ಎಲ್ಗಾರ್ ಪರಿಷತ್-ಭೀಮಾ ಕೋರೆಗಾಂವ್ ಹಿಂಸಾಚಾರದ ನಡುವೆ ಸಂಬಂಧ ಇಲ್ಲ

Update: 2021-07-26 19:10 GMT

ಮುಂಬೈ, ಜು. 26: 2017 ಡಿಸೆಂಬರ್ 31ರಂದು ನಡೆದ ಎಲ್ಗಾರ್ ಪರಿಷತ್ ಕಾರ್ಯಕ್ರಮ ಹಾಗೂ ಒಂದು ದಿನದ ಬಳಿಕ ನಡೆದ ಭೀಮಾ ಕೋರೆಗಾಂವ್ ಹಿಂಸಾಚಾರದ ನಡುವೆ ಯಾವುದೇ ನಂಟು ಇಲ್ಲ ಎಂದು ಎಲ್ಗಾರ್ ಪರಿಷತ್-ಮಾವೋವಾದಿ ನಂಟು ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಸಾಮಾಜಿಕ ಹೋರಾಟಗಾರರಾದ ರೋನಾ ವಿಲ್ಸನ್ ಹಾಗೂ ಶೋಮ ಸೇನ್ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಸೋಮವಾರ ತಿಳಿಸಿದ್ದಾರೆ.

 ಭೀಮಾ ಕೋರೆಗಾಂವ್ ಘಟನೆಯ ಬಳಿಕ ಸಾಮಾಜಿಕ ಹೋರಾಟಗಾರರ ವಿರುದ್ಧ ದಾಖಲಿಸಲಾಗಿರುವ ಎಫ್ಐಆರ್ ಗಲಭೆ ಹಾಗೂ ಹಿಂಸಾಚಾರಕ್ಕೆ ಸಂಬಂಧಿಸಿದ್ದು, ಯಾವುದೇ ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದ್ದಲ್ಲ ಎಂದು ರೋನಾ ವಿಲ್ಸನ್ ಹಾಗೂ ಶೋಮ ಸೇನ್ ಪರ ವಕೀಲರಾದ ಇಂದಿರಾ ಜೈಸಿಂಗ್ ಹಾಗೂ ಆನಂದ್ ಗ್ರೋವರ್ ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಆರೋಪಿಗಳ ವಿರುದ್ಧ ಕಠಿಣ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲು ಯಾವುದೇ ಕಾನೂನಾತ್ಮಕ ಆಧಾರ ಇಲ್ಲ ಎಂದು ಅವರು ನ್ಯಾಯಮೂರ್ತಿಗಳಾದ ಎಸ್.ಎಸ್. ಶಿಂದೆ ಹಾಗೂ ಎನ್.ಜೆ. ಜಾಮ್ದಾರ್ ಅವರನ್ನು ಒಳಗೊಂಡ ಪೀಠಕ್ಕೆ ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿ ವಿಲ್ಸನ್ನ ಕಂಪ್ಯೂಟರ್ನಿಂದ ಹಾಗೂ ಇತರ ಆರೋಪಿಗಳ ಇಲೆಕ್ಟ್ರೋನಿಕ್ಸ್ ಸಾಧನಗಳಿಂದ ಪತ್ತೆಯಾಗಿರುವುದು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಹೇಳಿದ ಇಲೆಕ್ಟ್ರಾನಿಕ್ಸ್ ಸಾಕ್ಷಗಳ ಪ್ರಾಮಾಣಿಕತೆ ಹಾಗೂ ಕಾನೂನಾತ್ಮಕ ಸಮ್ಮತಿ ಬಗ್ಗೆ ಕೂಡ ಜೈಸಿಂಗ್ ಪ್ರಶ್ನೆಗಳನ್ನು ಎತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News