×
Ad

ಬೆಂಗಳೂರು: ಅಪಹರಣಗೊಂಡ ಮಗು ಕಾನೂನು ಪ್ರಕಾರ ಪೋಷಕರ ಮಡಿಲಿಗೆ

Update: 2021-07-14 19:28 IST

ಬೆಂಗಳೂರು, ಜು.14: ಹುಟ್ಟುತ್ತಲೇ ಅಪಹರಿಸಿ ಹೆತ್ತವರಿಂದ ದೂರವಾಗಿದ್ದ ಮಗುವನ್ನು ಕೋರ್ಟ್ ಪ್ರಕ್ರಿಯೆ ಮುಕ್ತಾಯವಾದ ಬಳಿಕ ಕಾನೂನು ಪ್ರಕಾರ ಪೊಲೀಸರು ಮಗುವನ್ನು ಪೋಷಕರಿಗೆ ಹಸ್ತಾಂತರಿಸಲಿದ್ದಾರೆ. 

ಅಪಹರಣವಾದ ಮಗು ಸಿಕ್ಕ ಬಳಿಕ ಪೋಷಕರಿಗೆ ಒಪ್ಪಿಸಲು ಕಾನೂನು ತೊಡಕು ಉಂಟಾಗಿ ನ್ಯಾಯಾಲಯದ ಅನುಮತಿ ಮೇರೆಗೆ ನಡೆಸಿದ ಡಿಎನ್‍ಎ ಪರೀಕ್ಷೆಯ ವರದಿಯಲ್ಲಿ ಪಾದರಾಯನಪುರದ ಹುಸ್ನಾಬಾನು ದಂಪತಿಗೆ ಸೇರಿದ ಮಗು ಎಂದು ರುಜುವಾಗಿದೆ. 

ಎಫ್‍ಎಸ್‍ಎಲ್ ಅಧಿಕಾರಿಗಳು ನೀಡಿದ ಡಿಎನ್‍ಎ ವರದಿಯನ್ನು ಹೈಕೋರ್ಟ್ ಹಾಗೂ ಮಕ್ಕಳ ಕಲ್ಯಾಣ ಸಮಿತಿಗೆ ದಕ್ಷಿಣ ವಿಭಾಗದ ಪೊಲೀಸರು ಸಲ್ಲಿಸಿದ್ದಾರೆ. ನ್ಯಾಯಾಲಯದ ಪ್ರಕ್ರಿಯೆ ಮುಕ್ತಾಯದ ಬಳಿಕ ಕಾನೂನು ಪ್ರಕಾರ ಮಗು ಪೋಷಕರಿಗೆ ಹಸ್ತಾಂತರವಾಗಲಿದೆ.

ಮಗು ಕಳ್ಳತನ ಪ್ರಕರಣ ಸಂಬಂಧ ನಿಜವಾದ ಪೋಷಕರನ್ನು ಪತ್ತೆ ಹಚ್ಚುವಂತೆ ನ್ಯಾಯಾಲಯ ಸೂಚಿಸಿತ್ತು. ಅದರಂತೆ ಮಗು ಸೇರಿದಂತೆ ಐವರನ್ನು ಡಿಎನ್‍ಎ ಪರೀಕ್ಷೆಗೆ ಒಳಪಡಿಸಲಾಗಿತ್ತು. ಒಂದು ವರ್ಷದ ಮಗು, ಚಾಮರಾಜಪೇಟೆಯ ಪಾದರಾಯನಪುರದ ದಂಪತಿ ಉಸ್ಮಾಬಾನು-ನವೀದ್ ಪಾಷಾ ಹಾಗೂ ಕೊಪ್ಪಳ ಮೂಲದ ದಂಪತಿಯನ್ನು ಪರೀಕ್ಷೆ ನಡೆಸಲಾಗಿತ್ತು. ರಕ್ತದ ಮಾದರಿ ಸೇರಿ ಡಿಎನ್‍ಎಗೆ ಬೇಕಾದ ಎಲ್ಲ ರೀತಿಯ ಸ್ಯಾಂಪಲ್‍ಗಳನ್ನು ಸಂಗ್ರಹಿಸಿದ ವೈದ್ಯರು, ಪೊಲೀಸರ ಸೂಚನೆಯಂತೆ ಎಫ್‍ಎಸ್‍ಎಲ್‍ಗೆ ಕಳುಹಿಸಿದ್ದರು. 

ಏನಿದು ಪ್ರಕರಣ: ಪಾದರಾಯನಪುರದ ನವೀದ್ ಪಾಷ ಅವರ ಪತ್ನಿ ಹುಸ್ನಾಬಾನು ಕಳೆದ 2020ರ ಮೇ 29 ರಂದು ಚಾಮರಾಜಪೇಟೆ ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಶಿಶು ಜನಿಸಿದ ಎರಡು ಗಂಟೆಯಲ್ಲಿ ಆರೋಪಿತೆ ರಶ್ಮಿ ಮಗುವನ್ನು ಕದ್ದಿದ್ದಳು. ಕಳ್ಳತನವಾದ ದಿನದಂದೇ ಪೊಲೀಸರು ಮಗುವನ್ನು ಪತ್ತೆ ಹಚ್ಚಿದ್ದರು. 

ಪ್ರಕರಣ ಆರೋಪಿ ಉತ್ತರ ಕರ್ನಾಟಕದ ಮೂಲದ ರಶ್ಮಿ ಮಗುವನ್ನು ಕದ್ದು ಬೇರೆ ದಂಪತಿಗೆ ನೀಡಿ 15 ಲಕ್ಷ ರೂಪಾಯಿ ಪಡೆದುಕೊಂಡಿದ್ದಳು. ಮನೋವೈದ್ಯೆಯಾಗಿದ್ದ ಈಕೆ, ಬನ್ನೇರುಘಟ್ಟ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. 
ವಿಜಯನಗರದ ಆರೋಪಿಯು 2014ರಲ್ಲಿ ಹುಬ್ಬಳ್ಳಿಯ ಎಸ್‍ಡಿಎಂ ಆಸ್ಪತ್ರೆಯಲ್ಲಿ ಕೆಲಸ ಮಾಡುವಾಗ ಕೊಪ್ಪಳ ಮೂಲದ ದಂಪತಿಯ ಪರಿಚಯವಾಗಿತ್ತು. ದಂಪತಿ ಮಗಳಿಗೆ ಬುದ್ಧಿಮಾಂದ್ಯತೆ ಹಿನ್ನೆಲೆ ರಶ್ಮಿ ಬಳಿ ಚಿಕಿತ್ಸೆ ಕೊಡಿಸುತ್ತಿದ್ದರು. ಚಿಕಿತ್ಸೆ ನೀಡಿದರೂ ಪ್ರಯೋಜನವಾಗದ ಕಾರಣ ಪೋಷಕರು ಬೇಸತ್ತಿದ್ದರು. ಹೀಗಾಗಿ, ಮಗುವಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯೆ ರಶ್ಮಿ ಒಂದು ಉಪಾಯ ಮಾಡಿ, ನಿಮ್ಮದೇ ವೀರ್ಯಾಣು ಮತ್ತು ಅಂಡಾಣು ಪಡೆದು ಮತ್ತೊಂದು ಮಹಿಳೆಗೆ ಇಂಜೆಕ್ಟ್ ಮಾಡಿ ಮಗು ಜನಿಸಿದ ಬಳಿಕ ನಿಮಗೆ ನೀಡುತ್ತೇನೆ ಎಂದು ಹೇಳಿ ದಂಪತಿಯಿಂದ 15 ಲಕ್ಷಕ್ಕೆ ಡೀಲ್ ಮಾಡಿಕೊಂಡಿದ್ದಳು. ಮೇ 29 ರಂದು ಚಾಮರಾಜಪೇಟೆಯ ಸರಕಾರಿ ಆಸ್ಪತ್ರೆಗೆ ಆಟೋದಲ್ಲಿ ಬಂದು ಹುಸ್ನಾಬಾನುವಿನ ನವಜಾತ ಶಿಶುವನ್ನು ಕ್ಷಣಾರ್ಧದಲ್ಲಿ ಅಪಹರಿಸಿ ಪರಾರಿಯಾಗಿದ್ದಳು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News