‘ದ ಲೈವ್ಸ್ ಆಫ್ ಅದರ್ಸ್‌’

Update: 2021-07-25 04:11 GMT

ಕಳೆದ ಒಂದು ದಶಕದಲ್ಲಿ ಬ್ರೆಝಿಲ್, ಅಮೆರಿಕ, ಫ್ರಾನ್ಸ್, ಟರ್ಕಿ, ಇಂಡಿಯಾ, ಶ್ರೀಲಂಕಾ ಮುಂತಾದ ಪಶ್ಚಿಮ, ಏಶ್ಯ ದೇಶಗಳಲ್ಲಿ ತೀವ್ರ ಬಲಪಂಥೀಯ ನಿರಂಕುಶ ಪ್ರಭುತ್ವ ಅಧಿಕಾರಕ್ಕೆ ಬಂದಿರುವುದನ್ನು ಕಂಡಾಗ ‘ದ ಲೈವ್ಸ್ ಆಫ್ ಅದರ್ಸ್‌’ ಸಿನೆಮಾ ವಿಶ್ವವ್ಯಾಪಿ ಎಂದೂ ಹೇಳಬೇಕಾಗುತ್ತದೆ. ಇಂದು ಮೋದಿ-ಆರೆಸ್ಸೆಸ್ ಆಡಳಿತದ ಭಾರತದಲ್ಲಿ ‘ಇತರರ ಬದುಕು’ ಹೀನಾಯ ಸ್ಥಿತಿಯಲ್ಲಿದೆ. ಅಮಿತ್ ಶಾ ನೇತೃತ್ವದ ದೊಡ್ಡಣ್ಣ ಪಡೆಯು ಇತರರ ಬದುಕನ್ನು ಕಣ್ಗಾವಲು ಕಾಯುತ್ತಿದೆ.

ಎರಡನೇ ಮಹಾಯುದ್ಧ ಕೊನೆಗೊಂಡ ನಂತರ 1945ರಲ್ಲಿ ನಾಝಿ ಜರ್ಮನಿ ಶರಣಾಗತವಾಯಿತು. ಜರ್ಮನಿಯು ಇಬ್ಭಾಗವಾಗಿ ಮೇ 23, 1949ರಂದು ಅಮೆರಿಕದೊಂದಿಗೆ ಗುರುತಿಸಿಕೊಂಡ ‘ಸಂಯುಕ್ತ ಜರ್ಮನ್ ಗಣರಾಜ್ಯ’ (ಎಫ್‌ಆರ್‌ಜಿ) ಹೆಸರಿನ ಪಶ್ವಿಮ ಜರ್ಮನಿ ಮತ್ತು ಅಕ್ಟೋಬರ್ 7, 1949ರಂದು ಸೋವಿಯತ್ ಒಕ್ಕೂಟದೊಂದಿಗೆ ಗುರುತಿಸಿಕೊಂಡ ಜರ್ಮನ್ ಪ್ರಜಾತಾಂತ್ರಿಕ ಗಣರಾಜ್ಯ (ಜಿಡಿಆರ್) ಹೆಸರಿನಲ್ಲಿ ಪೂರ್ವ ಜರ್ಮನಿ ಸ್ಥಾಪನೆಗೊಂಡವು. ಆಗಸ್ಟ್ 13, 1961ರಂದು ಪೂರ್ವ ಜರ್ಮನಿ ಮತ್ತು ಪಶ್ಚಿಮ ಜರ್ಮನಿ ಪ್ರತ್ಯೇಕಿಸುವ ಬರ್ಲಿನ್ ಗೋಡೆ ಕಟ್ಟಲಾಯಿತು. 1985ರಲ್ಲಿ ಮಿಖಾಯಿಲ್ ಗೊರ್ಬಚೇವ್ ಅವರು ಸೋವಿಯತ್ ಒಕ್ಕೂಟದ ನಾಯಕರಾಗಿ ಆಯ್ಕೆಯಾದರು. ಗ್ಲಾಸನಾಸ್ಟಾ ಮತ್ತು ಪೆರಿಸ್ಟ್ರೋಯಿಕ ಮೂಲಕ ಆರ್ಥಿಕ ಮತ್ತು ರಾಜಕೀಯ ಸುಧಾರಣೆಗಳನ್ನು ಜಾರಿಗೊಳಿಸಲು ಪ್ರಯತ್ನಿಸಿದರು. ಆದರೆ ನವೆಂಬರ್ 9, 1989ರಂದು ಈ ಬರ್ಲಿನ್ ಗೋಡೆಯನ್ನು ಕೆಡವಲಾಯಿತು (1987ರಲ್ಲಿ ಆಗಿನ ಅಮೆರಿಕದ ಅಧ್ಯಕ್ಷ ರೋನಾಲ್ಡ್ ರೇಗನ್ ‘‘ಗೋಡೆಯನ್ನು ಚಿಂದಿ ಚಿಂದಿ ಮಾಡಿ’’ ಎಂದು ಕರೆ ನೀಡಿದ್ದರು). ಈ ಬರ್ಲಿನ್ ಗೋಡೆಯ ಧ್ವಂಸ ಮತ್ತು ಪೂರ್ವ ಮತ್ತು ಪಶ್ಚಿಮ ಜರ್ಮನಿಗಳ ವಿಲೀನವನ್ನು ಕಮ್ಯುನಿಸಂನ ಪತನ ಎಂದು ಪಶ್ಚಿವುದ ವಿಶ್ಲೇಷಕರು ವ್ಯಾಖ್ಯಾನಿಸಿದರು.

 ಪೂರ್ವ ಜರ್ಮನಿಯ ಆಡಳಿತ ಕಮ್ಯುನಿಸ್ಟ್ ಪಕ್ಷ ನೇತೃತ್ವದ ‘ಸೋಶಿಯಲಿಸ್ಟ್ ಯೂನಿಟಿ ಪಾರ್ಟಿ ಆಫ್ ಜರ್ಮನಿ’ಯ ಪ್ರಭಾವಶಾಲಿ ಸದಸ್ಯರ ನಿಯಂತ್ರಣದಲ್ಲಿತ್ತು. ಆಗಿನ ಕಮ್ಯುನಿಸ್ಟ್ ಪಕ್ಷದ ಆಡಳಿತವನ್ನು ಉಕ್ಕಿನ ಆಡಳಿತ ಎಂದೂ ಕರೆಯುತ್ತಾರೆ. ಅದರರ್ಥ ಅಲ್ಲಿನ ಎಲ್ಲಾ ನಿರ್ಧಾರಗಳೂ ನಿಗೂಢವಾಗಿದ್ದವು ಮತ್ತು ಪಾಲಿಟ್‌ಬ್ಯೂರೊದ ಉಕ್ಕಿನ ಹಿಡಿತದಲ್ಲಿದ್ದವು. ಪೂರ್ವ ಜರ್ಮನಿಯ ಕಮ್ಯುನಿಸ್ಟ್ ಪಕ್ಷಕ್ಕೆ ಗೂಢಚಾರಿ ಸೇವೆ ಒದಗಿಸುವ ‘ಸ್ಟಾಸಿ’ ಪಡೆ ಬೆಂಬಲಿಸುತ್ತಿತ್ತು. ಈ ‘ಸ್ಟಾಸಿ’ ಗೂಢಚಾರಿ ತಂಡವು ಪೂರ್ವ ಜರ್ಮನಿಯ ರಾಜ್ಯ ‘ಸುರಕ್ಷತೆ ಸೇವೆ ಮಂತ್ರಾಲಯ’ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಪೂರ್ವ ಜರ್ಮನಿಯ ಗಣ್ಯರು, ಲೇಖಕರು, ಚಿಂತಕರ ವೈಯಕ್ತಿಕ ಬದುಕನ್ನು ಗೂಡಚರ್ಯೆ ನಡೆಸುವುದು ಇದರ ಮುಖ್ಯ ಕರ್ತವ್ಯವಾಗಿತ್ತು. ಭಿನ್ನಮತೀಯರನ್ನು ಬಂಧಿಸಿ ನ್ಯಾಯಾಂಗ ವಿಚಾರಣೆಗೊಳಪಡಿಸುತ್ತಿತ್ತು. ತನ್ನ ಅಧಿಕಾರದ ಅವಧಿಯಲ್ಲಿ ಸ್ಟಾಸಿ ಗೂಢಚರ್ಯೆ ಇಲಾಖೆಯು ಸುಮಾರು 2 ಲಕ್ಷ ರಾಜಕೀಯ ಭಿನ್ನಮತೀಯರನ್ನು ಬಂಧಿಸಿತ್ತು ಎಂದು ಹೇಳಲಾಗುತ್ತಿದೆ. ಆದರೆ ಕಮ್ಯುನಿಸ್ಟ್ ಪಕ್ಷಗಳು ಇದನ್ನು ನಿರಾಕರಿಸಿ ಪಶ್ಚಿಮದ ಪಿತೂರಿ ಎಂದು ಆರೋಪಿಸಿದ್ದವು. ಸತ್ಯವು ಇಂದಿಗೂ ಅಪರಿಚಿತವಾಗಿ ಉಳಿದುಕೊಂಡಿದೆ.

ಇತರರ ಬದುಕಿನ ಸ್ವಾತಂತ್ರ್ಯ

ಬ್ರೆಕ್ಟ್ ಒಂದು ಕಡೆ ‘‘ಮನುಷ್ಯ ತಂಬಾ ಸಹಾಯಕಾರಿ. ಆತ ಹಾರಾಡಬಲ್ಲ, ಸಾಯಿಸಬಲ್ಲ. ಆದರೆ ಆತನಿಗೆ ಒಂದು ಐಬು ಇದೆ: ಆತ ಯೋಚಿಸಬಲ್ಲ’’ ಎಂದು ಬರೆಯುತ್ತಾನೆ. ಹೆಂಕೆಲ್ ಡಾನ್ನರ್ಸ್‌ಮಾರ್ಕ್‌ನ ಚೊಚ್ಚಲ ನಿರ್ದೇಶನದ ಸಿನೆಮಾ 'The Lives of Others’2006-ಜರ್ಮನಿ) ಮೇಲ್ನೋಟಕ್ಕೆ ಕಂಡುಬರುವಂತೆ ಆರ್ವೆಲಿಯನ್ ಪ್ರಭುತ್ವದ ಅನಾವರಣ ಮಾಡುತ್ತದೆ. ಇಲ್ಲಿ ನಾಗರಿಕರ ಬದುಕನ್ನು ದೊಡ್ಡಣ್ಣ ಕೇವಲ ನಿಗಾ ವಹಿಸುವುದು ಮಾತ್ರವಲ್ಲ ಜನರ ಜೀವನದ ಗತಿಯನ್ನು ಬದಲಾಯಿಸಬಲ್ಲ. ಈ ಸಿನೆಮಾದಲ್ಲಿ ಎಲ್ಲವನ್ನು ಸಾಧಿಸಬಲ್ಲ, ಅಧಿಕಾರ ಹೊಂದಿದ ಮನುಷ್ಯ ಚಣ ಕಾಲ ನಿಂತು ಯೋಚಿಸುತ್ತಾನೆ. ಆ ಯೋಚನೆಯಿಂದ ಕಂಡುಕೊಂಡ ಕಾಣ್ಕೆಯಿಂದ ಬೆಚ್ಚಿಬೀಳುತ್ತಾನೆ. ತನ್ನ ಚಿಂತನೆಯ ದಿಕ್ಕನ್ನೇ ಬದಲಿಸಿಕೊಳ್ಳುತ್ತಾನೆ. ಈ ಬದಲಾವಣೆ ಅನೇಕ ತಿರುವುಗಳಿಗೆ ಕಾರಣವಾಗುತ್ತದೆ. ‘ದ ಲೈವ್ಸ್ ಆಫ್ ಅದರ್ಸ್‌’ ಸಿನೆಮಾ 80ರ ದಶಕದ ಪೂರ್ವ ಜರ್ಮನಿಯ ಕಮ್ಯುನಿಸ್ಟ್ ಆಡಳಿತದ ಸಂದರ್ಭದಲ್ಲಿ ಇತ್ತೆಂದು ಹೇಳಲಾದ ನಿರಂಕುಶ ಪ್ರಭುತ್ವದ ಕುರಿತು ಮಾತನಾಡುತ್ತದೆ. ‘ಸ್ಟಾಸಿ’ ಎನ್ನುವ ಗುಪ್ತಚರ ಪೊಲೀಸ್ ಇಲಾಖೆ ತನ್ನ ಪ್ರಭುತ್ವದ ಆದೇಶಗಳನ್ನು ಜಾರಿಗೊಳಿಸುವ ನೆಪದಲ್ಲಿ ಇಡೀ ಪೂರ್ವಜರ್ಮನಿಯಲ್ಲಿ ಒಂದು ಬಗೆಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ ಎಂಬುದು ಇಡೀ ಸಿನೆಮಾದಲ್ಲಿನ ಪ್ರತಿ ದೃಶ್ಯಗಳಲ್ಲಿ ನಿರೂಪಿತವಾಗಿದೆ. ಒಂದು ಅತ್ಯುತ್ತಮ ಚಿತ್ರಕತೆಗೆ ಉದಾಹರಣೆ ಈ ‘ದ ಲೈವ್ಸ್ ಆಫ್ ಅದರ್ಸ್‌’ ಸಿನೆಮಾ. ಚಕಿತಗೊಳಿಸುವ, ಕೊಂಡಿಯು ಕಳಚದಂತೆ ಹೆಣಿಗೆಯನ್ನು ನೇಯಬಲ್ಲ ಕಸುವು ಇರುವ ಈ ಚಿತ್ರಕತೆಯು ಮೂಲ ಕತೆಯಲ್ಲಿನ ವಿರೋಧಾಭಾಸಗಳು ಮತ್ತು ಇತಿಹಾಸವನ್ನು ತಪ್ಪಾಗಿ ಅರ್ಥೈಸಿರುವುದನ್ನು ಮಸುಕುಗೊಳಿಸಿ ಪ್ರೇಕ್ಷಕನಲ್ಲಿ ಒಂದು ಉತ್ತಮ ಸಿನೆಮಾ ನೋಡಿದ ಭಾವ ಮೂಡಿಸುತ್ತದೆ.

ಪೂರ್ವ ಜರ್ಮನಿಯಲ್ಲಿ ಪ್ರಭುತ್ವ ಸಮಾಜವಾದದ ಹೆಸರಿನಲ್ಲಿ ದಬ್ಬಾಳಿಕೆ ನಡೆಸಲಾಗುತ್ತಿತ್ತು ಎಂದು ಇತಿಹಾಸದ ಪಠ್ಯಗಳು ಹೇಳುತ್ತವೆ. ಕಮ್ಯುನಿಸ್ಟರು ಇದನ್ನು ಅಲ್ಲಗೆಳೆಯುತ್ತಾರೆ. ಇದು ಪಶ್ಚಿಮದ ಪಿತೂರಿ ಎಂದು ಆರೋಪಿಸುತ್ತಾರೆ. ಸತ್ಯ ಇವೆರಡರ ನಡುವೆ ಇದೆ. ಏಕೆಂದರೆ ಲೆನಿನ್‌ನ ‘ಶ್ರಮಿಕರ ಸರ್ವಾಧಿಕಾರ’ದ ಸಮತಾವಾದದ ಆಶಯಗಳು ಸ್ಟಾಲಿನ್‌ಯುಗದಲ್ಲಿ ಕರಗಿಹೋಗಿದ್ದನ್ನು ನಾವು ಕಂಡಿದ್ದೇವೆ. ಸ್ಟಾಲಿನ್ ಇದನ್ನು ಬದಲಾಯಿಸಿ ‘ಶ್ರಮಿಕರಿಗಾಗಿ ಸರ್ವಾಧಿಕಾರ’ ಎಂದು ನಿರಂಕುಶ ಆಡಳಿತ ನಡೆಸಿದ್ದು ಸಹ ಇಂದು ಇತಿಹಾಸದ ಪುಟಗಳಲ್ಲಿ ಹೂತು ಹೋಗಿದೆ ಮತ್ತು ಈ ಇತಿಹಾಸವು ಆಗೊಮ್ಮೆ ಈಗೊಮ್ಮೆ ಪುಟಿದೆದ್ದು ತಲೆ ಮೇಲೆ ಬಡಿದು ಮತ್ತೆ ಭೂತದಲ್ಲಿ ತೂರಿಕೊಳ್ಳುತ್ತದೆ. ಆದರೆ ಇತಿಹಾಸ ಉರುಳುತ್ತಲೇ ಇರುತ್ತದೆ. ಕಾಲ ಬಲು ಬೇಗ ಓಡುತ್ತದೆ. ಅದೇ ವೇಗದಲ್ಲಿ ಮನುಷ್ಯನೂ ಓಡಿದರೆ ಮಾತ್ರ ಅದರ ಗತಿಯನ್ನು ಹಿಡಿಯಬಲ್ಲ. ಆದರೆ ಸದಾ ನಿರಾಕಾರಣದ ಮನಸ್ಥಿತಿ ಮನುಷ್ಯನಲ್ಲಿ ಜಡತ್ವ ಮೂಡಿಸುತ್ತದೆ.

ಕಮ್ಯುನಿಸ್ಟರ ‘ಪ್ರಭುತ್ವ ಸಮಾಜವಾದ’ದ ಹೆಸರಿನ ನಿರಂಕುಶ ಪ್ರಭುತ್ವದ ಟೀಕೆಯು ಕ್ರಮೇಣ ಪಶ್ಚಿಮದ ವ್ಯಾಮೋಹವಾಗುವುದರ ಖೆಡ್ಡಾದಿಂದ ಈ ‘ದ ಲೈವ್ಸ್ ಆಫ್ ಅದರ್ಸ್‌’ ಸಿನೆಮಾ ತಪ್ಪಿಸಿಕೊಂಡಂತಿಲ್ಲ. ಏಕೆಂದರೆ ಮುಕ್ತತೆಯ ಹೆಸರಿನಲ್ಲಿ ಬಕಾಸುರ ಬಂಡವಾಳಶಾಹಿ, ಕೊಳ್ಳುಬಾಕುತನ, ಜೀವವಿರೋಧಿ ಮತ್ತು ಸ್ವಾರ್ಥವನ್ನು ಹುಟ್ಟು ಹಾಕುವ ಪಶ್ಚಿಮದ ಸಾಂಪ್ರದಾಯಿಕ ಆಡಳಿತವನ್ನು ಅಪ್ಪಿಕೊಳ್ಳುವುದೂ ಆತ್ಮಹತ್ಯಾತ್ಮಕವೆನಿಸಿಕೊಳ್ಳುತ್ತದೆ. ‘ದ ಲೈವ್ಸ್ ಆಫ್ ಅದರ್ಸ್‌’ ಸಿನೆಮಾದ ನಿರ್ದೇಶಕನಿಗೆ ಇದು ಕಾಡಿದೆಯೇ ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಈ ಸಿನೆಮಾದ ಬಹುಭಾಗವು ಪೂರ್ವ ಜರ್ಮನಿಯ 1984-89ರ ಕಾಲಘಟ್ಟದಲ್ಲಿ ನಡೆಯುತ್ತದೆ. ಗೊರ್ಬಚೇವ್‌ರ ಗ್ಲಾಸನಾಸ್ಟ, ಪೆರಿಸ್ಟ್ರಾಯಿಕ, ಪೂರ್ವ ರಾಷ್ಟ್ರಗಳ ಸಮಾಜವಾದ ಇಲ್ಲಿ ಕಟು ವಿಮರ್ಶೆಗೆ ಒಳಗಾಗುತ್ತದೆ. ಸಿನೆಮಾದ ಕ್ಲೈಮಾಕ್ಸ್‌ನಲ್ಲಿ ಬರ್ಲಿನ್ ಗೋಡೆಯನ್ನು ಕೆಡವಿ ಪೂರ್ವ ಮತ್ತು ಪಶ್ಚಿಮ ಜರ್ಮನಿ ಒಂದಾಗುವುದು ನಿರೂಪಿತವಾಗಿದೆ. ಆದರೆ ಈ ವಿವರಗಳು ಇಲ್ಲಿ ಪ್ರಮುಖವಾಗುವುದೂ ಇಲ್ಲ. ಸಿನೆಮಾದಲ್ಲಿನ ಪ್ರಮುಖ ಕಥನವೇ ಈ ನಿರಂಕುಶ ಪ್ರಭುತ್ವದ ನಡಾವಳಿಗಳ ಅನಾವರಣ. ಪೂರ್ವ ಜರ್ಮನಿಯಲ್ಲಿನ ನಿರಂಕುಶ ಪ್ರಭುತ್ವವನ್ನು ವಿಮರ್ಶಿಸುವ, ಅದರ ಅಧಿಕಾರವನ್ನು ಟೀಕಿಸುವ ರಂಗಭೂಮಿ ನಿರ್ದೇಶಕ ಅಲ್ಬರ್ಟ ಜೆರ್ಸಕ್‌ನಿಗೆ ದಿಗ್ಬಂಧನ ವಿಧಿಸಲಾಗುತ್ತದೆ. ಗುಪ್ತ ಪೊಲೀಸ್ ‘ಸ್ಟಾಸಿ’ಯನ್ನು ಬಳಸಿಕೊಂಡು ಜೆರ್ಸಕ್‌ನ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತದೆ. ಜೆರ್ಸಕ್ ಸಮಾಜ ವಿರೋಧಿ ಎಂದು ಹಣೆಪಟ್ಟಿ ಹಚ್ಚುವ ಪ್ರಭುತ್ವ ಆತನಿಗೆ ನಾಟಕ ನಿರ್ದೇಶನ ಮಾಡುವುದಕ್ಕೂ ಅನುಮತಿ ಕೊಡುವುದಿಲ್ಲ. ಆತನ ಗೆಳೆಯ ನಾಟಕಕಾರ ಡ್ರೈಮನ್ ಸಹ ಈ ಪೂರ್ವ ಜರ್ಮನಿಯ ಆಡಳಿತದ ವಿಮರ್ಶಕ. ಆದರೆ ಅದನ್ನು ಬಹಿರಂಗವಾಗಿ ವ್ಯಕ್ತಪಡಿಸುವುದಿಲ್ಲ. ತನ್ನ ನಾಟಕಗಳಲ್ಲಿ ರೂಪಕವಾಗಿ ಟೀಕಿಸುತ್ತಾನೆ. ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಒತ್ತೆಯಿಡಲು ನಿರಾಕರಿಸುವ ಡ್ರೈಮನ್ ಕೆಲ ಏಜೆಂಟರ ಮೂಲಕ ತನ್ನ ಬಂಡಾಯದ ಲೇಖನಗಳನ್ನು ಬಂಡವಾಳಶಾಹಿ ಆಡಳಿತದ ಪಶ್ಚಿಮ ಜರ್ಮನಿಯ ಪತ್ರಿಕೆಗಳಲ್ಲಿ ಅನಾಮಧೇಯ ಹೆಸರಿನಲ್ಲಿ ಪ್ರಕಟಿಸುತ್ತಾನೆ. ಇದು ಪೂರ್ವ ಜರ್ಮನಿಯ ಕಮ್ಯುನಿಸ್ಟ್ ಪ್ರಭುತ್ವಕ್ಕೆ ಇದನ್ನು ಬರೆದವರಾರೆಂಬುದು ಬಿಡಿಸಲಾಗದ ಕಗ್ಗಂಟಾಗುತ್ತದೆ. ಆದರೂ ಕಮ್ಯುನಿಸ್ಟ್ ಸರಕಾರಕ್ಕೆ ನಾಟಕಕಾರ ಡ್ರೈಮನ್ ಮೇಲೆ ಅನುಮಾನ, ಆ ಕಾರಣಕ್ಕೆ ಆತನನ್ನು ಬೇಹುಗಾರಿಕೆ ಮಾಡಲು, ನಿಗಾ ಇಡಲು ಗೂಢಚಾರ ಇಲಾಖೆ ಸ್ಟಾಸಿಯ ಅಧಿಕಾರಿ ವೈಸ್ಲರ್‌ರನ್ನು ನೇಮಿಸಲಾಗುತ್ತದೆ. ಈತ ಕಮ್ಯುನಿಸ್ಟ್‌ನ ಪ್ರಭುತ್ವ ಸಮಾಜವಾದದಲ್ಲಿ ನಂಬಿಕೆ ಇರುವಂತಹ ಗೂಡಚಾರ. ಆಧುನಿಕ ತಂತ್ರಜ್ಞಾನ ಬಳಸಿ ಡ್ರೈಮನ್‌ನ ಮನೆಯನ್ನು ಸಂಪೂರ್ಣವಾಗಿ ಕಣ್ಗಾವಲು ಇಡುವ ವೈಸ್ಲರ್ ಪ್ರತಿನಿತ್ಯ ಆತನ ಚಟುವಟಿಕೆಗಳನ್ನು ದಾಖಲಿಸುತ್ತಾ ಹೋಗುತ್ತಾನೆ. ಈ ಮಧ್ಯೆ ಪ್ರಭುತ್ವದ ದೌರ್ಜನ್ಯದ ವಿರುದ್ಧ ಹೋರಾಡಲಾಗದೆ ಖಿನ್ನತೆಯಿಂದ ರಂಗ ನಿರ್ದೇಶಕ ಜೆರ್ಸಕ ಹತಾಶನಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇನ್ನೊಂದೆಡೆ ಡ್ರೈಮನ್‌ನ ಗೆಳತಿ, ಪ್ರಿಯತಮೆ ರಂಗಭೂಮಿ ನಟಿ ಕ್ರಿಸ್ಟ ಮಾರಿಯಾ ಸೈಲಾಂಡ್‌ಳನ್ನು ಸಹ ಈ ಗೂಢಚಾರಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಾರೆ. ಈಕೆಯನ್ನು ಅಧಿಕಾರದಲ್ಲಿರುವ ಮಂತ್ರಿ ಹೆಂಫ್ ಕಾಮಿಸುತ್ತಾನೆ. ತನ್ನ ನಿರಂಕುಶ ಅಧಿಕಾರವನ್ನು ಬಳಸಿಕೊಂಡು ಮಾರಿಯಾಳ ಮೇಲೆ ಬಲತ್ಕಾರ ಮಾಡುತ್ತಾನೆ. ಈಕೆಯ ಮೂಲಕ ಡ್ರೈಮನ್ ಮನೆಯ ಕಣ್ಗಾವಲು ನಡೆಸಲಾಗುತ್ತಿದೆ ಮತ್ತು ಈಕೆಯನ್ನು ಒಳಗೊಂಡಂತೆ ಡ್ರೈಮನ್‌ನ್ನು ಬೇಹುಗಾರಿಕೆ ನಡೆಸಲು ತನ್ನನ್ನು ನಿಯೋಜಿಸಲಾಗಿದೆ ಎಂದು ಗೊತ್ತಾಗಿ ಗೂಢಚಾರ ವೈಸ್ಲರ್ ದಿಗ್ಭ್ರಮೆಗೊಳ್ಳುತ್ತಾನೆ. ಇಲ್ಲಿಂದ ಸಿನೆಮಾ ಮತ್ತೊಂದು ತಿರುವನ್ನು ಪಡೆದುಕೊಳ್ಳುತ್ತದೆ. ವೈಸ್ಲರ್ ಕ್ರಮೇಣ ನಾಟಕಕಾರ ಡ್ರೈಮನ್‌ನ ರಕ್ಷಕನಾಗಿ ಬದಲಾಗುವುದು ಈ ಸಿನೆಮಾದ ಮುಖ್ಯ ಘಟ್ಟ. ಅದಕ್ಕಾಗಿ ವೈಸ್ಲರ್ ದಾಖಲೆಗಳನ್ನು ಬದಲಾಯಿಸುತ್ತಾನೆ, ಸಾಕ್ಷಿಯಾಗುವ ಟೈಪ್‌ರೈಟರ್ ಬದಲಾಯಿಸುತ್ತಾನೆ. ಆದರೆ ವೈಸ್ಲರ್‌ನ ಈ ಚಟುವಟಿಕೆಗಳು ಅದರ ಫಲಾನುಭವಿ ಡ್ರೈಮನ್‌ನ ಗಮನಕ್ಕೆ ಬರುವುದಿಲ್ಲ.

ಇದರ ಮಧ್ಯೆ ಸೈಲಾಂಡ್ ಪ್ರಭುತ್ವದ ಒತ್ತಡ ಮತ್ತು ತನ್ನ ಪ್ರಿಯಕರ ಡ್ರೈಮನ್‌ನ ಗೆಳೆತನ ಎರಡನ್ನೂ ಮೀರಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಈ ಸಿನೆಮಾದ ಕ್ಲೈಮಾಕ್ಸ್‌ನಲ್ಲಿ ಚಿತ್ರಕತೆಯು ಮನುಷ್ಯನ ಬದುಕಿನ ಸಾರ್ಥಕತೆಯನ್ನು ಹೇಳುತ್ತದೆಯೋ ಅಥವಾ ಏನೆಲ್ಲಾ ಮಾಡಿ ನಾಶವಾದೆ ಎಂದು ಧ್ವನಿಸುತ್ತದೆಯೋ ಎಂಬುದನ್ನು ಪ್ರೇಕ್ಷಕನ ವಿವೇಚನೆಗೆ ಬಿಡುತ್ತದೆ. ಈ ಕ್ಲೈಮಾಕ್ಸ್ ಸಿನೆಮಾವನ್ನು ಗೆಲ್ಲಿಸುತ್ತದೆ. ಅದರೆ ಕೆಲ ವಿಮರ್ಶಕರು ಐತಿಹಾಸಿಕವಾಗಿ ಈ ಸಿನೆಮಾದಲ್ಲಿ ಅನೇಕ ಮಾಹಿತಿಗಳು ತಪ್ಪಾಗಿ ಬಿಂಬಿತವಾಗಿವೆ ಎಂದೂ ಟೀಕಿಸಿದ್ದಾರೆ. ಸ್ಟಾಸಿ ಅಧಿಕಾರವನ್ನು ಅನಗತ್ಯವಾಗಿ ಕ್ಷುಲ್ಲಕತೆಗೆ ಇಳಿಸಲಾಗಿದೆ, ಅದರ ಅಧಿಕಾರಿ ವೈಸ್ಲರ್‌ನನ್ನು ಆರಂಭದಲ್ಲಿ ದಾಳಿಕೋರನಂತೆ ಬಿಂಬಿಸಿ ನಂತರ ಮನಪರಿವರ್ತನೆಗೊಂಡ ಸಂವೇದನಾಶೀಲ ವ್ಯಕ್ತಿ ಮತ್ತು ಕಡೆಗೆ ಪ್ರೇಕ್ಷಕರ ಅನುಕಂಪಕ್ಕೆ ಪಾತ್ರನಾಗುವ ಜರ್ಮನ್‌ನಂತೆ ಚಿತ್ರಿಸಲಾಗಿದೆ ಎಂದೂ ಟೀಕಿಸಿದ್ದಾರೆ. ಆದರೆ ಇದೆಲ್ಲವನ್ನೂ ಮೀರಿ ಇಲ್ಲಿ ಸ್ಟಾಸಿ ಎನ್ನುವುದು ಒಂದು ಸಂಕೇತ ಮಾತ್ರ. ಹಳಿ ತಪ್ಪಿದ ಸಿದ್ಧಾಂತಗಳು ಮತ್ತು ತನ್ನ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳಲು ಮತ್ತೊಂದು, ಮಗದೊಂದು ತಪ್ಪುಗಳನ್ನು ಮಾಡುತ್ತಲೇ ಹೋಗುವ ಪ್ರಭುತ್ವದ ಅನೈತಿಕತೆಯನ್ನು ನಿರೂಪಿಸಲು ನಿರ್ದೇಶಕ ಹೆಂಕೆಲ್ ಡಾನ್ನರ್ಸ್‌ಮಾರ್ಕ್ ಸ್ಟಾಸಿಯನ್ನು ಬಳಸಿಕೊಂಡಿದ್ದಾರೆ. ‘ದ ಲೈವ್ಸ್ ಆಫ್ ಅದರ್ಸ್‌’ ಸಿನೆಮಾ ಮನುಷ್ಯನ ನೈತಿಕ ಪ್ರಜ್ಞೆಯನ್ನು ಆ ಮೂಲಕ ಆತನ ಅಸ್ತಿತ್ವದ ಪ್ರಶ್ನೆಯನ್ನು ಮತ್ತೆ ಮತ್ತೆ ಕೆಣಕುತ್ತದೆ. ಇದು ಅಸ್ತಿತ್ವವಾದದ ಸಿನೆಮಾ ಸಹ.

ಇಡೀ ಸಿನೆಮಾದ ಉದ್ದಕ್ಕೂ ನಗುವೇ ಗೊತ್ತಿಲ್ಲದ, ಸದಾ ಮುಖವನ್ನು ನಿಶ್ಚಲಗೊಳಿಸಿಕೊಂಡ ಸ್ಟಾಲಿನ್‌ವಾದಿ ಅಧಿಕಾರಿಯಂತೆ ವರ್ತಿಸುವ ವೈಸ್ಲರ್ ಪಾತ್ರದಾರಿ Mühe ಈ ಸಿನೆಮಾದ ಜೀವಾಳ. ಅತ್ಯುತ್ತಮವಾಗಿ ನಟಿಸಿರುವ Mühe ವೈಸ್ಲರ್ ಪಾತ್ರದ ಕಠೋರತೆ, ಗೊಂದಲ ಮತ್ತು ದ್ವಂದ್ವವನ್ನು ಅದ್ಭುತವಾಗಿ ವ್ಯಕ್ತಪಡಿಸಿದ್ದಾನೆ. ಮೂಲಭೂತವಾಗಿ ರಂಗಭೂಮಿ ನಟನಾಗಿರುವ Mühe ಅದರ ಅನುಭವವನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದಾನೆ. ಆರ್ವೆಲ್‌ನ 1984 ಕಾದಂಬರಿಯ ಪಾತ್ರಗಳು ಇಲ್ಲಿ ಮೈದಾಳಿವೆಯೇನೋ ಎಂಬಂತೆ ಇಡೀ ಸಿನೆಮಾವನ್ನು ಕಟ್ಟಿರುವ ನಿರ್ದೇಶಕ ಹೆಂಕೆಲ್ ಡಾನ್ನರ್ಸ್‌ಮಾರ್ಕ್ ತನ್ನ ಚೊಚ್ಚಲ ಪ್ರಯತ್ನದಲ್ಲಿ ಕಸುಬುದಾರ ಕಲಾವಿದನ ಪ್ರತಿಭೆ ತೋರಿಸಿದ್ದಾನೆ. ಆದರೆ ಪೂರ್ವ ಜರ್ಮನಿಯ ಪ್ರಭುತ್ವ ಸಮಾಜವಾದದ ನಿರಂಕುಶ ಆಡಳಿತದ ಕುರಿತಾಗಿ ಬರೆಯುವಾಗ ಆರ್ವೆಲ್ ಎಚ್ಚರಿಕೆಯಿಂದ ಕಾಪಿಟ್ಟುಕೊಳ್ಳುವ ಸಂಕೀರ್ಣತೆ ಮತ್ತು ವೈಚಾರಿಕತೆಯು ನಿರ್ದೇಶಕ ಡಾನ್ನರ್ಸ್‌ಮಾರ್ಕ್‌ನಲ್ಲಿ ಕಾಣೆಯಾಗಿದೆ. ಇಲ್ಲಿ ಎಲ್ಲಾ ಪಾತ್ರಗಳು ‘ಒಳ್ಳೆಯವ ಎಂದಿದ್ದರೂ ಬದುಕುಳಿಯುತ್ತಾನೆ, ಕೆಟ್ಟವ ಎಂದಿದ್ದರೂ ನಾಶವಾಗುತ್ತಾನೆ’ ಎಂಬ ಕಪ್ಪು-ಬಿಳುಪಿನಲ್ಲಿ ಮೂಡಿಬಂದಿವೆ. ಇದು ಈ ಸಿನೆಮಾದ ಬಲು ದೊಡ್ಡ ಮಿತಿ.

ಪೂರ್ವ ಕಮ್ಯುನಿಸ್ಟ್ ದೇಶಗಳೆಲ್ಲವೂ ನಿರಂಕುಶ ಪ್ರಭುತ್ವ, ಪಶ್ಚಿಮ ರಾಷ್ಟ್ರಗಳೆಲ್ಲವೂ ಪ್ರಜಾಪ್ರಭುತ್ವವಾದಿಗಳು ಎಂಬುದು ಒಂದು ಮಿಥ್ಯೆ. ಇದು ಸರಳೀಕರಣಗೊಂಡ ಹುಸಿಯಾದ ಗ್ರಹಿಕೆ. ಈ totalitarian, ಈ ನಿರಂಕುಶ ಪ್ರಭುತ್ವ ಎನ್ನುವುದು ಪಶ್ಚಿಮಕ್ಕೂ ಅನ್ವಯಿಸುತ್ತದೆ ಎಂದು ನಿರೂಪಿಸುವ ಸಾಧ್ಯತೆಯನ್ನು ನಿರ್ದೇಶಕ ಡಾನ್ನರ್ಸ್‌ಮಾರ್ಕ್ ಇಲ್ಲಿ ಬಳಸಿಕೊಳ್ಳಲಿಲ್ಲ. ಕಳೆದ ಒಂದು ದಶಕದಲ್ಲಿ ಬ್ರೆಝಿಲ್, ಅಮೆರಿಕ, ಫ್ರಾನ್ಸ್, ಟರ್ಕಿ, ಇಂಡಿಯಾ, ಶ್ರೀಲಂಕಾ ಮುಂತಾದ ಪಶ್ಚಿಮ, ಏಶ್ಯ ದೇಶಗಳಲ್ಲಿ ತೀವ್ರ ಬಲಪಂಥೀಯ ನಿರಂಕುಶ ಪ್ರಭುತ್ವ ಅಧಿಕಾರಕ್ಕೆ ಬಂದಿರುವುದನ್ನು ಕಂಡಾಗ ‘ದ ಲೈವ್ಸ್ ಆಫ್ ಅದರ್ಸ್‌’ ಸಿನೆಮಾ ವಿಶ್ವವ್ಯಾಪಿ ಎಂದೂ ಹೇಳಬೇಕಾಗುತ್ತದೆ. ಇಂದು ಮೋದಿ-ಆರೆಸ್ಸೆಸ್ ಆಡಳಿತದ ಭಾರತದಲ್ಲಿ ‘ಇತರರ ಬದುಕು’ ಹೀನಾಯ ಸ್ಥಿತಿಯಲ್ಲಿದೆ. ಅಮಿತ್ ಶಾ ನೇತೃತ್ವದ ದೊಡ್ಡಣ್ಣ ಪಡೆಯು ‘ಇತರರ ಬದುಕನ್ನು’ ಕಣ್ಗಾವಲು ಕಾಯುತ್ತಿದೆ. ಇಂದು ಭಾರತದಲ್ಲಿ ಬಜರಂಗದಳ, ವಿಎಚ್‌ಪಿ, ಎಬಿವಿಪಿ, ಸಿಬಿಐ ಇತ್ಯಾದಿ ಹತ್ತಾರು ‘ಸ್ಟಾಸಿ’ಗಳಿವೆ.

ಆದರೆ ಇದೆಲ್ಲದರ ನಡುವೆಯೂ ಒಂದು ಬಗೆಯ ಭಯಂಕರ ದುಃಖ ಮತ್ತು ತಲ್ಲಣವನ್ನು ಇಡೀ ಸಿನೆಮಾದ ಆತ್ಮದಂತೆ ಕಟ್ಟಿರುವ ನಿರ್ದೇಶಕನ ಪ್ರತಿಭೆಯನ್ನು ಮೆಚ್ಚಿಕೊಳ್ಳಲೇಬೇಕು. ಸಿನಿಕತನವೂ ಇಲ್ಲಿ ವಿಶ್ವಾಸವಾಗಿ ಬದಲಾಗುತ್ತದೆ. ಇದು ಈ ಸಿನೆಮಾದ ಯಶಸ್ಸು. ಮತ್ತೊಮ್ಮೆ ಹೇಳಲೇಬೇಕೆಂದರೆ ಅತ್ಯುತ್ತಮ ಚಿತ್ರಕತೆ ಹೇಗಿರುತ್ತದೆ ಎನ್ನುವುದಕ್ಕೆ ‘ದ ಲೈವ್ಸ್ ಆಫ್ ಅದರ್ಸ್‌’ ಸಿನೆಮಾ ಒಂದು ಉದಾಹರಣೆ.

ಎಂದೂ ಮುಗಿಯದ ಪಯಣ

21ನೇ ಶತಮಾನದ ಪ್ರಮುಖ ಜರ್ಮನ್ ಸಿನೆಮಾಗಳು: ‘ಗುಂಡರ್‌ಮನ್’, ‘ಅಲೋನ್ ಇನ್ ಬರ್ಲಿನ್’, ‘ಗುಡ್ ಬೈ ಲೆನಿನ್’, ‘ಹೆಡ್ ಆನ್’, ಕ್ರಿಸ್ಟಿಯನ್ ಪೆಟ್ಜೋಲ್ಡ್‌ನ ತ್ರಿವಳಿಗಳು (ಬಾರ್ಬರಾ, ಫೀನಿಕ್ಸ್, ಟ್ರಾನ್ಸಿಟ್), ‘ದ ಲೋಬಸ್ಟರ್’, ‘ರಾಮ್ಸ್’, ‘ಇಡಾ’, ‘ದ ವೇವ್’, ‘ಎ ಪ್ರಾಫೆಟ್’, ‘ದ ವೈಟ್ ರಿಬ್ಬನ್’, ‘ದ ಟೂರಿನ್ ಹೌಸ್’ ಇತ್ಯಾದಿ. ಈ ಪಟ್ಟಿ ಅಪೂರ್ಣ

Similar News