ಲಾರಿಯಲ್ಲಿ ರುಂಡ ಪತ್ತೆಯಾದ ಪ್ರಕರಣ: ಬಿಎಂಟಿಸಿ ಚಾಲಕನ ಬಂಧನ

Update: 2021-07-26 17:49 GMT

ಬೆಂಗಳೂರು, ಜು.26: ಸರಕು ಸಾಗಣೆ ಲಾರಿಯಲ್ಲಿ ರುಂಡ ಪತ್ತೆಯಾದ ಪ್ರಕರಣ ಭೇದಿಸಿರುವ ರೈಲ್ವೇ ವಿಭಾಗದ ಪೊಲೀಸರು, ಬಿಎಂಟಿಸಿ ಚಾಲಕನೋರ್ವನನ್ನು ಬಂಧಿಸಿದ್ದಾರೆ.

ಸೋಮವಾರ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ರೈಲ್ವೆ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್, ತುಮಕೂರು ಮೂಲದ ಎಂ.ಬಿ.ಬಾಲಚಂದ್ರ(42) ಎಂಬಾತ ಬಂಧಿತ ಬಿಎಂಟಿಸಿ ಚಾಲಕ ಎಂದು ಹೇಳಿದರು.

ಇತ್ತೀಚಿಗೆ ಮಂಡ್ಯ ಜಿಲ್ಲೆಯ ತೂಬಿನಕೆರೆ ಗ್ರಾಮದ ನಿಂಗಮ್ಮ ಕೊಲೆಯಾದ ವೃದ್ಧೆಯಾಗಿದ್ದು, ಹಳಿ ಮೇಲೆ ಮುಂಡ, ಲಾರಿಯಲ್ಲಿ ರುಂಡ ಹಾಗೂ ವೃದ್ದೆ ನಾಪತ್ತೆಯಾದ ಬಗ್ಗೆ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.

ಆರೋಪಿ ಬಾಲಚಂದ್ರ, ಬೆಂಗಳೂರಿನಲ್ಲಿ ನೆಲೆಸಿ, ಬಿಎಂಟಿಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮೃತ ವೃದ್ಧೆಯ ಸೊಸೆ ಜೊತೆ ಸಲುಗೆ ಹೊಂದಿದ್ದ. ಇನ್ನು, ಪಿಂಚಣಿ ತರಲು ವೃದ್ಧೆ ನಿಂಗಮ್ಮ, ತುಮಕೂರಿನಿಂದ ಬೆಂಗಳೂರಿಗೆ ಇತ್ತೀಚೆಗೆ ಬಂದಿದ್ದರು. ಅದೇ ಸಂದರ್ಭದಲ್ಲೇ ಸೊಸೆ ಜೊತೆ ಜಗಳವಾಗಿತ್ತು. ವೃದ್ಧೆಗೆ ಸೊಸೆ ಹೊಡೆದಿದ್ದರು. ಆಗ ವೃದ್ಧೆ ಮೃತಪಟ್ಟಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. 
ಮೃತದೇಹವನ್ನು ಆರೋಪಿ ಬಾಲಚಂದ್ರ ರೈಲ್ವೆ ಹಳಿ ಮೇಲೆ ಎಸೆದಿದ್ದ. ನಂತರ, ರೈಲು ಹರಿದು ಬೇರ್ಪಟ್ಟ ರುಂಡವನ್ನು ನೆಲಮಂಗಲ ಬಳಿ ಲಾರಿಯಲ್ಲಿ ಹಾಕಿದ್ದ. ಅದೇ ಲಾರಿ ಇಳಕಲ್‍ವರೆಗೆ ಹೋಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಜಂಟಿಯಾಗಿ ಪೊಲೀಸರು ತನಿಖೆ ನಡೆಸಿ ಪ್ರಕರಣ ಭೇದಿಸಿದ್ದಾರೆ. ಇನ್ನು, ಆರೋಪಿ ಮಹಿಳೆ ತಲೆಮರೆಸಿಕೊಂಡಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಭಾಸ್ಕರ್ ರಾವ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News