×
Ad

ಅನ್ ಲಾಕ್ 4.0: ಜು.26ರಿಂದ ಉನ್ನತ ಶಿಕ್ಷಣ ಕಾಲೇಜುಗಳು ಪುನಾರಾರಂಭ

Update: 2021-07-18 13:13 IST

ಬೆಂಗಳೂರು, ಜು.18: ರಾಜ್ಯ ಸರಕಾರ ಜಾರಿಗೊಳಿಸಿರುವ ಅನ್ ಲಾಕ್ 3.0 ಜು.19ರಂದು ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ರವಿವಾರ ಬೆಳಗ್ಗೆ ಸಚಿವರು ಮತ್ತು ಅಧಿಕಾರಿಗಳ ಉನ್ನತಮಟ್ಟದ ಸಭೆ ನಡೆಯಿತು.

ಸಭೆಯಲ್ಲಿ ಜು.26ರಿಂದ ಪದವಿ ಕಾಲೇಜುಗಳಲ್ಲಿ ಭೌತಿಕ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.  

ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ಪಡೆದವರು ತರಗತಿಗಳಿಗೆ ಹಾಜರಾಗಲು ಅವಕಾಶ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ರಾತ್ರಿ ಕರ್ಫ್ಯೂ ಅವಧಿಯನ್ನು ಪರಿಷ್ಕರಿಸಲಾಗಿದ್ದು, ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ಮಾತ್ರ ಕರ್ಫ್ಯೂ ಇರಲಿದೆ. ಚಿತ್ರಮಂದಿರಗಳು ಮತ್ತು ರಂಗಮಂದಿರಗಳಲ್ಲಿ ಶೇಕಡ 50ರಷ್ಟು ಆಸನಗಳ ಭರ್ತಿಯೊಂದಿಗೆ ಪ್ರದರ್ಶನ ಆರಂಭಿಸಲು ಅನುಮತಿ ನೀಡಲಾಗಿದೆ. ದೇವಸ್ಥಾನಗಳಲ್ಲಿ ಜು.20ರಿಂದ ಪೂಜೆ, ಪುನಸ್ಕಾರಕ್ಕೂ ಅವಕಾಶ ಮಾಡಿಕೊಡಲಾಗಿದೆ ಎಂದು ಸಭೆಯ ಬಳಿಕ ಆರ್.ಅಶೋಕ್ ತಿಳಿಸಿದ್ದಾರೆ.

ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ: ಸಿ.ಎನ್.ಅಶ್ವತ್ಥ್ ನಾರಾಯಣ್, ಸಚಿವರಾದ ಆರ್.ಅಶೋಕ್, ಅರವಿಂದ ಲಿಂಬಾವಳಿ, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮೂರನೇ ಅಲೆ ಆತಂಕ: `ಕೋವಿಡ್ ಅನ್‍ಲಾಕ್-4 ಸಂಬಂಧ ತಜ್ಞರ ಸಮಿತಿ ಮಧ್ಯಂತರ ವರದಿ ಸಲ್ಲಿಸಿದ್ದು, ಈವರೆಗೂ ಪಬ್ ಮತ್ತು ಈಜುಕೊಳಗಳನ್ನು ತೆರೆಯಲು ಅವಕಾಶ ನೀಡಿಲ್ಲ, ಸಭೆ-ಸಮಾರಂಭಕ್ಕೆ ನಿರ್ಬಂಧ ಹೇರಲಾಗಿತ್ತು. ಈ ನಿಟ್ಟಿನಲ್ಲಿ ಇವುಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ಇತ್ತು. ಆದರೆ, ಈ ಬಗ್ಗೆ ಇದುವರೆಗೂ ಯಾವುದೇ ನಿರ್ಧಾರವನ್ನು ರಾಜ್ಯ ಸರಕಾರ ಪ್ರಕಟ ಮಾಡಿಲ್ಲ. ಅಲ್ಲದೆ, ಮದುವೆ ಹಾಗೂ ಇತರ ಸಮಾರಂಭಗಳಿಗೆ ಹಾಕಿರುವ ಮಿತಿಯನ್ನು ತೆರವುಗೊಳಿಸಲಾಗಿಲ್ಲ'.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, `ದೇವಸ್ಥಾನ, ಪೂಜಾ ಮಂದಿರಗಳಲ್ಲಿ ಕೋವಿಡ್ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸಿ ಪೂಜೆ ಮಾಡಲು ಮತ್ತು ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಲಾಕ್‍ಡೌನ್ ನಿಬರ್ಂಧಗಳನ್ನು ಹಂತ-ಹಂತವಾಗಿ ಸಡಿಲಗೊಳಿಸಲಾಗುತ್ತಿದೆ. ಆದರೆ, ಸಾರ್ವಜನಿಕರು ಸೋಂಕು ನಿಯಂತ್ರಣಕ್ಕೆ ಸೂಕ್ತ ಮುನ್ನಚ್ಚರಿಕೆ ವಹಿಸುವುದು ಅಗತ್ಯ' ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಸೇರಿದಂತೆ ವಿವಿಧ ಇಲಾಖೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News