ಸಂಧಾನ ಹೆಸರಿನಲ್ಲಿ ಹಣಕ್ಕೆ ಬೇಡಿಕೆ ಆರೋಪ: ಮಹಿಳಾ ಇನ್‍ಸ್ಪೆಕ್ಟರ್ ವಿರುದ್ಧ ಎಫ್‍ಐಆರ್ ದಾಖಲು

Update: 2021-07-24 15:30 GMT

ಬೆಂಗಳೂರು, ಜು.24: ಸಂಧಾನ ಹೆಸರಿನಲ್ಲಿ ಲಕ್ಷಾಂತರ ರೂ. ಲಂಚಕ್ಕೆ ಬೇಡಿಕೆಯಿಟ್ಟಿರುವ ಆರೋಪ ಸಂಬಂಧ ಪ್ರತ್ಯೇಕ ಪ್ರಕರಣಗಳಲ್ಲಿ ಮಹಿಳಾ ಇನ್‍ಸ್ಪೆಕ್ಟರ್ ಸೇರಿ ನಾಲ್ವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದಲ್ಲಿ ಎಫ್‍ಐಆರ್ ದಾಖಲಾಗಿದೆ.

ವೈಟ್‍ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಇನ್‍ಸ್ಪೆಕ್ಟರ್  ರೇಣುಕಾ, ಸಬ್ ಇನ್‍ಸ್ಪೆಕ್ಟರ್‍ಗಳಾದ ನವೀನ್, ಗಣೇಶ್, ಕಾನ್‍ಸ್ಪೇಬಲ್ ಹೇಮಂತ್ ಹಾಗೂ ಕೋಣನಕುಂಟೆ ಠಾಣೆಯ ಕಾನ್‍ಸ್ಟೇಬಲ್ ಮುಹಮ್ಮದ್ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಎಸಿಬಿ ತಿಳಿಸಿದೆ.

ಉದ್ಯಮಿ ಗೋಪಿನಾಥ್ ಅವರು ಒಳಾಂಗಣ ವಿನ್ಯಾಸವನ್ನು ಮಾಡಿಕೊಡುವುದಾಗಿ ಹಣ ಪಡೆದಿದ್ದು, ಕೆಲಸ ಮಾಡಿಸಿಕೊಡದೇ ಹಣವನ್ನೂ ಕೊಡದೇ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಗೋಪಿನಾಥ್ ವಿರುದ್ಧ ದೂರು ದಾಖಲಾಗಿತ್ತು. ಜು.16ರಂದು ಗೋಪಿನಾಥ್ ಮನೆಗೆ ಬಂದಿದ್ದ ಪಿಎಸ್ಸೈ ಗಣೇಶ್, ಪತ್ನಿ, ಮಗು ಸಮೇತ ಠಾಣೆಗೆ ಕರೆತಂದಿದ್ದರು. ಎಫ್‍ಐಆರ್ ತೋರಿಸಲು ಹೇಳಿದ್ದಕ್ಕೆ ಗಣೇಶ್ ಕಪಾಳಕ್ಕೆ ಹೊಡೆದು ಅವರ ಹಾಗೂ ಪತ್ನಿಯ ಮೊಬೈಲ್ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ತದನಂತರ, ಇನ್‍ಸ್ಪೆಕ್ಟರ್, ಗೋಪಿನಾಥ್ ಹಾಗೂ ಪತ್ನಿಯನ್ನು ಜೈಲಿಗೆ ಕಳಿಸುವುದಾಗಿ ಬೆದರಿಸಿದ್ದಾರೆ. ಬಳಿಕ, 5 ಲಕ್ಷ ರೂ.ನ್ನು ದೂರುದಾರರ ಬ್ಯಾಂಕ್ ಖಾತೆಗೆ ರವಾನಿಸುವಂತೆ ಹೇಳಿದ್ದಾರೆ. ಜತೆಗೆ, ನಿಮ್ಮಿಬ್ಬರನ್ನು ಬಂಧಿಸದಿರಲು 10 ಲಕ್ಷ ರೂ. ನೀಡಬೇಕು ಎಂದು ಸೂಚಿಸಿದ್ದಾರೆ. ಅದರಂತೆ, 10 ಲಕ್ಷ ನೀಡಿದ್ದಾರೆನ್ನಲಾಗಿದ್ದು, ಈ ಸಂಬಂಧ ಎಸಿಬಿ ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News