ಬೆಂಗಳೂರು: 2 ಕೋಟಿ ಮೌಲ್ಯದ ಗಾಂಜಾ ಎಣ್ಣೆ ಜಪ್ತಿ, ಇಬ್ಬರ ಬಂಧನ
ಬೆಂಗಳೂರು, ಜು.17: ಮಾದಕ ವಸ್ತು ಸಾಗಾಟ ಆರೋಪ ಸಂಬಂಧ ಇಬ್ಬರನ್ನು ಬಂಧಿಸಿರುವ ಆಗ್ನೇಯ ವಿಭಾಗದ ಪೊಲೀಸರು 2 ಕೋಟಿ ರೂ. ಮೌಲ್ಯದ ಗಾಂಜಾ ಎಣ್ಣೆ ಜಪ್ತಿ ಮಾಡಿದ್ದಾರೆ.
ಕೇರಳದ ಮಲ್ಲಾಪುರಂನ ಪಾರಿ ಅಜೀಂ(25), ಹುಳಿಮಾವು ನಿವಾಸಿ ಇರ್ಫಾನ್(24) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಅವರು ತಿಳಿಸಿದರು.
ಬಂಧಿತ ಆರೋಪಿಗಳು ಐಷಾರಾಮಿ ಜೀವನ ಸಾಗಿಸಲು ಗಾಂಜಾ ಎಣ್ಣೆಯನ್ನು ಆಂಧ್ರದಿಂದ ನಗರಕ್ಕೆ ತಂದು ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳು, ಐಟಿ-ಬಿಟಿ ಕಂಪೆನಿಯ ನೌಕರರಿಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.
ಸುದ್ದಗುಂಟೆ ಪಾಳ್ಯದ ಬಳಿ ಗ್ರಾಹಕರಿಗೆ ಗಾಂಜಾ ಎಣ್ಣೆ ಮಾರಾಟ ಮಾಡಲು ಆರೋಪಿಗಳು ಬರುತ್ತಿದ್ದ ಖಚಿತ ಮಾಹಿತಿಯಾಧರಿಸಿ ಸುದ್ದಗುಂಟೆ ಪಾಳ್ಯ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ಆರೋಪಿಗಳಿಂದ 2 ಕೋಟಿ ರೂ. ಮೌಲ್ಯದ 4 ಕೆಜಿ ಗಾಂಜಾ ಎಣ್ಣೆಯನ್ನು ವಶಪಡಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.