ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ನೂತನ ಸಿಎಂ ಬೊಮ್ಮಾಯಿ ಸರಿಪಡಿಸಲಿ: ಡಿ.ಕೆ.ಶಿವಕುಮಾರ್

Update: 2021-07-28 05:11 GMT

ಬೆಂಗಳೂರು, ಜು.28: 'ಕಳೆದ ಎರಡು ವರ್ಷದಿಂದ ರಾಜ್ಯಕ್ಕಾಗಿರುವ ಅನ್ಯಾಯವನ್ನು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಿಪಡಿಸಲಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಬುಧವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಕಳೆದ ಎರಡು ವರ್ಷಗಳಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುತ್ತಾರೆಂಬ ನಿರೀಕ್ಷೆ ಇದೆ. ಕೇಂದ್ರ ಸರ್ಕಾರವು ನೀರಾವರಿ, ಹಣಕಾಸು ಸೇರಿದಂತೆ ಯಾವುದೇ ವಿಚಾರದಲ್ಲೂ ರಾಜ್ಯಕ್ಕೆ ಸಹಕಾರ ಕೊಟ್ಟಿಲ್ಲ. ಯಡಿಯೂರಪ್ಪ ಕಣ್ಣೀರು ಹಾಕಿ, ನೋವು ವ್ಯಕ್ತಪಡಿಸಿದ್ದಾರೆ. ನಮಗೆ ಒಳ್ಳೆಯ ಆಡಳಿತ ಬೇಕು ಅಷ್ಟೇ ಎಂದರು.

ಕೇಂದ್ರ ನಾಯಕರು ನನಗೆ ಸಂಪುಟ ರಚನೆಗೆ ಎರಡು ತಿಂಗಳು ಅವಕಾಶ ನೀಡಲಿಲ್ಲ ಎಂದು ಯಡಿಯೂರಪ್ಪ ಹೇಳಿಕೊಂಡಿದ್ದಾರೆ. ಅನೇಕ ರೀತಿಯಲ್ಲಿ ತಮಗಾದ ನೋವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನೇಕರು ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಚಂಡ ಹೋರಾಟ ಮಾಡಿದ್ದಾರೆ. ಕೆಲವು ಮಂತ್ರಿಗಳು ಸಿಎಂ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದರು, ಮತ್ತೆ ಕೆಲವರು ಪರೀಕ್ಷೆ ಬರೆದಿರುವುದಾಗಿ ತಿಳಿಸಿದರು. ಶಾಸಕರಿಂದಲೂ ಅವರಿಗೆ ವಿರೋಧ ವ್ಯಕ್ತವಾಗಿದೆ. ಸರ್ಕಾರದಲ್ಲಿ ಸಮನ್ವಯತೆ ಇರಲಿಲ್ಲ. ಹೀಗಾಗಿ ಎರಡು ವರ್ಷಗಳಲ್ಲಿ ರಾಜ್ಯ 20 ವರ್ಷಗಳಷ್ಟು ಹಿಂದಕ್ಕೆ ಹೋಗಿದೆ. ಏನೇನಾಗಿದೆ ಎಂದು ಬೇರೆ ಸಮಯದಲ್ಲಿ ಮಾತನಾಡೋಣ. ಬಿಜೆಪಿಯಲ್ಲಿ ಯಾರ ಕೈ ಮೇಲಾಯ್ತು ಎಂಬುದು ಆ ಪಕ್ಷದ ಆಂತರಿಕ ವಿಚಾರ. ಅದು ನಮಗೆ ಬೇಡ. ಬೊಮ್ಮಾಯಿ ಉತ್ತಮ ಆಡಳಿತ ನೀಡಲಿ, ರಾಜ್ಯಕ್ಕೆ ನ್ಯಾಯ ಒದಗಿಸಲಿ ಎಂದು ಡಿಕೆಶಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News