×
Ad

ಬೀದಿ ವ್ಯಾಪಾರಿಗಳಿಗೆ ಶರತ್ತುಬದ್ಧ ಅನುಮತಿ: ಗೌರವ್ ಗುಪ್ತಾ

Update: 2021-07-19 22:27 IST

ಬೆಂಗಳೂರು, ಜು.19: ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಪೂರ್ಣಗೊಂಡ ಬಳಿಕ ಬೀದಿ ಬದಿ ವ್ಯಾಪಾರಿಗಳು ಕೆಲ ಶರತ್ತುಗಳನ್ನು ಅನುಸರಿಸಿದರೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದರು.

ಸೋಮವಾರ ಸ್ಮಾರ್ಟ್ ಸಿಟಿ ವತಿಯಿಂದ ಇಲ್ಲಿನ ಕೆಆರ್ ಮಾರುಕಟ್ಟೆಯ ಪುನರ್ ನವೀಕರಣ ಕಾಮಗಾರಿ ಪ್ರಗತಿ ಕುರಿತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸ್ಮಾರ್ಟ್ ಸಿಟಿ ಕಾಮಗಾರಿ ಪೂರ್ಣಗೊಂಡ ಬಳಿಕ ಪಾದಚಾರಿ ಮಾರ್ಗಗಳು ಮುಕ್ತವಾಗಿರಬೇಕು. ಜತೆಗೆ, ಬೀದಿ ಬದಿ ವ್ಯಾಪಾರಿಗಳು ಕಡ್ಡಾಯವಾಗಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಜನದಟ್ಟಣೆ ಆಗದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ, ಗೊಂದಲ ಉಂಟಾಗಿ, ಅವಕಾಶ ಕೈತಪ್ಪಲಿದೆ ಎಂದು ಎಚ್ಚರಿಕೆ ನೀಡಿದರು.

ಕೆಆರ್ ಮಾರುಕಟ್ಟೆಗೆ ಸ್ಮಾರ್ಟ್ ಸಿಟಿ ಯೋಜನೆ ಮೂಲಕ ಹೊಸ ರೂಪ ನೀಡಲಾಗುತ್ತಿದೆ. ಇಲ್ಲಿ ದಿನನಿತ್ಯ ಜನದಟ್ಟಣೆ ಹೆಚ್ಚಾಗಿರುವ ಕಾರಣ ತ್ವರಿತವಾಗಿಯೇ ರಸ್ತೆ, ಪಾದಚಾರಿ ಮಾರ್ಗ ಸೇರಿದಂತೆ ಇನ್ನಿತರೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು, ನಗರದ 28 ವಾರ್ಡ್‍ಗಳಲ್ಲಿ ಸ್ಪೆಷಾಲಿಟಿ ಆಸ್ಪತ್ರೆ (ಸೆಕೆಂಡರಿ ಹಾಸ್ಪಿಟಲ್) ಹಾಗೂ ನಾಲ್ಕು ಕಡೆಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆರಂಭಿಸಲು 1 ಸಾವಿರ ಕೋಟಿ ರೂಪಾಯಿ ಯೋಜನೆಗೆ ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಕಾಮಗಾರಿ ಪರಿಶೀಲನೆ ವೇಳೆ ಬೀದಿ ವ್ಯಾಪಾರಿಗಳು ತಮ್ಮನ್ನು ತೆರವುಗೊಳಿಸದಂತೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸ್ಮಾಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಪಾಲಿಕೆ ಜಂಟಿ ಆಯುಕ್ತ ವೀರಭದ್ರಸ್ವಾಮಿ, ಶಿವಸ್ವಾಮಿ, ಮುಖ್ಯ ಇಂಜಿನಿಯರ್ ಪ್ರಹ್ಲಾದ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News