ಬೆಂಗಳೂರು: ಎಲ್ಲ `ರಾಜಕೀಯ ಕೈದಿಗಳನ್ನು ಬೇಷರತ್ ಬಿಡುಗಡೆ' ಮಾಡಬೇಕೆಂದು ಆಗ್ರಹಿಸಿ ಪ್ರದರ್ಶನ
ಬೆಂಗಳೂರು, ಜು. 17: `ಫಾದರ್ ಸ್ಟ್ಯಾನ್‍ಸ್ವಾಮಿಯವರ ಸಾವು ಸಾಂಸ್ಥಿಕ ಕೊಲೆಯಲ್ಲದೆ ಮತ್ತೇನು ಅಲ್ಲ' ಎಂದು ಆರೋಪಿಸಿ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿನ ಸಿಟಿ ಸಿವಿಲ್ ಕೋರ್ಟ್ ಬಳಿ `ಇಂಡಿಯಾನ್ ಅಸೋಷಿಯೇಷನ್ ಆಫ್ ಲಾಯರ್ಸ್, ಆಲ್ ಇಂಡಿಯಾ ಲಾಯರ್ಸ್ ಅಸೋಷಿಯೇಷನ್ ಫಾರ್ ಜಸ್ಟೀಸ್, ಅಸೋಷಿಯೇಷನ್ ಫಾರ್ ಪ್ರೊಟೆಕ್ಷನ್ ಸಿವಿಲ್ ರೈಟ್ಸ್-ಕರ್ನಾಟಕ ಘಟಕ'ದ ಕಾರ್ಯಕರ್ತರು ಹಾಗೂ ವಕೀಲರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಮಧ್ಯಾಹ್ನ ಪ್ರತಿಭಟನೆ ನಡೆಸಿ ನ್ಯಾಯವಾದಿಗಳು, `ಕೇಂದ್ರ ಸರಕಾರದ ದಮನಕಾರಿ ನೀತಿ'ಗಳನ್ನು ಖಂಡಿಸಿ ಧಿಕ್ಕಾರದ ಘೋಷಣೆ ಕೂಗಿದರು. ಅಲ್ಲದೆ, ಯುಎಪಿಎಲ್ ಸಹಿತ ದಮನಕಾರಿ ಕರಾಳ ಕಾನೂನುಗಳನ್ನು ರದ್ದುಪಡಿಸಿ, ಎಲ್ಲ ಪ್ರಗತಿಪರ ರಾಜಕೀಯ ಕೈದಿಗಳನ್ನು ಬೇಷರತ್ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಸ್ಟ್ಯಾನ್‍ಸ್ವಾಮಿಯವರ ವಿರುದ್ಧ ಎನ್‍ಐಎ ತನಿಖಾ ಸಂಸ್ಥೆಯು ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಸುಳ್ಳು ಆರೋಪದಲ್ಲಿ ಬಂಧಿಸಿದ್ದಲ್ಲದೆ ಅವರಿಗೆ ಅನಾರೋಗ್ಯವಿದ್ದರೂ ಜಾಮೀನು ನಿರಾಕರಿಸಿದ್ದು ಅಕ್ಷಮ್ಯ ಎಂದು ಖಂಡಿಸಿದರು.
`84 ವರ್ಷ ವಯಸ್ಸಿನ ಫಾದರ್ ಸ್ಟ್ಯಾನ್‍ಸ್ವಾಮಿಯವರನ್ನು 2020ರ ಅಕ್ಟೋಬರ್ 8ರಂದು ಬಂಧಿಸಿದ ನಂತರ, ತಲೋಜಾ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಅವರು ಪಾರ್ಕಿನ್ಸನ್ ಕಾಯಿಲೆ ಸೇರಿದಂತೆ ಇತರೆ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರಿಂದ, ಲೋಟ ಹಿಡಿದು ನೀರು ಕುಡಿಯುವುದು ಕಷ್ಟವಾಗಿತ್ತು. ಜೈಲು ಅಧಿಕಾರಿಗಳು ಸಿಪ್ಪರ್(ನೀರು ಕುಡಿಯಲು ಬಳಸುವ ಸಾಧನ)ನ್ನು ನಿರಾಕರಿಸಿದ್ದರಿಂದ, ನ್ಯಾಯಾಲಯಕ್ಕೆ ಹೋಗಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮೋದಿ-ಅಮಿತ್ ಶಾ ಆಡಳಿತವು ತಮ್ಮ ವಿರುದ್ಧ ಯಾವುದೇ ರೀತಿಯ ಭಿನ್ನಾಭಿಪ್ರಾಯ ವ್ಯಕ್ತಪಡಿಸುವವರನ್ನು ಜೈಲಿಗೆ ಕಳುಹಿಸುವುದಕ್ಕಾಗಿ ಭೀಮಾ ಕೋರೆಗಾಂವ್ ಪ್ರಕರಣವನ್ನು ಸಾಧನವನ್ನಾಗಿ ಮಾಡಿಕೊಂಡಿದ್ದಾರೆ. ಯಾವುದೇ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಲು ಅಪರಾಧ ಕಾನೂನು ಮತ್ತು ತನಿಖಾ ಸಂಸ್ಥೆಗಳು ಆಯುಧಗಳಾಗಿವೆ. ಯುಎಪಿಎಯು ಕಾನೂನಿನ ಮೂಲ ತತ್ವವನ್ನು ಅಳಿಸಿಹಾಕಿ ಜಾಮೀನೆ ಇಲ್ಲ, ಜೈಲೇ ಗತಿ ಎಂಬ ನಿಯಮ ಹುಟ್ಟುಹಾಕಿರುವುದು ಕೌರ್ಯವೇ ಸರಿ. ಕೂಡಲೇ ಎಲ್ಲ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.