ಕಾಡುಗೊಂಡನಹಳ್ಳಿ ಮೆಟ್ರೊ ನಿಲ್ದಾಣಕ್ಕೆ ‘ಅರೇಬಿಕ್ ಕಾಲೇಜು’ ಹೆಸರು ನಾಮಕರಣಕ್ಕೆ ಅಬ್ದುಲ್ ಅಝೀಮ್ ಆಗ್ರಹ

Update: 2021-07-23 18:05 GMT

ಬೆಂಗಳೂರು, ಜು.23: ನಾಗವಾರ ಸಮೀಪವಿರುವ ಅರೇಬಿಕ್ ಕಾಲೇಜು ಎದುರು ನಿರ್ಮಾಣವಾಗಲಿರುವ ಮೆಟ್ರೋ ನಿಲ್ದಾಣಕ್ಕೆ ಕಾಡುಗೊಂಡನಹಳ್ಳಿ ಮೆಟ್ರೋ ನಿಲ್ದಾಣದ ಬದಲಾಗಿ, ಅರೇಬಿಕ್ ಕಾಲೇಜು ಮೆಟ್ರೋ ನಿಲ್ದಾಣವೆಂದೇ ನಾಮಕರಣ ಮಾಡಬೇಕು ಎಂದು ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿದೇರ್ಶಕ ಅಂಜುಮ್ ಪರ್ವೇಝ್ ಅವರಿಗೆ ಪತ್ರ ಬರೆದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್ ಆಗ್ರಹಿಸಿದ್ದಾರೆ.

ಅರೇಬಿಕ್ ಕಾಲೇಜು ಎದುರು ನಿರ್ಮಿಸಲಾಗಿರುವ ಮೆಟ್ರೋ ನಿಲ್ದಾಣಕ್ಕೆ ಕಾಡುಗೊಂಡನಹಳ್ಳಿ ಮೆಟ್ರೊ ನಿಲ್ದಾಣವೆಂದು ನಾಮಕರಣ ಮಾಡಲು ಬಿಎಂಆರ್‍ಸಿಎಲ್ ಪ್ರಸ್ತಾವನೆ ಸಲ್ಲಿಸಿದೆ ಎಂದು ತಿಳಿದು ಬಂದಿದೆ.  ಆದರೆ, ಕಾಡುಗೊಂಡನಹಳ್ಳಿ ಬಿಬಿಎಂಪಿಯ ವಾರ್ಡ್ ನಂ.30ರ ವ್ಯಾಪ್ತಿಗೆ ಬರುತ್ತದೆ. ಅರೇಬಿಕ್ ಕಾಲೇಜು ನಾಗವಾರ ವಾರ್ಡ್ ಸಂಖ್ಯೆ 23ರ ವ್ಯಾಪ್ತಿಯಲ್ಲಿದೆ. ಜೊತೆಗೆ ವಾರ್ಡ್ ನಂ.30ರ ವ್ಯಾಪ್ತಿಯಲ್ಲಿರುವ ಬರುವ ಮತ್ತೊಂದು ನಿಲ್ದಾಣಕ್ಕೆ ವೆಂಕಟೇಶಪುರ ನಿಲ್ದಾಣ ಎಂದು ನಾಮಕರಣ ಮಾಡಲು ಪ್ರಸ್ತಾಪಿಸಿದೆ. ವೆಂಕಟೇಶಪುರ ಕಾಡುಗೊಂಡನಹಳ್ಳಿಯ ಸಮೀಪದಲ್ಲೆ ಇದೆ ಎಂದು ಅವರು ತಿಳಿಸಿದ್ದಾರೆ.

ಅರೇಬಿಕ್ ಕಾಲೇಜು ಈ ಸುತ್ತಮುತ್ತಲಿನ ಪ್ರದೇಶದಲ್ಲಿನ ಪ್ರಮುಖ ಸ್ಥಳವಾಗಿದೆ. ಅಂಚೆ ಕಚೇರಿ, ಬಸ್ ನಿಲ್ದಾಣ ಸೇರಿದಂತೆ ವಿವಿಧ ಸಂಸ್ಥೆಗಳು ಅರೇಬಿಕ್ ಕಾಲೇಜಿನ ಹೆಸರಿನಿಂದಲೆ ಗುರುತಿಸಲ್ಪಡುತ್ತವೆ. ಆದುದರಿಂದ, ಕಾಡುಗೊಂಡನಹಳ್ಳಿ ಮೆಟ್ರೋ ನಿಲ್ದಾಣದ ಬದಲು ಅರೇಬಿಕ್ ಕಾಲೇಜು ಮೆಟ್ರೋ ನಿಲ್ದಾಣ ಎಂದು ನಾಮಕರಣ ಮಾಡುವುದು ಸೂಕ್ತ. ವೆಂಕಟೇಶಪುರ ನಿಲ್ದಾಣಕ್ಕೆ ಕಾಡುಗೊಂಡನಹಳ್ಳಿ ನಿಲ್ದಾಣ ಎಂದು ನಾಮಕರಣ ಮಾಡಬಹುದಾಗಿದೆ. ಮೆಟ್ರೋ ಕಾಮಗಾರಿಗಾಗಿ ಅರೇಬಿಕ್ ಕಾಲೇಜಿನ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಇಲ್ಲಿನ ಮೆಟ್ರೋ ನಿಲ್ದಾಣಕ್ಕೆ ಅರೇಬಿಕ್ ಕಾಲೇಜು ನಿಲ್ದಾಣ ವೆಂದು ನಾಮಕರಣ ಮಾಡುವುದಾಗಿ ಬಿಎಂಆರ್‍ಸಿಎಲ್ ವಾಗ್ದಾನ ನೀಡಿತ್ತು. ಹೀಗಿದ್ದರೂ, ಈ ನಿಲ್ದಾಣದ ಹೆಸರನ್ನು ಅರೇಬಿಕ್ ಕಾಲೇಜು ಬದಲಾಗಿ ಕಾಡುಗೊಂಡನಹಳ್ಳಿ ನಿಲ್ದಾಣವೆಂದು ಬದಲಾಯಿಸುತ್ತಿರುವುದೇಕೆ ಎಂದು ಅರ್ಥವಾಗುತ್ತಿಲ್ಲ. ಅರೇಬಿಕ್ ಕಾಲೇಜು ಎದುರು ನಿರ್ಮಾಣವಾಗಲಿರುವ ನಿಲ್ದಾಣಕ್ಕೆ ಅರೇಬಿಕ್ ಕಾಲೇಜು ಮೆಟ್ರೋ ನಿಲ್ದಾಣವೆಂದು ನಾಮಕರಣ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News