ಬೆಂಗಳೂರು: ಆಟೊ ಚಾಲಕನ ಕೊಲೆ ಪ್ರಕರಣ; ಆರೋಪಿಗಳಿಗೆ ಗುಂಡೇಟು

Update: 2021-07-28 15:06 GMT

ಬೆಂಗಳೂರು, ಜು.28: ಆಟೊ ಚಾಲಕನ ಕೊಲೆ ಪ್ರಕರಣ ಸಂಬಂಧ ಆರೋಪಿಗಳ ಕಾಲಿಗೆ ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಧಿಸುವಲ್ಲಿ ಇಲ್ಲಿನ ಪೂರ್ವ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೋಲಾರ ಮೂಲದ ಕವಿರಾಜ್(45) ,ಆನೇಕಲ್ ಅಂಬರೀಶ್(35) ಬಂಧಿತ ಆರೋಪಿಗಳಾಗಿದ್ದು, ಗುಂಡೇಟಿನಿಂದ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.

2020 ನವೆಂಬರ್ 25ರಂದು ಕೋಲಾರದ ತಮ್ಮ ಫಾರ್ಮ್ ಹೌಸ್ ಬಳಿ ಆರೋಪಿ ಕವಿರಾಜ್ ನೇತೃತ್ವದ ತಂಡ ಮಾಜಿ ಸಚಿವ ವರ್ತೂರು ಪ್ರಕಾಶ್ ಹಾಗೂ ಅವರ ಚಾಲಕನನ್ನು ಅಪಹರಿಸಿ 30 ಕೋಟಿಗೆ ಬೇಡಿಕೆ ಇಟ್ಟಿದ್ದರು.

ಮೂರು ದಿನಗಳ ಬಳಿಕ ಕಾರಿನಲ್ಲಿ ಸುತ್ತಾಡಿಸಿ 48 ಲಕ್ಷ ರೂ.ವಸೂಲಿ ಮಾಡಿ ಪಾರಾಗಿದ್ದರು. ಈ ಸಂಬಂಧ ಕೋಲಾರ ಪೆÇಲೀಸರು ಪ್ರಕರಣ ದಾಖಲಿಸಿ ಕವಿರಾಜ್ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದರು.

ತದನಂತರ ಜಾಮೀನಿನ ಮೇಲೆ ಹೊರಬಂದ ಆರೋಪಿ ಕವಿರಾಜ್ ಹಾಗೂ ಕೋಲಾರದ ಅಂಬರೀಶ್ ಇನ್ನಿತರ ಆರೋಪಿಗಳು ಹಣಕ್ಕಾಗಿ ಅಪಹರಣ ಕೃತ್ಯ ನಡೆಸಲು ಸಂಚು ರೂಪಿಸಿದ್ದರು. ಅದರಂತೆ ಇಂದಿರಾನಗರದ ಆಟೊ ಚಾಲಕ ವಿಜಯ್ ಕುಮಾರ್‍ನನ್ನು ಜು.5 ರಂದು ಅಪಹರಿಸಿ ಹಣ ನೀಡುವಂತೆ ಬೆದರಿಸಿದ್ದಾರೆ. 

ಹಣ ತಲುಪಿಸುವುದು ತಡವಾಗಿದ್ದರಿಂದ ಆರೋಪಿಗಳು ಹೊಸೂರು ಬಳಿ ಬರ್ಬರವಾಗಿ ಕೊಲೆ ಮಾಡಿ ಮೃತದೇಹ ಹೂತು ಹಾಕಿದ್ದಾರೆ. ತನಿಖೆ ನಡೆಸಿದ ಪೊಲೀಸರಿಗೆ ಕವಿರಾಜ್ ಮತ್ತವರ ತಂಡ ಅಪಹರಿಸಿವುದು ತಿಳಿದು ಬಂದಿದ್ದು ಕಾರ್ಯಾಚರಣೆ ಕೈಗೊಂಡ ಪೊಲೀಸರಿಗೆ ಇಂದು ಬೆಳಗ್ಗೆ ಬೈಯ್ಯಪ್ಪನಹಳ್ಳಿ ಬಳಿ ಆರೋಪಿಗಳು ತಲೆಮರೆಸಿಕೊಂಡಿರುವ ಮಾಹಿತಿ ಲಭ್ಯವಾಗಿತ್ತು.

ಕೂಡಲೇ ಪೊಲೀಸರ ತಂಡ ಸ್ಥಳಕ್ಕೆ ತೆರಳಿ ಬಂಧಿಸಲು ಮುಂದಾದಾಗ ಪೊಲೀಸ್ ವಾಹನ ಕಂಡು ಪರಾರಿಯಾಗಲು ಯತ್ನಿಸಿದಲ್ಲದೆ, ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲು ಮುಂದಾಗಿದ್ದಾರೆ.ಶರಣಾಗುವಂತೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಮತ್ತೆ ಹಲ್ಲೆಗೆ ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಮತ್ತೊಂದು ಸುತ್ತು ಗುಂಡು ಹಾರಿಸಿದ್ದು ಅವು ಇಬ್ಬರ ಕಾಲಿಗೆ ತಗುಲಿ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದು ಇಬ್ಬರನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News