ಬೆಂಗಳೂರು: ಸುರಕ್ಷಿತ ಲಸಿಕಾ ಅಭಿಯಾನಕ್ಕೆ ರೈನ್ ಬೋ ಆಸ್ಪತ್ರೆ ಚಾಲನೆ
ಬೆಂಗಳೂರು, ಜು. 19: ನಗರದ ಹೆಬ್ಬಾಳ ಎಸ್ಟೀಮ್ ಮಾಲ್‍ನಲ್ಲಿ ಲಸಿಕಾ ಕೇಂದ್ರವನ್ನು ಸ್ಯಾಂಡಲ್‍ವುಡ್ ಖುಷಿ ರವಿ ಮತ್ತು ಬಿಗ್‍ಬಾಸ್ ವಿಜೇತ ಶಶಿಕುಮಾರ್ ಸೋಮವಾರ ಕೋವಿಡ್ ಲಸಿಕೆ ಪಡೆಯುವ ಮೂಲಕ ಲಸಿಕಾ ಆಂದೋಲನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಟಿ ಖುಷಿ ರವಿ, `ಈವರೆಗೆ ಕಂಪೆನಿಗಳಲ್ಲಿ, ಆಸ್ಪತ್ರೆಗಳಲ್ಲಿ ವ್ಯಾಕ್ಸಿನೇಶನ್ ಡ್ರೈವ್ ನಡೆಯುತ್ತಿತ್ತು. ಆದರೆ ಈಗ ಮಾಲ್‍ಗಳಲ್ಲೂ, ರೈನ್ ಬೋ ಆಸ್ಪತ್ರೆ ಲಸಿಕೆ ಅಭಿಯಾನ ಪ್ರಾರಂಭಿಸುತ್ತಿದೆ. ನಿಜಕ್ಕೂ ಇದು ಸಂತೋಷದ ವಿಷಯ. ನಾವು ರೈನ್ ಬೋ ಆಸ್ಪತ್ರೆಯವರಿಗೆ ಧನ್ಯವಾದ ಹೇಳಬೇಕು. ಕೋವಿಡ್‍ನಿಂದ ದೂರ ಉಳಿಯಲು ನಾವು ಲಸಿಕೆ ತೆಗೆದುಕೊಳ್ಳಲೇಬೇಕು' ಎಂದು ಹೇಳಿದರು.
ಬಿಗ್‍ಬಾಸ್ ವಿಜೇತ ಶಶಿಕುಮಾರ್ ಮಾತನಾಡಿ, `ಈ ಲಸಿಕಾ ಕೇಂದ್ರದಲ್ಲಿ ಕೇವಲ 5 ನಿಮಿಷದಲ್ಲಿ ಕೋವಿಡ್ ಲಸಿಕೆ ತೆಗೆದುಕೊಳ್ಳಬಹುದು. ಯಾವುದೇ ಉದ್ದನೆಯ ಸಾಲು ಇಲ್ಲ. ನಾವು ಕೋವಿಡ್‍ನಿಂದ ರಕ್ಷಣೆ ಮಾಡಬೇಕಾದರೆ ವ್ಯಾಕ್ಸಿನೇಶನ್ ಅನಿವಾರ್ಯ. ಹಾಗಾಗಿ ಎಲ್ಲರೂ ಈ ವ್ಯಾಕ್ಸಿನೇಶನ್ ಡ್ರೈವ್‍ನ ಉಪಯೋಗ ಪಡೆದುಕೊಳ್ಳಿ. ಇಷ್ಟೊಂದು ಸುವ್ಯವಸ್ಥಿತವಾಗಿ ಲಸಿಕೆ ದೊರೆಯುವಂತೆ ಮಾಡಿದ ರೈನ್ ಬೋ ಆಸ್ಪತ್ರೆಗೆ ಧನ್ಯವಾದ ಹೇಳುತ್ತೇನೆ' ಎಂದರು.
`ಸಂಭವನೀಯ 3ನೇ ಅಲೆಯಿಂದ ರಕ್ಷಣೆ ಪಡೆಯುವ ನಿಟ್ಟಿನಲ್ಲಿ ಲಸಿಕೆ ತೆಗೆದುಕೊಳ್ಳುವುದು ಅನಿವಾರ್ಯವಾಗಿದ್ದು, ಸಾರ್ವಜನಿಕರಿಗೆ ಸುಲಭವಾಗಿ ದೊರೆಯಲಿ ಎಂಬ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಾರ್ವಜನಿಕರು ಈ ಲಸಿಕಾ ಅಭಿಯಾನದ ಪ್ರಯೋಜನವನ್ನು ಅತ್ಯಂತ ಗರಿಷ್ಠ ಪ್ರಮಾಣದಲ್ಲಿ ಪಡೆದುಕೊಳ್ಳಬೇಕು. ಒಂದು ಮತ್ತು ಎರಡನೆ ಡೋಸ್ ಲಭ್ಯವಿದ್ದು, ಅತ್ಯಂತ ಸುರಕ್ಷಿತವಾಗಿ ವ್ಯಾಕ್ಸಿನ್ ಪಡೆಯಬಹುದಾಗಿದೆ' ಎಂದು ರೈನ್ ಬೋ ಆಸ್ಪತ್ರೆಯ ಕ್ಲಸ್ಟರ್‍ನ ಕಾರ್ಯನಿರ್ವಹಣಾ ಉಪಾಧ್ಯಕ್ಷ ಅಕ್ಷಯ್ ಹೇಳಿದರು. ಈ ಸಂದರ್ಭದಲ್ಲಿ ಎಸ್ಟೀಮ್ ಮಾಲ್‍ನ ಅಭಿಷೇಕ ಅಹುಜಾ ಉಪಸ್ಥಿತರಿದ್ದರು.