ಡಾ.ಹೇಮಾ ದಿವಾಕರ್ ಗೆ ಐಎಂಎ 'ಡಾಕ್ಟರ್ಸ್ ಡೇ' ಪ್ರಶಸ್ತಿ ಪ್ರದಾನ
ಬೆಂಗಳೂರು, ಜು. 19: `ಖ್ಯಾತ ಪ್ರಸೂತಿ ತಜ್ಞೆ ಡಾ.ಹೇಮಾ ದಿವಾಕರ್ ಅವರ ಸಾಮಾಜಿಕ ಮತ್ತು ಸಾರ್ವಜನಿಕರಿಗೆ ನೀಡಿದ ಸೇವೆಗಳನ್ನು ಗುರುತಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಪ್ರತಿಷ್ಠಿತ `ಡಾಕ್ಟರ್ಸ್ ಡೇ' ಪ್ರಶಸ್ತಿಯನ್ನು ಸೋಮವಾರ ಇಂದಿಲ್ಲಿ ಪ್ರದಾನ ಮಾಡಲಾಯಿತು.
ಈ ಪ್ರಶಸ್ತಿಯನ್ನು ಐಎಂಎ ಅಧ್ಯಕ್ಷ ಡಾ.ಎಚ್.ಎನ್. ವಿನಯ್ ಮತ್ತು ವೈದ್ಯರ ದಿನಾಚರಣೆ ಸಮಿತಿ ಅಧ್ಯಕ್ಷ ಡಾ.ಮಧುಶಂಕರ್ ಎಲ್. ಅವರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ಮತ್ತು ಆರೋಗ್ಯ ಕ್ಷೇತ್ರದ ವಿವಿಧ ಸಾಧಕರ ಸಮ್ಮುಖದಲ್ಲಿ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಹೇಮಾ, ವಿನಮ್ರನಾಗಿ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದೇನೆ. ಪ್ರಶಸ್ತಿಯ ಮೂಲಕ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಬಣ್ಣಿಸಿದರು.
`ಸಮಾಜಕ್ಕೆ ಇನ್ನಷ್ಟು ಕೊಡುಗೆ ನೀಡುವ ಸಂಕಲ್ಪವನ್ನು ಈ ಸಂದರ್ಭದಲ್ಲಿ ಮಾಡುತ್ತೇನೆ. `ಮಹಿಳಾ ಆರೋಗ್ಯವು ರಾಷ್ಟ್ರದ ಸಂಪತ್ತು' ಎಂಬ ಧ್ಯೇಯವಾಕ್ಯದಂತೆ, ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಮಹಿಳೆಯರ ಜೀವನದ ಗುಣಮಟ್ಟವನ್ನು ಸುಧಾರಿಸಲು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುವ ನನ್ನ ಧ್ಯೇಯ ಸಾರ್ಥಕವಾಗಿದೆ. ಈ ಕೆಲಸವನ್ನು ಇನ್ನಷ್ಟು ಉತ್ಸಾಹದೊಂದಿಗೆ ಮುಂದುವರಿಸುತ್ತೇನೆ' ಎಂದು ಅವರು ತಿಳಿಸಿದರು.
`ಕೋವಿಡ್-19 ಸಾಂಕ್ರಾಮಿಕ ರೋಗವು ದೇಶಕ್ಕೆ ಅಪ್ಪಳಿಸಿದಾಗ ಅದರ ಮಾರ್ಗಸೂಚಿಗಳನ್ನು ಪಾಲಿಸಲು 4 ಸಾವಿರಕ್ಕೂ ಹೆಚ್ಚು ವೈದ್ಯರು, ದಾದಿಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗೆ, ವಿಶೇಷವಾಗಿ ಹೆರಿಗೆ ಆಸ್ಪತ್ರೆಗಳ ಸಿಬ್ಬಂದಿಗೆ ಪ್ರಮಾಣಿತ ತರಬೇತಿ ಕಾರ್ಯಕ್ರಮವನ್ನು ನಡೆಸಿದ್ದಲ್ಲದೆ, ಎಲ್ಲ ರೀತಿಯ ಸಂದೇಹ, ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗಿದೆ' ಎಂದು ಅವರು ಇದೇ ವೇಳೆ ಸ್ಮರಿಸಿದರು.