ಬೆಂಗಳೂರು: ಕಳವು ಪ್ರಕರಣ; ಬಂಧನ

Update: 2021-07-28 17:28 GMT

ಬೆಂಗಳೂರು, ಜು.28: ವಿಮಾನದಲ್ಲಿ ವರ್ಷಕ್ಕೊಮ್ಮೆ ಬೆಂಗಳೂರಿಗೆ ಬಂದು ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳವು ಮಾಡಿ ಪರಾರಿಯಾಗುತ್ತಿದ್ದ ಆರೋಪ ಸಂಬಂಧ ಇಬ್ಬರನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಉತ್ತರ ಪ್ರದೇಶ ಮೂಲದ ಅರ್ಜುನ್‍ಕುಮಾರ್ ಮತ್ತು ರಾಥೋಡ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳು ಕಳವು ಮಾಡಿದ ಚಿನ್ನಾಭರಣವನ್ನು ಮಾರಾಟ ಮಾಡಿ ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಇತರೆ ದಿನ ಉಪಯೋಗಿ ವಸ್ತುಗಳನ್ನು ಖರೀದಿಸಿದ್ದಾರೆ. ಬಾಕಿ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದರು. ಉತ್ತರ ಪ್ರದೇಶದ ಶಾಮ್ಲಿ ಎಂಬ ಇಡೀ ಊರೇ ಕಳ್ಳತನದ ಕಸುಬು ಮಾಡಿಕೊಂಡಿದ್ದು ಅಲ್ಲಿನ ಶಾಮ್ಲಿ ಗುಂಪಿನ ಸದಸ್ಯರೇ ಈ ಆರೋಪಿಗಳೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತ್ತೀಚೆಗೆ ವಿಮಾನದಲ್ಲಿ ಬಂದು ಬೆಂಗಳೂರು ಗ್ರಾಮಾಂತರ ಪ್ರದೇಶಗಳಾದ ಸರ್ಜಾಪುರ, ಅನುಗೊಂಡನಹಳ್ಳಿ, ಸೂಲಿಬೆಲೆ, ತಿರುಮಲಶೆಟ್ಟಿಹಳ್ಳಿ, ಹೊಸಕೋಟೆ, ದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿದ್ದರು. ಅಲ್ಲದೆ, ನಗರ ವ್ಯಾಪ್ತಿಯ ಉತ್ತರ ವಿಭಾಗದ ಚಂದ್ರಾಲೇಔಟ್, ರಾಜಾಜಿನಗರ ಠಾಣೆ ವ್ಯಾಪ್ತಿಯಲ್ಲಿ ಚಿನ್ನಾಭರಣ ಕಳವು ಮಾಡಿ ರೈಲುಗಳ ಮೂಲಕ ಪರಾರಿಯಾಗುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News