ಶೇ.5ರಷ್ಟು ಅನಗತ್ಯ ವೆಚ್ಚಗಳಿಗೆ ಕಡಿವಾಣ: ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ

Update: 2021-07-28 11:27 GMT

ಬೆಂಗಳೂರು, ಜು. 28: `ಕೋವಿಡ್-19 ಸೋಂಕಿನ ಸಂಕಷ್ಟದ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಸಂಪನ್ಮೂಲ ಕ್ರೋಡೀಕರಣವನ್ನು ಸದ್ಬಳಕೆ ಮಾಡುವ ನಿಟ್ಟಿನಲ್ಲಿ ರಾಜ್ಯದ ಪ್ರತಿ ಇಲಾಖೆಯಲ್ಲಿಯೂ ವಷಾರ್ಂತ್ಯದ ವೇಳೆಗೆ ಶೇ.5ರಷ್ಟು ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸಬೇಕು' ಎಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಬುಧವಾರ ನೂತನ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಏಕವ್ಯಕ್ತಿ ಸಂಪುಟ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಮಾತನಾಡಿದ ಅವರು, `ಕೊರೋನ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಂಪನ್ಮೂಲವನ್ನು ಉಳಿಸುವ ನಿಟ್ಟಿನಲ್ಲಿ ಮೇಲ್ಕಂಡ ಕ್ರಮ ವಹಿಸಿದ್ದು, ಈ ಕುರಿತು ಮಾರ್ಗಸೂಚಿಗಳನ್ನು ಹೊರಡಿಸುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರಿಗೆ ಸೂಚಿಸಲಾಗಿದೆ' ಎಂದರು.

`ಚಲ್ತಾ ಹೈ' ಮನೋಭಾವ ಸಹಿಸುವುದಿಲ್ಲ: `ಸರಕಾರಿ ಅಧಿಕಾರಿಗಳು ಇನ್ನೂ ಮುಂದೆ ಏನೇ ಮಾಡಿದರೂ ನಡೆಯುತ್ತದೆ ಎಂಬ `ಚಲ್ತಾ ಹೈ' ಮನೋಭಾವನೆ ಬೇಡ. ಅದಕ್ಕೆ ನಾನು ಯಾವುದೇ ಕಾರಣಕ್ಕೂ ಸಮ್ಮತಿಸುವುದಿಲ್ಲ. ಉತ್ತಮ ರೀತಿಯಲ್ಲಿ, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಯಾವುದೇ ಅಧಿಕಾರಿ ಇದ್ದರೂ ಅವರಿಗೆ ನನ್ನ ಕಚೇರಿಗೆ ಸ್ವಾಗತ' ಎಂದು ಅವರು ತಿಳಿಸಿದರು. 

ಅನುಷ್ಠಾನದತ್ತ ಆಡಳಿತ: `ಕೇವಲ ಆದೇಶವಲ್ಲ, ಜನಪರ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದತ್ತ ಆಡಳಿತ ಎಂಬ ಧ್ಯೇಯದೊಂದಿಗೆ ಆರ್ಥಿಕ ಶಿಸ್ತು ಮೂಡಿಸಲು ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲು ಸೂಚಿಸಲಾಗಿದೆ' ಎಂದ ಅವರು, `ಪ್ರಮುಖ ಕಡತಗಳು 15 ದಿನಗಳೊಳಗಾಗಿ ವಿಲೇವಾರಿಗೆ ವಿಶೇಷ ಅಭಿಯಾನ ನಡೆಸಲಾಗುವುದು. ಇನ್ನೂ ಹದಿನೈದು ದಿನಗಳ ಒಳಗೆ ಹೊಸ ದಿಕ್ಸೂಚಿಯೊಂದಿಗೆ ಆಡಳಿತದಲ್ಲಿ ಚುರುಕು ಮೂಡಿಸಲಾಗುವುದು' ಎಂದು ಸ್ಪಷ್ಟಪಡಿಸಿದರು. 

`ನಿಗದಿತ ಕಾಲಮಿತಿಯಲ್ಲಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ತಂಡಸ್ಫೂರ್ತಿಯಿಂದ ಕೆಲಸ ಮಾಡಬೇಕು. ಜೊತೆಗೆ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಈ ಕುರಿತು ಮತ್ತೊಮ್ಮೆ ವಿವರವಾಗಿ ಚರ್ಚಿಸಿ, ಗೊಂದಲ ನಿವಾರಣೆಗೆ ಮಾರ್ಗಸೂಚಿಗಳನ್ನು ರೂಪಿಸಲಾಗುವುದು. ಇಲಾಖೆಗಳ ಕಾರ್ಯನಿರ್ವಹಣೆಗೆ ಶ್ರೇಯಾಂಕ ನೀಡುವ ಮೂಲಕ ದಕ್ಷತೆಯಿಂದ ಕಾರ್ಯನಿರ್ವಹಿಸುವ ಇಲಾಖೆಗಳಿಗೆ ಉತ್ತೇಜನ ನೀಡಲಾಗುವುದು' ಎಂದರು.

ಸಭೆಯಲ್ಲಿ ಮಾತನಾಡಿದ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, `ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರೀಕ್ಷೆಗೆ ತಕ್ಕಂತೆ ಎಲ್ಲ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಭರವಸೆ ನೀಡಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

`ನನ್ನ ಸರಕಾರ ರಾಜ್ಯದಲ್ಲಿನ ದಲಿತರು, ಹಿಂದುಳಿದವರು, ಬಡವರು ಹಾಗೂ ಕೂಲಿ ಕಾರ್ಮಿಕರ ಪರವಾಗಿರಲಿದೆ. ಈ ಸರಕಾರ ಕೇವಲ ಆದೇಶಗಳಿಂದಲ್ಲ, ಪರಿಣಾಮಕಾರಿ ಅನುಷ್ಠಾನದ ಸರಕಾರವಾಗಲಿದೆ. ಇಲಾಖೆಗಳ ಸಂಪೂರ್ಣ ಜವಾಬ್ದಾರಿ ಅಧಿಕಾರಿಗಳ ಮೇಲಿರುತ್ತೆ. ನಿಗದಿತ ಕಾಲಮಿತಿಯಲ್ಲಿ ಯೋಜನೆಗಳ ಅನುಷ್ಠಾನ ಆಗಬೇಕು. ವಿಳಂಬವಾದರೆ ಭ್ರಷ್ಟಾಚಾರಕ್ಕೆ ಮತ್ತು ಹೆಚ್ಚುವರಿ ವೆಚ್ಚಕ್ಕೆ ಎಡೆ ಮಾಡಿಕೊಡಲಿದೆ. ಹೀಗಾಗಿ ಈ ಮನೋಭಾವ ಹೋಗಬೇಕು'

-ಬಸವರಾಜ ಬೊಮ್ಮಾಯಿ ನೂತನ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News