ಬೆಂಗಳೂರು: ಫೇಸ್‍ಬುಕ್‍ನಲ್ಲಿ ಜನರ ಸಮಸ್ಯೆಗೆ ಸ್ಪಂದಿಸಿದ ಕಮಲ್ ಪಂತ್

Update: 2021-07-17 18:20 GMT

ಬೆಂಗಳೂರು, ಜು.17: ಸಾಮಾಜಿಕ ಜಾಲತಾಣ ಫೇಸ್‍ಬುಕ್‍ನಲ್ಲಿ ನೇರವಾಗಿ ಸಾರ್ವಜನಿಕರಿಂದ ಸಮಸ್ಯೆಗಳನ್ನು ಆಲಿಸಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಸೂಕ್ತ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದರು.

ವಿಡಿಯೊ ಸಂವಾದದಲ್ಲಿ ನಗರದ ನಿವಾಸಿಯೊಬ್ಬರು ತಮ್ಮ ಪೋಷಕರು ಚೆನ್ನೈನಲ್ಲಿದ್ದು, ನಗರಕ್ಕೆ ಕರೆದುಕೊಂಡು ಬರಬಹುದೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಆಯುಕ್ತರು, ಅನಿವಾರ್ಯವಿದ್ದರೆ ಮಾತ್ರ ಕರೆತನ್ನಿ. ಇಲ್ಲವೆಂದಾದರೆ ಕೆಲ ಸಮಯದ ನಂತರ ಕರೆದುಕೊಂಡು ಬನ್ನಿ ಎಂದು ಸಲಹೆ ನೀಡಿದರು.

ಇದೇ ವೇಳೆ ಪೊಲೀಸ್ ವಸತಿ ಸಂಕೀರ್ಣ ಶಿಥಿಲಗೊಂಡಿರುವ ಬಗ್ಗೆ ನಾಗರಿಕರೊಬ್ಬರು ಆಯುಕ್ತರ ಗಮನ ಸೆಳೆದಾಗ, ಹೊಸದಾಗಿ ಪೊಲೀಸ್ ವಸತಿ ಗೃಹ ನಿರ್ಮಾಣವಾಗುತ್ತಿದೆ ಎಂದು ನುಡಿದರು.

ಇತ್ತೀಚೆಗೆ ತಳ್ಳುಗಾಡಿಯವರು ಧ್ವನಿವರ್ಧಕಗಳನ್ನು ಬಳಸುತ್ತಾ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಇದರ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಹಲವರು ಕೇಳಿಕೊಂಡರು. ಧ್ವನಿವರ್ಧಕ ಬಳಸುವುದು ಕಾನೂನಿಗೆ ವಿರುದ್ಧ. ಮುಂದಿನ ದಿನಗಳಲ್ಲಿ ಅದರ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಅಪಾರ್ಟ್‍ಮೆಂಟ್‍ಗಳಲ್ಲಿ ಮನೆ ಕೆಲಸಗಾರರನ್ನು ಒಳಗೆ ಬಿಡುತ್ತಿಲ್ಲ ಎಂದು ಆಯುಕ್ತರ ಬಳಿ ಅಳಲು ತೋಡಿಕೊಂಡಾಗ ಇದು ಕೋವಿಡ್ ಸಮಯವಾಗಿರುವುದರಿಂದ ಸುರಕ್ಷತಾ ನಿಯಮ ಪಾಲಿಸಬೇಕು ಎಂದು ಉತ್ತರ ನೀಡಿದರು.

ಹೀಗೆ, ಹಲವಾರು ನಾಗರಿಕರು ತಮ್ಮ ತಮ್ಮ ಸಮಸ್ಯೆಗಳನ್ನು ಆಯುಕ್ತರ ಬಳಿ ಹೇಳಿಕೊಂಡು ಉತ್ತರ ಪಡೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News