ಬೆಂಗಳೂರು: ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು; ಜನಜೀವನ ಅಸ್ತವ್ಯಸ್ತ

Update: 2021-07-26 15:58 GMT

ಬೆಂಗಳೂರು, ಜು.26: ರಾಜಧಾನಿ ಬೆಂಗಳೂರಿನಲ್ಲಿ ರವಿವಾರ ತಡರಾತ್ರಿಯೂ ಮಳೆ ಸುರಿದ ಪರಿಣಾಮ, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು.

ನಗರದ ವಿಲ್ಸನ್ ಗಾರ್ಡನ್, ಶಾಂತಿನಗರ, ಯಶವಂತಪುರ, ಪೀಣ್ಯ, ಮಲ್ಲೇಶ್ವರ, ರಾಜಾಜಿನಗರ, ವಿಜಯನಗರ, ಬಸವೇಶ್ವರನಗರ, ಮಹಾಲಕ್ಷ್ಮೀ ಬಡಾವಣೆ, ಆರ್.ಟಿ.ನಗರ, ಹೆಬ್ಬಾಳ, ಶಿವಾಜಿನಗರ, ಅಶೋಕನಗರ, ಎಂ.ಜಿ.ರಸ್ತೆ, ಕೋರಮಂಗಲ, ಮಡಿವಾಳ, ಬನಶಂಕರಿ, ಬಸವನಗುಡಿ, ಹನುಮಂತನಗರ, ಗಿರಿನಗರ, ದೀಪಾಂಜಲಿ ನಗರ, ರಾಜರಾಜೇಶ್ವರಿ ನಗರ, ಮೈಸೂರು ರಸ್ತೆ ಭಾಗದ ಪ್ರದೇಶಗಳು ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಮಳೆ ಜೋರಾಗಿದ್ದ ಪರಿಣಾಮ ಕಾಲುವೆಗಳು ನೀರಿನಿಂದ ತುಂಬಿ ಹರಿದವು.

ಶಿವಾನಂದ ವೃತ್ತದ ಬಳಿಯ ರೈಲ್ವೆ ಕೆಳಸೇತುವೆ, ಮೆಜೆಸ್ಟಿಕ್ ಬಳಿಯ ರೈಲ್ವೆ ಕೆಳ ಸೇತುವೆ, ಬಳ್ಳಾರಿ ರಸ್ತೆಯ ವಿಂಡ್ಸರ್ ಮ್ಯಾನರ್ ಸೇತುವೆಗಳ ಬಳಿ ರಸ್ತೆಯಲ್ಲಿ ನೀರು ಹೊಳೆಯಂತೆ ಹರಿದ ದೃಶ್ಯ ಕಂಡಿತು.

ಕುಸಿದ ಮನೆ: ನಗರದ ದೊಮ್ಮಲೂರಿನ ಗೌತಮ್ ಕಾಲನಿಯಲ್ಲಿ ಮಳೆಯ ಅಬ್ಬರಕ್ಕೆ ಸಿಲುಕಿ ಮನೆಯೊಂದು ಕುಸಿದಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇರಲಿಲ್ಲವಾದ್ದರಿಂದ ಜೀವಹಾನಿ ಸಂಭವಿಸಿಲ್ಲ. ಮನೆಯವರು ಸಂಬಂಧಿಕರ ಮನೆಗೆ ಹೋಗಿದ್ದರಿಂದ ಅನಾಹುತ ತಪ್ಪಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಇನ್ನು, ಪ್ರತಿ ಮಳೆಗಾಲದಲ್ಲೂ ಮನೆಯೊಳಗೆ ನೀರು ನುಗ್ಗುವ ಸಮಸ್ಯೆ ಉಂಟಾಗುತ್ತಿದೆ. ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡರು. ಇಲ್ಲಿನ ಇಪ್ಪತ್ತಕ್ಕೂ ಅಧಿಕ ಮನೆಗಳಿಗೆ ಮಳೆಯ ನೀರು ನುಗ್ಗಿದ್ದು, ಅದನ್ನು ಖಾಲಿ ಮಾಡಲು ಪರದಾಡಿದರು.

ಆಸ್ಪತ್ರೆಗೆ ತೆರಳಲು ಪರದಾಟ: ಹಲಸೂರಿನ ಗುಪ್ತ ಲೇಔಟ್‍ನಲ್ಲಿ ವೃದ್ಧರೊಬ್ಬರು ಆಸ್ಪತ್ರೆಗೆ ತೆರಳಲು ಪರದಾಡಿದರು. ಮನೆಯ ಸುತ್ತಮುತ್ತಲಿನ ರಸ್ತೆಯಲ್ಲಿ ಎಲ್ಲಿ ತುಂಬಿದ ಕಾರಣ, ಆರೋಗ್ಯದಲ್ಲಿ ಏರುಪೇರಾದರೂ ತುರ್ತಾಗಿ ಆಸ್ಪತ್ರೆಗೆ ತೆರಳಲಾಗದೇ ವೃದ್ಧರೊಬ್ಬರು ತೊಂದರೆಗೆ ಸಿಲುಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News