ತಹಶೀಲ್ದಾರರ ಕರ್ತವ್ಯಕ್ಕೆ ಅಡ್ಡಿ: ಮೂವರ ಬಂಧನ
Update: 2021-07-19 21:38 IST
ಬೆಂಗಳೂರು, ಜು.19: ತಹಶೀಲ್ದಾರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಮೂವರನ್ನು ಇಲ್ಲಿನ ತ್ಯಾಮಗೊಂಡ್ಲು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ರಾಜು, ಮಂಜುನಾಥ್, ರಂಗಸ್ವಾಮಿ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ನೆಲಮಂಗಲ ತಹಶೀಲ್ದಾರ್ ಕೆ.ಮಂಜುನಾಥ್ ಕರ್ತವ್ಯದ ನಿಮಿತ್ತ ತ್ಯಾಮಗೊಂಡ್ಲುಗೆ ತೆರಳುತ್ತಿದ್ದರು. ಈ ವೇಳೆ ಇವರು ರಸ್ತೆಯಲ್ಲಿ ಕಾರು, ಟೆಂಪೊ ನಿಲ್ಲಿಸಿಕೊಂಡು ಸಂಚಾರಕ್ಕೆ ಅಡ್ಡಿಗೊಳಿಸಿದ್ದರು. ಈ ವೇಳೆ ವಾಹನ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ದಂಡಾಧಿಕಾರಿ ಮಂಜುನಾಥ್ ಹೇಳಿದರೂ ಕೂಡ ಅವರ ಜೊತೆಗೆ ವಾಗ್ವಾದ ನಡೆಸಿದ್ದರು ಎನ್ನಲಾಗಿದೆ.
ಈ ಸಂಬಂಧ ತಹಶೀಲ್ದಾರ್, ದುಂಡಾವರ್ತನೆ, ಕರ್ತವ್ಯಕ್ಕೆ ಅಡ್ಡಿ, ಅವಾಚ್ಯ ಶಬ್ದ ಬಳಕೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.