ಒಂದೇ ತಿಂಗಳಲ್ಲಿ ಎರಡು ಪರೀಕ್ಷೆ ವಿರೋಧಿಸಿ ಬೆಂಗಳೂರು ವಿವಿ ವಿದ್ಯಾರ್ಥಿಗಳ ಪ್ರತಿಭಟನೆ

Update: 2021-07-27 17:10 GMT

ಬೆಂಗಳೂರು, ಜು.27: ಬೆಂಗಳೂರು ವಿಶ್ವವಿದ್ಯಾನಿಲಯದ ಅಂತಿಮ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಒಂದೇ ತಿಂಗಳಿನಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆಯನ್ನು ನಡೆಸದೆ ಒಂದೇ ಪರೀಕ್ಷೆಯನ್ನು ನಡೆಸಬೇಕೆಂದು ಆಗ್ರಹಿಸಿ ಬೆಂಗಳೂರು ವಿಶ್ವವಿದ್ಯಾಲಯ ಹೋರಾಟ ಸಮಿತಿ ಹಾಗೂ ಎಐಡಿಎಸ್‍ಒ ವಿದ್ಯಾರ್ಥಿ ಸಂಘಟನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಮಂಗಳವಾರ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿ, ಕೋವಿಡ್ ಸಂಕಷ್ಟ, ಬೋಧನೆ ನಡೆಯದೆ ಒಂದೇ ತಿಂಗಳಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆಯನ್ನು ಮಾಡಲು ಹೊರಟಿರುವ ಬೆಂಗಳೂರು ವಿಶ್ವವಿದ್ಯಾಲಯದ ಕ್ರಮ ಸರಿಯಲ್ಲವೆಂದು ಖಂಡಿಸಿದ್ದಾರೆ.

ಕುಲಪತಿಗಳ ಸ್ಪಂದನೆ: ವಿದ್ಯಾರ್ಥಿಗಳ ಪ್ರತಿಭಟನೆಗೆ ಪೂರಕವಾಗಿ ಸ್ಪಂದಿಸಿದ ಕುಲಪತಿ ಪ್ರೊ.ವೇಣುಗೋಪಾಲ್, ಪರೀಕ್ಷೆ ನಡೆಸುವುದರ ಕುರಿತು ವಿದ್ಯಾರ್ಥಿ ಸಂಘಟನೆ ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜತೆಗೆ ಸಮಾಲೋಚನೆ ನಡೆಸಿಯೇ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಎಐಡಿಎಸ್‍ಒ ಜಿಲ್ಲಾಧ್ಯಕ್ಷೆ ಸಿತಾರ ಹಾಗೂ ಜಿಲ್ಲಾ ಕಾರ್ಯದರ್ಶಿ ಕಲ್ಯಾಣ್ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಹೋರಾಟ ಸಮಿತಿಯ ಸದಸ್ಯರು ಪ್ರದೀಪ್, ರಾಜೀವ್, ನಿಖಿಲ್, ಸತ್ಯಶ್ರೀ, ಲಕ್ಷ್ಮಿಶ್ರೀ, ಮನೋಜ್, ರಾಕೇಶ್, ವಿನೋದ್, ಮೋಹನ್, ನಿಖಿಲ್ ಉಪಸ್ಥಿತರಿದ್ದರು..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News