಿ ಕಾರುಗಳ ವಶ; ಮೂವರು ಆರೋಪಿಗಳ ಬಂಧನ

Update: 2021-07-14 13:54 GMT

ಬೆಂಗಳೂರು, ಜು.14: ದುಬಾರಿ ಕಾರುಗಳ ಮಾಲಕರನ್ನು ನಂಬಿಸಿ ಕಾರನ್ನು ಪಡೆದು ಬೇರೆಯವರಿಗೆ ಅಡ ಇಟ್ಟು ಇಲ್ಲವೆ ಮಾರಾಟ ಮಾಡಿ ವಂಚಿಸುತ್ತಿದ್ದ ಮೂವರು ಖದೀಮರನ್ನು ಬಂಧಿಸಿ, 3 ಕೋಟಿ ರೂ.ಮೌಲ್ಯದ ಕಾರುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಬಂಧಿತ ಆರೋಪಿಗಳನ್ನು ಬೆಂಗಳೂರಿನ ನಸೀಬ್, ಮೊಹಮದ್ ಆಜಂ ಹಾಗೂ ಮಹೀರ್ ಖಾನ್ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆ ಸೇರಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ತಿಳಿಸಿದ್ದಾರೆ. 

ಆರೋಪಿಗಳು ಐಷಾರಾಮಿ ಕಾರುಗಳನ್ನು ಮಾರಾಟ ಮಾಡುವ ಮಾಲಕರನ್ನು ಪರಿಚಯಿಸಿಕೊಂಡು ಮಾರಾಟ ಮಾಡಿ ಕೊಡುವುದಾಗಿ ಬಣ್ಣದ ಮಾತುಗಳಿಂದ ನಂಬಿಸಿ ಕಾರು ಪಡೆದು ಪರಾರಿಯಾಗಿ ಬೇರೆಯವರಿಗೆ ಒತ್ತೆ ಇಟ್ಟು ಇಲ್ಲವೆ ಮಾರಾಟ ಮಾಡಿ ತಲೆ ಮರೆಸಿಕೊಳ್ಳುತ್ತಿದ್ದರು. ಆರೋಪಿಗಳು ಕಾರುಗಳನ್ನು ಮಾರಾಟ ಮಾಡುವುದು ಹಾಗೂ ಒತ್ತೆ ಇಡುವುದು ಮಾಲಕರಿಗೆ ಗೊತ್ತಾಗದಂತೆ ನಡೆಯುತ್ತಿದ್ದು, ಸುಮಾರು 20 ಮಂದಿ ಮಾಲಕರು ವಂಚನೆಗೊಳಗಾಗಿದ್ದರು. 

ಕಾರು ಕಳೆದುಕೊಂಡ ಮಾಲಕರೊಬ್ಬರು ನೀಡಿದ ದೂರು ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರ ತಂಡ ಖಚಿತ ಮಾಹಿತಿಯನ್ನಾಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News