×
Ad

ಬಿಬಿಎಂಪಿ ತೆರಿಗೆ ಪಾವತಿ ಅವಧಿ ಮತ್ತಷ್ಟು ದಿನ ವಿಸ್ತರಿಸಲಿ: ಎಎಪಿ ಒತ್ತಾಯ

Update: 2021-07-15 22:21 IST

ಬೆಂಗಳೂರು, ಜು.15: ಕೋವಿಡ್ ಹಾಗೂ ಲಾಕ್‍ಡೌನ್‍ನಿಂದಾಗಿ ತತ್ತರಿಸಿರುವ ಬೆಂಗಳೂರಿನ ನಾಗರಿಕರಿಗೆ ಆಸ್ತಿ ತೆರಿಗೆ ಪಾವತಿಸಲು ಹೆಚ್ಚಿನ ಕಾಲಾವಕಾಶ ನೀಡುವ ಬದಲು ಆಸ್ತಿಯನ್ನು ಸೀಲ್ ಮಾಡಲು ಬಿಬಿಎಂಪಿ ಹೊರಟಿರುವುದು ಗಾಯದ ಮೇಲೆ ಬರೆ ಎಳೆಯುವಂತಾಗಿದೆ ಎಂದು ಆಮ್ ಆದ್ಮಿ ಪಕ್ಷದ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ರಾಜಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಇತರೆ ಭಾಗಗಳಿಗಿಂತ ಬೆಂಗಳೂರಿನಲ್ಲಿ ಕೋವಿಡ್ ಪರಿಣಾಮ ಭೀಕರವಾಗಿತ್ತು. ಮೊದಲ ಹಾಗೂ ಎರಡನೇ ಅಲೆಯ ಲಾಕ್‍ಡೌನ್‍ನಿಂದಾಗಿ ಬೆಂಗಳೂರು ತತ್ತರಿಸಿಹೋಗಿದೆ. ಹಾಗೂ ಸಾಕಷ್ಟು ಉದ್ಯೋಗವಿಲ್ಲದೆ ಕುಟುಂಬ ನಿರ್ವಹಣೆಗೂ ಪರದಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಆಸ್ತಿ ತೆರಿಗೆ ಪಾವತಿಸದವರ ಆಸ್ತಿಗಳನ್ನು ಸೀಲ್ ಮಾಡುವಂತೆ ಮುಖ್ಯ ಆಯುಕ್ತ ಗೌರವ್ ಗುಪ್ತ ಆದೇಶಿಸಿರುವುದು ಖಂಡನೀಯ ಎಂದರು.

ದೀರ್ಘಕಾಲದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ವಿರುದ್ಧ ಸರಕಾರ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಿ. ಆದg, ಕೋವಿಡ್ ಬಂದ ನಂತರದ ಅವಧಿಯಲ್ಲಿನ ಬಾಕಿಯನ್ನು ಪಾವತಿಸದವರಿಗೆ ಕಾಲಾವಕಾಶ ನೀಡಬೇಕು. ಕಮರ್ಷಿಯಲ್ ಆಸ್ತಿ ತೆರಿಗೆ ಪಾವತಿಸಲು ಆರು ತಿಂಗಳು ಹಾಗೂ ರೆಸಿಡೆನ್ಸಿಯಲ್ ಆಸ್ತಿ ತೆರಿಗೆ ಪಾವತಿಸಲು ಒಂದು ವರ್ಷ ಕಾಲಾವಕಾಶ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಸುಮಾರು ಹತ್ತು ಲಕ್ಷ ಬಾಡಿಗೆ ಮನೆಗಳು ಖಾಲಿಯಾಗಿ ಮನೆ ಮಾಲಕರು ತೊಂದರೆ ಅನುಭವಿಸುತ್ತಿದ್ದಾರೆಂದು ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ನೀಡಿದ್ದಾರೆ. ಇವೆಲ್ಲ ತಿಳಿದಿದ್ದರೂ ಆಸ್ತಿ ತೆರಿಗೆ ಪಾವತಿದಾರರ ಮೇಲೆ ಬಿಬಿಎಂಪಿ ದರ್ಪ ತೋರುತ್ತಿರುವುದು ಅಮಾನವೀಯ. ತೆರಿಗೆ ವಸೂಲಿ ಮಾಡುವುದೊಂದನ್ನೇ ಗುರಿ ಮಾಡಿಕೊಳ್ಳುವ ಬದಲು ಮಾನವೀಯತೆಯನ್ನು ಬಿಬಿಎಂಪಿ ಕಲಿಯಬೇಕಿದೆ ಎಂದು ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಎಎಪಿ ನಾಯಕಿ ಪುಷ್ಪಾ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News