ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ

Update: 2021-07-28 16:40 GMT
Photo credit: ಚಂದನ ವಾಹಿನಿ ವೀಡಿಯೋ ಸ್ಕ್ರೀನ್ ಶಾಟ್

ಬೆಂಗಳೂರು, ಜು.28: ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ರಾಜಭವನದ ಗಾಜಿನ ಮನೆಯಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿಂದು ಪ್ರಮಾಣ ವಚನ ಸ್ವೀಕರಿಸಿದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಧಿಕಾರ ಮತ್ತು ಗೌಪ್ಯತೆ ಪ್ರಮಾಣ ವಚನ ಬೋಧಿಸಿದರು. ಬೊಮ್ಮಾಯಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 

ಬಳಿಕ ನೂತನ ಮುಖ್ಯಮಂತ್ರಿ ಕಡತಕ್ಕೆ ಸಹಿ ಹಾಕಿದರು. ನಂತರ ರಾಜ್ಯಪಾಲರು ಬೊಮ್ಮಾಯಿ ಅವರಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು.

ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಕಾರ್ಯಕ್ರಮ ನಡೆಸಿಕೊಟ್ಟರು.

ನೂತನ ಮುಖ್ಯಮಂತ್ರಿಯನ್ನು  ನಿರ್ಗಮಿತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿನಂದಿಸಿದರು.

ಬುಧವಾರ ಸಂಜೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿತ್ತು.

`ರಾಜ್ಯದ ಮುಖ್ಯಮಂತ್ರಿಯಾಗಿ ನಮ್ಮ ತಂದೆ ಪ್ರಮಾಣ ವಚನ ಸ್ವೀಕರಿಸಿರುವುದು ಬಹಳ ಸಂತಸ ತಂದಿದೆ. ಇದಕ್ಕೆ ಕಾರಣೀಭೂತರು ಆಗಿರುವ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಹಿರಿಯ ಮುಖಂಡ ಬಿ.ಎಲ್.ಸಂತೋಷ್ ಸೇರಿದಂತೆ ಪಕ್ಷದ ಎಲ್ಲ ಹಿರಿಯರ ಹಾಗೂ ಶಿಗ್ಗಾವಿ ಮತಕ್ಷೇತ್ರದ ಪ್ರಬುದ್ಧ ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ' 

-ಭರತ್ ಬೊಮ್ಮಾಯಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ

ರಾಜ್ಯಕ್ಕೆ ಮುಖ್ಯಮಂತ್ರಿ, ನಿಮಗೆ ಮಾತ್ರ ಅದೇ ಬಸವರಾಜ: ನಾನು ರಾಜ್ಯಕ್ಕೆ ಮುಖ್ಯಮಂತ್ರಿ ಆದರೂ ನಿಮಗೆ(ಶಿಗ್ಗಾಂವಿ-ಸವಣೂರು ಕ್ಷೇತ್ರಕ್ಕೆ) ಮಾತ್ರ ಅದೇ ಬಸವರಾಜ. ನಿಮಗಾಗಿ ಪ್ರತ್ಯೇಕ ಸಮಯ ನೀಡುತ್ತೇನೆ. ಪ್ರತ್ಯೇಕವಾಗಿ ಸಮಾವೇಶವನ್ನು ಮಾಡೋಣ. ಆದರೆ, ಈಗ ಕೊರೋನ ಸಂಕಷ್ಟದ ಸಮಯದಲ್ಲಿದ್ದೇವೆ. ಆದುದರಿಂದ, ಪ್ರತಿಯೊಬ್ಬರೂ ಕೊರೋನ ನಿಯಮಗಳನ್ನು ಪಾಲಿಸಿ ಎಂದು ಬಸವರಾಜ ಬೊಮ್ಮಾಯಿ ಹೇಳಿದರು. ಅಭಿನಂದನಾ ಸಮಾರಂಭದಲ್ಲಿ ಯಡಿಯೂರಪ್ಪ ‘ರಾಜಾಹುಲಿ’, ಬೊಮ್ಮಾಯಿ ‘ಹಾವೇರಿ ಹುಲಿ’ ಎಂಬ ಘೋಷಣೆಗಳು ಪದೇ ಪದೇ ಕೇಳಿ ಬರುತ್ತಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News