ಅರಣ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಆಶ್ರಯದಲ್ಲಿ ಸ್ವಚ್ಛತೆ

Update: 2021-07-25 18:13 GMT

ಬೆಂಗಳೂರು, ಜು. 25: `ಅರಣ್ಯ ಇಲಾಖೆ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದೊಂದಿಗೆ ಎಚ್‍ಸಿಸಿಬಿ ಉದ್ಯೋಗಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಿಬ್ಬಂದಿ ಇಲ್ಲಿನ ಕವಡಹಳ್ಳಿ ಹಾಗೂ ಮಲೈ ಮಹದೇಶ್ವರ ಬೆಟ್ಟದ ನಡುವಿನ 30 ಕಿ.ಮೀಗಳ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಒಟ್ಟು 5 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸುವ ಮೂಲಕ ನೈರ್ಮಲ್ಯ ಕಾಪಾಡಲು ಶ್ರಮಿಸಿದರು.

ಮಲೈಮಹದೇಶ್ವರ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ವಿ.ಯೇಡುಕೊಂಡಲು, ಮಾಲಿನ್ಯ ನಿಯಂತ್ರಣ ಮಂಡಳಿಯ ಮೈಸೂರು ವಿಭಾಗದ ಹಿರಿಯ ಪರಿಸರ ಅಧಿಕಾರಿ ಡಾ.ನಿರಂಜನ್, ಮಾಲಿನ್ಯ ನಿಯಂತ್ರಣ ಮಂಡಳಿಯ ಚಾಮರಾಜನಗರ ಜಿಲ್ಲೆಯ ಪರಿಸರ ಅಧಿಕಾರಿ ರಘುರಾಮ್ ಒಳಗೊಂಡಂತೆ ಹಿರಿಯ ಅಧಿಕಾರಿಗಳು ಸ್ವಯಂ ಸೇವಕರಿಗೆ ಪ್ರೋತ್ಸಾಹ ನೀಡಲು ಸ್ಥಳದಲ್ಲಿ ಉಪಸ್ಥಿತರಿದ್ದರು. 

ಎಚ್‍ಸಿಸಿಬಿ ತಂಪು ಪೇಯಗಳ ಜೊತೆಗೆ, ಭಾಗಿದಾರರಿಗೆ ಮೂಲಸೌಕರ್ಯಗಳ ಬೆಂಬಲ ಒದಗಿಸಿತು. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಮತ್ತು ಸಂಗ್ರಹಣೆಯ ವಿಷಯದಲ್ಲಿ ಎಚ್‍ಸಿಸಿಬಿ ಅಗ್ರಸ್ಥಾನದಲ್ಲಿದ್ದು, ಈ ವರ್ಷದ ಆರಂಭದಲ್ಲಿ `ಪ್ಲಾಸ್ಟಿಕ್ ಲಾವೋ ಥೈಲಾ ಪಾವೊ' ಎಂಬ ವಿಶಿಷ್ಟ ಉಪಕ್ರಮದ ಮೂಲಕ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬದಲು ನಾರಿನ ಚೀಲಗಳನ್ನು ವಿತರಿಸಿತ್ತು. ಈ ಉಪಕ್ರಮದ ಸಂದರ್ಭದಲ್ಲಿ, ಸ್ವಯಂಸೇವಕರುರಸ್ತೆಯ ಅಕ್ಕಪಕ್ಕಗಳಲ್ಲಿ ನೆಲದ ಮಟ್ಟದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲಿಗಳು ಹಾಗೂ ತ್ಯಾಜ್ಯವನ್ನು ಸಂಗ್ರಹಿಸಿದರು. ಅಲ್ಲದೆ, ಸಾರ್ವಜನಿಕರಲ್ಲಿ ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಿಸಿದರು.

`ಜನರು ಮನಸೋ ಇಚ್ಛೆ ಕಸ ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ಬೇಕಾಬಿಟ್ಟಿ ಎಸೆಯುವುದರಿಂದ ಪರಿಸರಕ್ಕೆ ಹಾನಿಯಾಗಲಿದೆ. ಅಲ್ಲದೆ, ಪ್ರಾಣಿ, ಪಕ್ಷಗಳು ಸೇರಿದಂತೆ ಜಲಚರಗಳಿಗೆ ತೀವ್ರ ತೊಂದರೆಯಾಗಲಿದೆ. ಆದುದರಿಂದ ಸಾರ್ವಜನಿಕರು ಅತ್ಯಂತ ಜವಾಬ್ದಾರಿಯಿಂದ ತ್ಯಾಜ್ಯ ವಿಲೇವಾರಿ ಮಾಡಬೇಕು. ಅಲ್ಲದೆ, ಪ್ಲಾಸ್ಟಿಕ್ ತ್ಯಾಜ್ಯದ ಮರುಬಳಕೆ ಸಾಧ್ಯವಾಗುತ್ತದೆ' ಎಂದು ಎಚ್‍ಎಸ್‍ಬಿಸಿ ಅಧಿಕಾರಿ ಕಮ್ಲೇಶ್ ಕುಮಾರ್ ಶರ್ಮಾ ಸಲಹೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News