ರೈತರ ಮಕ್ಕಳಿಗೆ ಶಿಷ್ಯ ವೇತನ: ಹೊಸ ಯೋಜನೆ ಘೋಷಿಸಿದ ಸಿಎಂ ಬೊಮ್ಮಾಯಿ

Update: 2021-07-28 11:33 GMT

ಬೆಂಗಳೂರು, ಜು. 28: `ರಾಜ್ಯದಲ್ಲಿನ ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ವಿದ್ಯಾರ್ಥಿ(ಶಿಷ್ಯ) ವೇತನ ಹೊಸ ಯೋಜನೆ' ಪ್ರಕಟಿಸಿರುವ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, `ಉದ್ದೇಶಿತ ಯೋಜನೆಗೆ 1 ಸಾವಿರ ಕೋಟಿ ರೂ.ಗಳನ್ನು ಮೀಸಲಿರಿಸಲಾಗುವುದು, ಹಿರಿಯ ನಾಗರಿಕರು, ವಿಕಲಚೇತನರು ಹಾಗೂ ವಿಧವಾ ವೇತನ ಹೆಚ್ಚಳ' ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಿದರು.

ಬುಧವಾರ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಏಕ ವ್ಯಕ್ತಿ ಸಚಿವ ಸಂಪುಟ ಸಭೆ ನಡೆಸಿ, ಅಧಿಕಾರಿಗಳೊಂದಿಗೆ ಸಮಾಲೋಚನೆ ಬಳಿಕ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, `ಸಂಧ್ಯಾ ಸುರಕ್ಷಾ ಯೋಜನೆಯಡಿ ನೀಡಲಾಗುತ್ತಿರುವ ಮಾಸಾಶನವನ್ನು 1 ಸಾವಿರ ರೂ.ನಿಂದ 1,200 ರೂ.ಗಳಿಗೆ ಏರಿಕೆ. ವಿಧವಾ ವೇತನವನ್ನು ಮಾಸಿಕ 600 ರೂ.ನಿಂದ 800 ರೂ.ಗಳಿಗೆ ಹೆಚ್ಚಳ ಮಾಡಲಾಗುವುದು.

ಶೇ.40ರಿಂದ 70ರಷ್ಟು ಅಂಗವೈಕಲ್ಯ ಇರುವ ವಿಕಲಚೇತನರಿಗೆ ನೀಡುವ ಮಾಸಿಕ ವೇತನವನ್ನು 600 ರೂ.ನಿಂದ 800 ರೂ.ಗಳಿಗೆ ಏರಿಕೆ ಮಾಡಲಾಗುವುದು. ಈ ಕಾರ್ಯಕ್ಕೆ 90 ಕೋಟಿ ರೂ.ಹೆಚ್ಚುವರಿ ವೆಚ್ಚವಾಗಲಿದ್ದು, ಒಟ್ಟು 3.66 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿದೆ ಎಂದ ಬಸವರಾಜ ಬೊಮ್ಮಾಯಿ, ಸಂಧ್ಯಾ ಸುರಕ್ಷಾ ಯೋಜನೆಗೆ 863.52 ಕೋಟಿ ರೂ. ಹೆಚ್ಚುವರಿ ವೆಚ್ಚವಾಗಲಿದ್ದು, 35.98ಲಕ್ಷ ಫಲಾನುಭವಿಗಳಿಗೆ ಸಹಕಾರವಾಗಲಿದೆ. ಅದೇ ರೀತಿಯಲ್ಲಿ ವಿಧವಾ ವೇತನಕ್ಕೆ 414 ಕೋಟಿ ರೂ.ವೆಚ್ಚವಾಗಲಿದ್ದು, 17.25ಲಕ್ಷ ಮಂದಿ ಫಲಾನುಭವಿಗಳಿಗೆ ಅನುಕೂಲವಾಗಲಿದೆ' ಎಂದು ಅಂಕಿ-ಸಂಖ್ಯೆಗಳನ್ನು ನೀಡಿದರು.

ಪ್ರವಾಹ ಪೀಡಿತ ಉತ್ತರ ಕನ್ನಡ ಜಿಲ್ಲೆಗೆ ಜು.29ರಂದು ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ತಂಡಸ್ಫೂರ್ತಿಯಿಂದ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ 
ನೂತನ ಸಿಎಂ ತಾಕೀತು

`ವಿಶ್ವಾಸಾರ್ಹ, ಜವಾಬ್ದಾರಿಯುತ, ಪಾರದರ್ಶಕ ಹಾಗೂ ದಕ್ಷ ಆಡಳಿತ ನೀಡಲು `ತಂಡಸ್ಫೂರ್ತಿ'ಯಿಂದ ಕಾರ್ಯ ನಿರ್ವಹಿಸಬೇಕು' ಎಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಎಲ್ಲ ಅಧಿಕಾರಿಗಳಿಗೆ ಇಂದಿಲ್ಲಿ ಕಟ್ಟುನಿಟ್ಟಿನ ತಾಕೀತು ಮಾಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News