ಜನಸಂಖ್ಯಾ ನಿಯಂತ್ರಣ ವಿಧೇಯಕ: ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿರುವ ಸರಕಾರ

Update: 2021-07-26 05:02 GMT

ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವ ಉದ್ದೇಶವನ್ನು ಹೊಂದಿದೆಯೆಂದು ಹೇಳಿಕೊಂಡಿರುವ ಉತ್ತರಪ್ರದೇಶ ಜನಸಂಖ್ಯಾ ನಿಯಂತ್ರಣ ವಿಧೇಯಕದ ಕರಡನ್ನು ಉತ್ತರಪ್ರದೇಶ ಸರಕಾರ ಇತ್ತೀಚೆಗೆ ಪ್ರಕಟಿಸಿದೆ. ಸಾರ್ವಜನಿಕರಿಂದ ಸಲಹೆ ಹಾಗೂ ಆಕ್ಷೇಪಗಳನ್ನು ಸ್ವೀಕರಿಸಲು ಕರಡು ವಿಧೇಯಕವನ್ನು ಬಹಿರಂಗವಾಗಿ ಪ್ರಕಟಿಸಲಾಗಿದೆ. ಒಂದು ವೇಳೆ ವಿಧೇಯಕವು ವಿಧಾನಮಂಡಲದಲ್ಲಿ ಅಂಗೀಕಾರಗೊಂಡಲ್ಲಿ ಅದು ಕಾನೂನಾಗಿ ರೂಪುಗೊಳ್ಳಲಿದ್ದು, ಒಂದು ವರ್ಷದ ಬಳಿಕ ಜಾರಿಗೆ ಬರಲಿದೆ. ಈ ಕಾನೂನಿನ ಉದ್ದೇಶವು ಜನಸಂಖ್ಯಾ ನಿಯಂತ್ರಣ ಹಾಗೂ ಸಾಮಾಜಿಕ ಕಲ್ಯಾಣವೆಂದು ಉತ್ತರಪ್ರದೇಶ ಸರಕಾರವು ಹೇಳಿಕೊಂಡಿದೆಯಾದರೂ, ವಾಸ್ತವದಲ್ಲಿ ಅದು ಎರಡಕ್ಕಿಂತ ಹೆಚ್ಚು ಮಕ್ಕಳಿರುವ ದೊಡ್ಡ ಸಂಖ್ಯೆಯ ಕುಟುಂಬ ಗಳನ್ನು ಶಿಕ್ಷಿಸುವ ಉದ್ದೇಶದಿಂದ ಕೂಡಿದೆಯೆಂಬುದು ವಾಸ್ತವ. ಈ ವಿಧೇಯಕ ಜಾರಿಗೆ ಬಂದಲ್ಲಿ ಎರಡಕ್ಕಿಂತ ಅಧಿಕ ಮಕ್ಕಳಿರುವ ಕುಟುಂಬಗಳಿಗೆ ಸರಕಾರಿ ಉದ್ಯೋಗಗಳನ್ನು ನಿರಾಕರಿಸಲಾಗುತ್ತದೆ ಹಾಗೂ ಅವರಿಗೆ ದೊರೆಯುವ ಪಡಿತರ ಕಡಿಮೆಯಾಗಲಿದೆ. ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವುದನ್ನು ನಿಷೇಧಿಸಲಾಗುತ್ತದೆ ಹಾಗೂ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಯೋಜನಗಳನ್ನು ಅವರು ಪಡೆಯದಂತೆ ಮಾಡಲಿದೆ. ಈ ವಿವಾದಾತ್ಮಕ ವಿಧೇಯಕದ ಸೆಕ್ಷನ್ 8ರ ಅನ್ವಯ ಎರಡಕ್ಕಿಂತಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ಅಭಿವೃದ್ಧಿ ಯೋಜನೆಗಳ ಸವಲತ್ತುಗಳನ್ನು ನಿರಾಕರಿಸಲಾಗುವುದು ಹಾಗೂ ಅಂತಹ ಕುಟುಂಬಗಳಿಗೆ ಕೇವಲ ನಾಲ್ಕು ಯೂನಿಟ್‌ಗಳಷ್ಟು ಪಡಿತರ ಮಾತ್ರವೇ ಲಭ್ಯವಾಗಲಿದೆ ಮತ್ತು ಇತರ ಸೂಚಿತ ಸೌಲಭ್ಯಗಳನ್ನು ಕಡಿತಗೊಳಿಸಲಾಗುವುದು.

ವಿಧೇಯಕದ ಸೆಕ್ಷನ್ 9ರ ಪ್ರಕಾರ ಎರಡಕ್ಕಿಂತ ಹೆಚ್ಚು ಮಕ್ಕಳಿರುವವರು ಗ್ರಾಮ ಪಂಚಾಯತ್ ಅಧ್ಯಕ್ಷರು, ಬ್ಲಾಕ್ ಅಭಿವೃದ್ಧಿ ಮಂಡಳಿ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅನರ್ಹರಾಗುತ್ತಾರೆ. ಸ್ಥಳೀಯ ಸಂಸ್ಥೆಗಳ ಚುನಾ ವಣೆಗಳಿಗೂ ಇದೇ ನಿರ್ಬಂಧಗಳು ಅನ್ವಯವಾಗಲಿವೆ. ಒಂದು ವೇಳೆ ಈ ಹುದ್ದೆಗಳನ್ನು ಅಲಂಕರಿಸಿರುವವರು ಎರಡು ಮಕ್ಕಳ ಮಿತಿ ಕಾನೂನನ್ನು ಉಲ್ಲಂಘಿಸಿದಲ್ಲಿ ಆತ/ಆಕೆಯನ್ನು ಹುದ್ದೆಯಿಂದ ಕೈಬಿಡಲಾಗುವುದು ಮತ್ತು ಭವಿಷ್ಯದಲ್ಲಿ ಚುನಾವಣೆಗಳಿಗೆ ಸ್ಪರ್ಧಿಸುವುದಕ್ಕೆ ಅನರ್ಹಗೊಳಿಸಲಾಗುವುದು.

ವಿಧೇಯಕದ ಸೆಕ್ಷನ್10ರ ಪ್ರಕಾರ ಇಬ್ಬರಿಗಿಂತ ಹೆಚ್ಚು ಮಕ್ಕಳಿರುವ ಕುಟುಂಬಗಳು ಸರಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವಂತಿಲ್ಲ. ಅಂದರೆ ಅವರಿಗೆ ಸರಕಾರಿ ನೌಕರಿ ದೊರೆಯಲಾರದು. ವಿಧೇಯಕದ ಸೆಕ್ಷನ್ 11ರ ಅನ್ವಯ ಒಂದು ವೇಳೆ ಸೇವೆಯಲ್ಲಿರುವ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ವ್ಯಕ್ತಿಯ ವೇತನ ಹೆಚ್ಚಳ ವನ್ನು ಸ್ಥಗಿತಗೊಳಿಸಲಾಗುತ್ತದೆ. ಅಲ್ಲದೆ ಈ ವಿಧೇಯಕದ ಸೆಕ್ಷನ್ 12ರ ಪ್ರಕಾರ ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸರಕಾರದಿಂದ ಯಾವುದೇ ರೀತಿಯ ಸಬ್ಸಿಡಿ ದೊರೆಯಲಾರದು.

 ಒಂದು ಅಥವಾ ಎರಡು ಮಕ್ಕಳಿರುವ ಕುಟುಂಬಗಳಿಗೆ ಉತ್ತೇಜನಾ ಸವ ಲತ್ತುಗಳನ್ನು ನೀಡುವ ಬಗ್ಗೆ ವಿಧೇಯಕದಲ್ಲಿ ಪ್ರಸ್ತಾವಿಸಲಾಗಿದೆ. ಆದರೆ ಸಾಮಾನ್ಯವಾಗಿ ಎರಡಕ್ಕಿಂತಲೂ ಹೆಚ್ಚು ಮಕ್ಕಳನ್ನು ಹೊಂದಿರುವಂತಹ ದಲಿತರು, ಆದಿವಾಸಿಗಳು ಹಾಗೂ ಬಡಜನರ ಮೇಲೆ ಈ ವಿಧೇಯಕವು ದೊಡ್ಡ ಮಟ್ಟದಲ್ಲಿ ದುಷ್ಪರಿಣಾಮವನ್ನುಂಟು ಮಾಡಲಿದೆ. ಸರಕಾರಿ ಉದ್ಯೋಗಗಳ ನಿರಾಕರಣೆ, ಪಡಿತರ ಮಿತಿಯನ್ನು ನಾಲ್ಕು ಯೂನಿಟ್‌ಗಳಿಗೆ ಮಿತಿಗೊಳಿಸುವುದು, ಸಾಮಾಜಿಕ ಕಲ್ಯಾಣ ಯೋಜನೆಗಳಿಂದ ಮತ್ತು ಎಲ್ಲಾ ರೀತಿಯ ಸಬ್ಸಿಡಿಗಳಿಂದ ಅನರ್ಹಗೊಳಿಸುವುದರಿಂದ ಈ ವರ್ಗವು ಇನ್ನಷ್ಟು ಬಡತನ, ನಿರುದ್ಯೋಗ ಹಾಗೂ ಹಸಿವನ್ನು ಎದುರಿಸಲಿದೆ. ಪ್ರಸಕ್ತ ಕಾಲಘಟ್ಟದಲ್ಲಿ ಬಹುತೇಕ ಬುಡಕಟ್ಟು ಪಂಗಡಗಳಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳಿದ್ದು ಅವರ ಮೇಲೆ ಈ ವಿಧೇಯಕವು ಅತ್ಯಂತ ಕೆಟ್ಟ ಪರಿಣಾಮವನ್ನುಂಟು ಮಾಡಲಿದೆ.

ಬಡತನ, ನಿರುದ್ಯೋಗ, ಅನಕ್ಷರತೆ ಹಾಗೂ ಕುಟುಂಬ ಯೋಜನೆಯ ಕುರಿತಂತೆ ಅರಿವಿನ ಕೊರತೆ ಹಾಗೂ ಆರೋಗ್ಯ ಸೌಕರ್ಯಗಳ ಅಲಭ್ಯತೆ ಇವು ಕುಟುಂಬಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳಕ್ಕೆ ಪ್ರಮುಖವಾದ ಕಾರಣಗಳೆಂದು ಎಲ್ಲರಿಗೂ ತಿಳಿದಿದೆ. ಆದರೆ ಸರಕಾರ ಆ ಬಗ್ಗೆ ತಲೆಕೆಡಿಸಿಕೊಳ್ಳದೆ, ಕಾನೂನಿನ ಮೂಲಕ ಅಸಹಾಯಕ ಜನರನ್ನು ದಂಡಿಸ ಹೊರಟಿದೆ. ಕೊರೋನದ ಎರಡನೇ ಅಲೆಯಲ್ಲಿ ಆರೋಗ್ಯ, ಅಭಿವೃದ್ಧಿ, ಕುಟುಂಬ ಕಲ್ಯಾಣ ಕ್ಷೇತ್ರಗಳಲ್ಲಿ ಆದಿತ್ಯನಾಥ್ ಸರಕಾರದ ವೈಫಲ್ಯವು ಬಟಾ ಬಯಲಾಗಿದೆ. ಉತ್ತರಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆಯು ಪರಾಕಾಷ್ಠೆಯನ್ನು ತಲು ಪಿದ್ದು ಯುವಜನರು ಆ ಬಗ್ಗೆ ನಿರಂತರವಾಗಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ಎಂನರೇಗಾ ಯೋಜನೆಯಡಿ ಕೆಲಸ ಸಿಗದೆ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಕರಾಳವಾದ ಕೃಷಿ ಕಾನೂನುಗಳ ವಿರುದ್ಧ ಹಾಗೂ ತಾವು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಆಗ್ರಹಿಸಿ ರೈತರು ಚಳವಳಿಯ ಹಾದಿ ಹಿಡಿದಿದ್ದಾರೆ.

ಆದಿತ್ಯನಾಥ್ ಸರಕಾರದ ಪ್ರಸ್ತಾವಿತ ಜನಸಂಖ್ಯಾ ವಿಧೇಯಕವು ಸಂಪೂರ್ಣವಾಗಿ ದಲಿತ/ಬುಡಕಟ್ಟು ವಿರೋಧಿ ಹಾಗೂ ಬಡಜನ ವಿರೋಧಿಯಾಗಿದೆ. ಉತ್ತರ ಪ್ರದೇಶದಲ್ಲಿ ಜನಸಂಖ್ಯೆ ಹಾಗೂ ಫಲವಂತಿಕೆ ದರವು ನಿರಂತರವಾಗಿ ಕಡಿಮೆಯಾಗುತ್ತಿದೆ ಹಾಗೂ ಅಲ್ಲಿ ಯಾವುದೇ ರೀತಿಯ ಜನಸಂಖ್ಯಾ ಸ್ಫೋಟದ ಅಪಾಯವಿಲ್ಲ ಎಂದು ತಜ್ಞರು ಈಗಾಗಲೇ ಹೇಳಿದ್ದಾರೆ. ಹೀಗಾಗಿ ಜನಸಂಖ್ಯಾ ನಿಯಂತ್ರಣ ಕುರಿತಾಗಿ ಯಾವುದೇ ರೀತಿಯ ಕಾನೂನು ಅನಗತ್ಯ. ಚುನಾವಣೆಯವರೆಗೆ ನೈಜ ಸಮಸ್ಯೆಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯುವುದೇ ಆದಿತ್ಯನಾಥ್ ಸರಕಾರದ ನೈಜ ಉದ್ದೇಶವಾಗಿರುವಂತೆ ಕಾಣುತ್ತಿದೆ. ಆದುದರಿಂದ ಮುಸ್ಲಿಮರನ್ನು ಗುರಿಯಾಗಿಸಿದಂತೆ ಭಾಸವಾಗುವ ಈ ವಿಧೇಯಕದ ಕುರಿತಂತೆ ಪ್ರತಿಯೊಬ್ಬರು ಅತ್ಯಂತ ಎಚ್ಚರಿಕೆಯನ್ನು ವಹಿಸಬೇಕಾಗಿದೆ ಹಾಗೂ ವಿರೋಧಿಸಬೇಕಾಗಿದೆ. ಇದೇ ಸಂದರ್ಭದಲ್ಲಿ, ಈ ಕಾಯ್ದೆಯಿಂದಾಗಿ ಗ್ರಾಮೀಣ, ಬುಡಕಟ್ಟು ಪ್ರದೇಶದ ಜನರು ಸವಲತ್ತುಗಳಿಂದ ವಂಚಿತರಾದರೆ ಅದು ಕೇವಲ ವೈಯಕ್ತಿಕ ನಷ್ಟವಷ್ಟೇ ಅಲ್ಲ. ಅದರ ಪರಿಣಾಮವನ್ನು ದೇಶವೂ ಅನುಭವಿಸಬೇಕಾಗುತ್ತದೆ. ಒಂದೆಡೆ ದೇಶದಲ್ಲಿ ಯುವಕರ ಸಂಖ್ಯೆ ಇಳಿಮುಖವಾಗಿ ವೃದ್ಧರ ಸಂಖ್ಯೆ ಹೆಚ್ಚುತ್ತಾ ಅಸಮತೋಲನ ಸೃಷ್ಟಿಯಾಗುತ್ತದೆ. ಭಾರತದಲ್ಲಿ ಮಕ್ಕಳು ಪೂರ್ವಯೋಜನೆಯಂತೆ ಹುಟ್ಟುವುದು ಕಡಿಮೆ. ಇಲ್ಲಿ ಗರ್ಭಧಾರಣೆ ಆಕಸ್ಮಿಕ. ಇದು ಅತಿ ಹೆಚ್ಚು ಭ್ರೂಣ ಹತ್ಯೆಗೆ ಕಾರಣವಾಗುತ್ತದೆ. ಹೆಣ್ಣು ಭ್ರೂಣ ಹತ್ಯೆಗೂ ಸರಕಾರದ ಕಾಯ್ದೆ ದುರುಪಯೋಗವಾಗಲಿದೆ. ಜೊತೆಗೆ ಮೂರನೇ ಮಗು ಗುಟ್ಟಾಗಿ ಕಸದ ತೊಟ್ಟಿ ಸೇರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ಬೀದಿ ಮಕ್ಕಳು, ಅನಾಥ ಮಕ್ಕಳ ಸಂಖ್ಯೆ ಹೆಚ್ಚಾಗುತ್ತದೆ. ಸದ್ಯದ ನೀತಿ ಭಾರತದ ಭವಿಷ್ಯವನ್ನು ನಿಸ್ಸಂಶಯವಾಗಿ ಇನ್ನಷ್ಟು ದುಸ್ತರಗೊಳಿಸಲಿದೆ. ಇರುವ ಸಂಪನ್ಮೂಲವನ್ನು ಸಮಾನವಾಗಿ ಹಂಚುವ ಕಾರ್ಯದ ಕಡೆಗೆ ಸರಕಾರ ಗಮನ ಹರಿಸಬೇಕಾಗಿದೆ. ಇರುವ ಜನಸಂಖ್ಯೆಯನ್ನು ಸಂಪನ್ಮೂಲವಾಗಿ ಪರಿವರ್ತಿಸುವ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಉದ್ದೇಶದಿಂದಲೇ ಈ ವಿಧೇಯಕವನ್ನು ಸರಕಾರ ಜಾರಿಗೊಳಿಸಲು ಮುಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News