ಮಕ್ಕಳ ಆನ್ ಲೈನ್, ಆಫ್ ಲೈನ್ ಆಟಗಳಿಗೆ ನೀತಿ ರೂಪಿಸಿ: ಕೇಂದ್ರ ಸರಕಾರದ ಪ್ರಾಧಿಕಾರಕ್ಕೆ ದಿಲ್ಲಿ ಹೈಕೋರ್ಟ್ ನಿರ್ದೇಶ

Update: 2021-07-28 16:10 GMT

ಹೊಸದಿಲ್ಲಿ, ಜು. 28: ಆನ್ಲೈನ್ ಆಟಗಳ ವ್ಯಸನಿಗಳಾಗುತ್ತಿರುವ ಮಕ್ಕಳನ್ನು ರಕ್ಷಿಸಲು ರಾಷ್ಟ್ರೀಯ ನೀತಿ ರೂಪಿಸುವ ಹಾಗೂ ಈ ಬಗ್ಗೆ ನಿಗಾ ವಹಿಸಲು ನಿಯಂತ್ರಣ ಪ್ರಾಧಿಕಾರ ಸ್ಥಾಪಿಸುವ, ಆನ್ಲೈನ್ ಹಾಗೂ ಆಫ್ಲೈನ್ ಆಟಗಳ ಅಂಶಗಳಿಗೆ ಶ್ರೇಣಿ ನೀಡುವುದನ್ನು ಪರಿಗಣಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಬಗ್ಗೆ ನಿರ್ಧರಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯ ಬುಧವಾರ ಕೇಂದ್ರ ಸರಕಾರದ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದೆ. 

ದೂರುದಾರ ಸಲ್ಲಿಸಿದ ಮನವಿಯ ಕುರಿತು ನಿರ್ಧಾರ ತೆಗೆದುಕೊಳ್ಳುವಂತೆ ನ್ಯಾಯಮೂರ್ತಿಗಳಾದ ಡಿ.ಎನ್. ಪಟೇಲ್ ಹಾಗೂ ಜ್ಯೋತಿ ಸಿಂಗ್ ಗೆ ಅವರನ್ನು ಒಳಗೊಂಡ ನ್ಯಾಯಪೀಠ ಕಳೆದ ಗುರುವಾರ ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ಸಚಿವಾಲಯ, ಕಾನೂನು ಹಾಗೂ ನ್ಯಾಯ ಸಚಿವಾಲಯದ ಅಧಿಕಾರಿಗಳಿಗೆ ನಿರ್ದೇಶಿಸಿತ್ತು. 

ನ್ಯಾಯವಾದಿಗಳಾದ ರೋಬಿನ್ ರಾಜು ಹಾಗೂ ದೀಪಾ ಜೋಸೆಫ್ ಮೂಲಕ ಸರಕಾರೇತರ ಸಂಸ್ಥೆ ಡಿಸ್ಟ್ರೆಸ್ ಮ್ಯಾನೇಜ್ಮೆಂಟ್ ಕಲೆಕ್ಟಿವ್(ಡಿಎಂಸಿ) ಸಲ್ಲಿಸಿದ ಮನವಿಯಲ್ಲಿ, ತಮ್ಮ ಮಕ್ಕಳು ಆನ್ಲೈನ್ ಆಟದ ವ್ಯಸನಿಗಳಾಗುತ್ತಿರುವ ಬಗ್ಗೆ ಹಾಗೂ ಇದರ ಪರಿಣಾಮ ಅವರು ವಿವಿಧ ಮಾನಸಿಕ ಸಮಸ್ಯೆಗಳಿಗೆ ಬಲಿಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಹೆತ್ತವರು ಸಲ್ಲಿಸಿದ ಹಲವು ದೂರುಗಳನ್ನು ಉಲ್ಲೇಖಿಸಿದೆ. 

ಆನ್ಲೈನ್ ಆಟಗಳ ವ್ಯಸನದಿಂದ ಕೆಲವು ಮಕ್ಕಳು ಆತ್ಮಹತ್ಯೆ ಶರಣಾಗಿರುವ, ಖಿನ್ನತೆಗೆ ಒಳಗಾಗಿರುವ, ಕಳವಿನಂತಹ ಅಪರಾಧಗಳನ್ನು ಎಸಗಿರುವ ಸುದ್ದಿಯನ್ನು ನಾವು ಆಲಿಸಿದ್ದೇವೆ. ಆದುದರಿಂದ ತ್ವರಿತವಾಗಿ ವಿಚಾರಣೆ ನಡೆಸುವಂತೆ ಮನವಿ ಆಗ್ರಹಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News