ಬೆಂಗಳೂರು: ಅಬಕಾರಿ ಸುಂಕ ಕಡಿತಗೊಳಿಸಲು ಒತ್ತಾಯಿಸಿ ಸಿಪಿಐ ಪ್ರತಿಭಟನೆ

Update: 2021-07-23 14:14 GMT

ಬೆಂಗಳೂರು, ಜು.23: ಇಂಧನದ ಮೇಲಿನ ಅಬಕಾರಿ ಸುಂಕಗಳನ್ನು ಕಡಿತಗೊಳಿಸಿ, ಪ್ರತಿ ಲೀಟರ್ ಇಂಧನದ ಮೇಲೆ ಶೇ.10ರಷ್ಟು ಮಾತ್ರ ಸುಂಕವನ್ನು ವಿಧಿಸಲು ಒತ್ತಾಯಿಸಿ ಸಿಪಿಐ(ಭಾರತೀಯ ಕಮ್ಯೂನಿಸ್ಟ್ ಪಕ್ಷ) ಪ್ರತಿಭಟನೆ ನಡೆಸಿತು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಿಪಿಐ ಮುಖಂಡ ಸಿದ್ದನಗೌಡ ಪಾಟೀಲ ಮಾತನಾಡಿ, ಕೇಂದ್ರ ಸರಕಾರದ ಆರ್ಥಿಕ ನೀತಿಗಳ ನೇರ ಪರಿಣಾಮದಿಂದಾಗಿ ದೇಶದ ಜನತೆಯ ಮೇಲೆ ಆರ್ಥಿಕ ಒತ್ತಡ ಉಂಟಾಗಿದೆ. ಹಣದುಬ್ಬರ ಹಾಗೂ ನಿರುದ್ಯೋಗ ಗಗನಕ್ಕೇರುತ್ತಿದ್ದು, ದೇಶದ ಆರ್ಥಿಕ ವ್ಯವಸ್ಥೆ ಕುಸಿಯುತ್ತಿದೆ ಎಂದು ಆರೋಪಿಸಿದ್ದಾರೆ.

ಮೋದಿ ಸರಕಾರ ಕೇವಲ 3-4 ಕಾರ್ಪೊರೇಟ್ ಕಂಪನಿಗಳನ್ನು ಅಭಿವೃದ್ದಿಪಡಿಸುವ ಕೆಲಸ ಮಾಡುತ್ತಿದೆ. ದೇಶದ ಶೇ.90ಕ್ಕೂ ಹೆಚ್ಚು ಜನತೆ ಕೋವಿಡ್‍ನಿಂದಾಗಿ ಆರ್ಥಿಕ ಸಂಕಷ್ಟದಿಂದ ನರಳಾಡುತ್ತಿದ್ದಾರೆ. ಈ ಬಗ್ಗೆ ಬಿಜೆಪಿಯ ಯಾವ ನಾಯಕರು ತಲೆ ಕೆಡಿಸಿಕೊಳ್ಳುತ್ತಿಲ್ಲವೆಂದು ಕಿಡಿಕಾರಿದ್ದಾರೆ. 

ಜನತೆಯ ಸಂಕಷ್ಟ ಮಿತಿ ಮೀರಿದ್ದು, ಈ ಕೂಡಲೇ ಇಂಧನದ ಮೇಲಿನ ಅಬಕಾರಿ ಸುಂಕಗಳನ್ನು ಕಡಿತಗೊಳಿಸಿ, ಪ್ರತಿ ಲೀಟರ್ ಇಂಧನದ ಮೇಲೆ ಶೇ. 10ರಷ್ಟು ಮಾತ್ರ ಸುಂಕ ವಿಧಿಸಬೇಕು. ಕಾರ್ಪೊರೇಟ್ ತೆರಿಗೆಯನ್ನು ಹೆಚ್ಚಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಪಿತ್ರಾರ್ಜಿತ ಆಸ್ತಿ ತೆರಿಗೆಯನ್ನು ವಿಧಿಸಬೇಕು. ದೇಶದಲ್ಲಿ ಆದಾಯ ತೆರಿಗೆ ವ್ಯಾಪ್ತಿಯ ಒಳಗೆ ಬರುವ ಎಲ್ಲಾ ಕುಟುಂಬಗಳಿಗೂ ಪ್ರತಿ ತಿಂಗಳಿಗೆ 10ಸಾವಿರ ರೂ.ಮೂಲ ಆಯಾಯವನ್ನು ಹೆಚ್ಚಿಸಬೇಕೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News