ಪುರುಷ ರಕ್ಷಕರಿಲ್ಲದೆ ಹಜ್ ಯಾತ್ರೆ ಆಚರಿಸಿದ ಮಹಿಳೆಯರು

Update: 2021-07-20 15:54 GMT
photo : twitter/@JKhan_Official

ಮೆಕ್ಕಾ, ಜು.20: ಎಲ್ಲಾ ವಯೋಮಾನದ ಮಹಿಳೆಯರೂ, ಪುರುಷ ರಕ್ಷಕರಿಲ್ಲದೆ ಪವಿತ್ರ ಹಜ್ ಯಾತ್ರೆಗೆ ಅವಕಾಶ ನೀಡಲು ಸೌದಿಯ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲ್ಲಝೀಝ್ ನಿರ್ಧರಿಸಿದ ಹಿನ್ನೆಲೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹಜ್ ಯಾತ್ರೆ ನಡೆಸಲು ಸಾಧ್ಯವಾಗಿದೆ. ಈ ವರ್ಷದ ಹಜ್ಯಾತ್ರಿಕರಲ್ಲಿ 40% ಮಹಿಳೆಯರು ಎಂದು ಸೌದಿ ಅರೆಬಿಯಾದ ಅಧಿಕಾರಿಗಳು ಹೇಳಿದ್ದಾರೆ.

 ‌ಹಜ್ ಯಾತ್ರೆ ನಡೆಸಬೇಕೆಂಬ ತನ್ನ ಬಾಲ್ಯಕಾಲದ ಕನಸು ನನಸಾಗಿದೆ ಎಂದು ಜಿದ್ದಾ ನಿವಾಸಿ, 35 ವರ್ಷದ ಪಾಕಿಸ್ತಾನಿ ಮಹಿಳೆ ಬುಷ್ರಾ ಶಹಾ ಸಂತಸ ವ್ಯಕ್ತಪಡಿಸಿದ್ದಾರೆ. ಹೊಸ ನಿಯಮದ ಬಳಿಕ ಪುರುಷ ರಕ್ಷಕರ ಅಗತ್ಯವಿಲ್ಲದೆ ಮಹಿಳೆಯರೂ ಈ ಯಾತ್ರೆ ಕೈಗೊಳ್ಳಬಹುದು. ಆದರೆ ಅವರು ಒಂದು ತಂಡವಾಗಿ ಹೋಗಬೇಕು ಎಂಬ ಷರತ್ತಿದೆ. ಯುವ ತಾಯಂದಿರು ತಮ್ಮ ಪತಿ ಅಥವಾ ಮಗುವಿನೊಂದಿಗೆ ಹಜ್ ಯಾತ್ರೆಗೆ ತೆರಳಿದರೆ, ಪವಿತ್ರ ಯಾತ್ರೆಯ ಎಲ್ಲಾ ಆಚರಣೆಗಳ ಬಗ್ಗೆ ಗಮನ ಕೇಂದ್ರೀಕರಿಸಲು ಕಷ್ಟವಾಗುತ್ತಿತ್ತು ಎಂದು ಬುಷ್ರಾ ಶಹಾ ಹೇಳಿದ್ದಾರೆ.
  
ಸತತ ದ್ವಿತೀಯ ವರ್ಷವೂ ಕೊರೋನ ಸಾಂಕ್ರಾಮಿಕದಿಂದ ಸೌದಿಯ ಪ್ರಜೆಗಳು ಹಾಗೂ ಇಲ್ಲಿ ನೆಲೆಸಿರುವವರಿಗಷ್ಟೇ ಹಜ್ ಯಾತ್ರೆ ನಡೆಸಲು ಅವಕಾಶ ನೀಡಲಾಗಿದೆ. ಈ ವರ್ಷ ಆಯ್ಕೆಯಾದ 60,000 ಯಾತ್ರಿಗಳಲ್ಲಿ 40% ಮಹಿಳೆಯರು ಎಂದು ಅಧಿಕಾರಿಗಳು ಹೇಳಿದ್ದಾರೆ.
 
ಈ ಹಿಂದಿನ ನಿಯಮದಂತೆ, 45 ವರ್ಷದೊಳಗಿನ ಮಹಿಳೆಯರು ಹಜ್ ಯಾತ್ರೆ ನಡೆಸಬೇಕಿದ್ದರೆ ಪುರುಷ ರಕ್ಷಕರೊಬ್ಬರು ಜತೆಗಿರಬೇಕಿತ್ತು. ಆದರೆ ಹೊಸ ನಿಯಮ ಒಂದು ಪವಾಡವಾಗಿದೆ ಎಂದು ರಿಯಾದ್ನಲ್ಲಿ ನೆಲೆಸಿರುವ ಈಜಿಪ್ಟ್ ಪ್ರಜೆ, 42 ವರ್ಷದ ಮರ್ವಾ ಶಕೆರ್ ಉದ್ಗರಿಸಿದ್ದಾರೆ. ಈ ಹಿಂದೆ ಹಲವು ಬಾರಿ ಹಜ್ ಯಾತ್ರೆಗೆ ಪ್ರಯತ್ನಿಸಿದ್ದೆ. ಆದರೆ ಪತಿ ಒಮ್ಮೆ ಯಾತ್ರೆ ಮಾಡಿರುವುದರಿಂದ ಅವರಿಗೆ ಮತ್ತೆ ತಕ್ಷಣ ಅನುಮತಿ ದೊರಕುವ ಸಾಧ್ಯತೆಯಿರಲಿಲ್ಲ(ಕೊರೋನ ಸಮಸ್ಯೆ ಹಿನ್ನೆಲೆಯಲ್ಲಿ ಸೀಮಿತ ಜನರಿಗೆ ಮಾತ್ರ ಅವಕಾಶವಿತ್ತು). ಆದರೆ ಈಗ ಅವಕಾಶ ದೊರಕಿದೆ ಎಂದವರು ಸಂತಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News