"ಮೋದಿ ಸರಕಾರ ಸಕಾಲದಲ್ಲಿ ಕ್ರಮ ಕೈಗೊಂಡಿದ್ದರೆ 1.3 ಕೋಟಿ ಕೋವಿಡ್ ಪ್ರಕರಣಗಳು,1 ಲಕ್ಷ ಸಾವುಗಳನ್ನು ತಪ್ಪಿಸಬಹುದಿತ್ತು"

Update: 2021-07-29 13:53 GMT
ಭ್ರಮರ ಮುಖರ್ಜಿ (Twitter/@BhramarBioStat)

ಹೊಸದಿಲ್ಲಿ: ಮೋದಿ ಸರಕಾರವು ಸಕಾಲದಲ್ಲಿ ಕ್ರಮವನ್ನು ಕೈಗೊಂಡಿದ್ದರೆ ಭಾರತದಲ್ಲಿ ಎರಡನೇ ಅಲೆಯ ಸಂದರ್ಭದಲ್ಲಿ 1.3 ಕೋಟಿ ಕೋವಿಡ್ ಪ್ರಕರಣಗಳು ಮತ್ತು ಒಂದು ಲಕ್ಷ ಸಾವುಗಳನ್ನು ತಪ್ಪಿಸಬಹುದಿತ್ತು ಎಂದು ಮಿಚಿಗನ್ ವಿವಿಯಲ್ಲಿ ಭಾರತದಲ್ಲಿಯ ಕೋವಿಡ್-19 ಸ್ಥಿತಿಯ ಬಗ್ಗೆ ಆಳವಾದ ಅಧ್ಯಯನವನ್ನು ನಡೆಸಿರುವ ಅಮೆರಿಕದ ಅತ್ಯಂತ ಗೌರವಾನ್ವಿತ ಜೈವಿಕ ಸಂಖ್ಯಾಶಾಸ್ತ್ರ, ಸಾಂಕ್ರಾಮಿಕ ರೋಗ ಶಾಸ್ತ್ರ ಮತ್ತು ಜಾಗತಿಕ ಜನಾರೋಗ್ಯ ಪ್ರೊಫೆಸರ್‌ಗಳಲ್ಲಿ ಓರ್ವರಾಗಿರುವ ಭ್ರಮರ ಮುಖರ್ಜಿ ಹೇಳಿದ್ದಾರೆ.

ಸುದ್ದಿ ಜಾಲತಾಣ 'The Wire'ಗಾಗಿ ಕರಣ್ ಥಾಪರ್ ಅವರಿಗೆ ನೀಡಿದ ಸಂದರ್ಶನದಲ್ಲಿ ಎರಡನೇ ಅಲೆ ಕುರಿತು ತನ್ನ ಇತ್ತೀಚಿನ ಪ್ರಬಂಧ ‘ಭಾರತದಲ್ಲಿ SARS-CoV-2 :B.1.617.2(ಡೆಲ್ಟಾ) ಪ್ರಭೇದ ಮತ್ತು ವಿಳಂಬಿತ ಹಸ್ತಕ್ಷೇಪದ ಸಂಭಾವ್ಯ ಪಾತ್ರ’ದಲ್ಲಿನ ಬೆರಗುಗೊಳಿಸುವ, ಆದರೆ ಆತಂಕಕಾರಿ ಮತ್ತು ನೆಮ್ಮದಿಗೆಡಿಸುವ ಅಂಶಗಳನ್ನು ವಿವರಿಸಿದ ಮುಖರ್ಜಿ ಎರಡನೇ ಅಲೆಯ ಸಂದರ್ಭ ಭಾರತವು ಅನುಭವಿಸಿದ್ದ ಮಹಾದುರಂತಕ್ಕೆ ಮೋದಿ ಸರಕಾರವು ತಾತ್ವಿಕವಾಗಿ ಹೊಣೆಗಾರನಾಗಿತ್ತು ಎಂದು ನೇರವಾಗಿ ಹೇಳದಿದ್ದರೂ, ಸರಕಾರವನ್ನು ಜವಾಬ್ದಾರಿ ಮತ್ತು ದೂಷಣೆಯಿಂದ ಮುಕ್ತಗೊಳಿಸುವಂತಿಲ್ಲ ಎಂದು 2-3 ಸಂದರ್ಭಗಳಲ್ಲಿ ಒಪ್ಪಿಕೊಂಡರು. ಇದೇ ವೇಳೆ ಕೋವಿಡ್ ಶಿಷ್ಟಾಚಾರಗಳನ್ನು ನಿರ್ಲಕ್ಷಿಸಿದ್ದ ಭಾರತೀಯರನ್ನೂ ದೂಷಣೆಯಿಂದ ಮುಕ್ತಗೊಳಿಸುವಂತಿಲ್ಲ ಎಂದು ಅವರು ಹೇಳಿದರು.

ಸರಕಾರವು ಎರಡನೇ ಅಲೆಯಲ್ಲಿ ಮಾರ್ಚ್ ಮಧ್ಯದಲ್ಲಿ ಅಥವಾ ಉತ್ತರಾರ್ಧದಲ್ಲಿ ಸೌಮ್ಯ ಸ್ವರೂಪದ ಲಾಕ್‌ಡೌನ್ ಘೋಷಿಸಿದ್ದರೆ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ 4,14,000ಕ್ಕೆ ತಲುಪುವ ಬದಲು ಗರಿಷ್ಠವೆಂದರೆ ಅನುಕ್ರಮವಾಗಿ 20,000 ಮತ್ತು 49,000 ಆಗಿರುತ್ತಿತ್ತು. ಅಂದರೆ ಎ.15ರ ವೇಳೆಗೆ ಸುಮಾರು 26 ಲ. ಮತ್ತು ಮೇ 15ರ ವೇಳೆಗೆ ಸುಮಾರು 1.29 ಕೋ.ಪ್ರಕರಣಗಳನ್ನು ತಪ್ಪಿಸಬಹುದಿತ್ತು. ಇದರರ್ಥ ಪ್ರಕರಣಗಳನ್ನು ಶೇ.97ರಷ್ಟು ತಗ್ಗಿಸಬಹುದಿತ್ತು. ಇದೇ ವೇಳೆ 97,000ದಿಂದ 1,09,000ರಷ್ಟು ಸಾವುಗಳನ್ನು ತಪ್ಪಿಸಬಹುದಿತ್ತು. ಇದು ಮಾ.15ರಿಂದ ಮೇ 15ರ ನಡುವೆ ಸಂಭವಿಸಿದ್ದ 1,12,000 ಸಾವುಗಳ ಶೇ.90ರಿಂದ ಶೇ.98ರಷ್ಟಾಗುತ್ತದೆ ಎಂದ ಮುಖರ್ಜಿ, ಸಂಕ್ಷಿಪ್ತವಾಗಿ ಹೇಳುವುದಾದರೆ ಮಾರ್ಚ್‌ನಲ್ಲಿ ಯಾವುದೇ ಸಮಯದಲ್ಲಿ ಕ್ರಮ ಕೈಗೊಂಡಿದ್ದರೆ ಮಾ.1ಮತ್ತು ಮೇ 15ರ ನಡುವೆ ವರದಿಯಾಗಿದ್ದ ಪ್ರಕರಣಗಳು ಮತ್ತು ಸಾವುಗಳನ್ನು ಶೇ.90ರಷ್ಟು ಕಡಿಮೆ ಮಾಡಬಹುದಿತ್ತು ಎಂದರು.

ಈಶಾನ್ಯ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಪ್ರಕರಣಗಳು ಅಸ್ಸಾಮಿನಲ್ಲಿ ಕೋವಿಡ್ ಶಿಷ್ಟಾಚಾರಗಳನ್ನು ಉಲ್ಲಂಘಿಸಿ ಬೇಜವಾಬ್ದಾರಿಯಿಂದ ಚುನಾವಣಾ ಪ್ರಚಾರವನ್ನು ನಡೆಸಿದ್ದ ರೀತಿಯ ಫಲಿತಾಂಶವಾಗಿರಬಹುದು ಎಂದು ಅಭಿಪ್ರಾಯಿಸಿದ ಮುಖರ್ಜಿ, ಆ ಸಂದರ್ಭದಲ್ಲಿ ಆರೋಗ್ಯ ಸಚಿವರಾಗಿದ್ದ ಈಗಿನ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ರಾಜ್ಯದ ಜನರು ಮಾಸ್ಕ್‌ಗಳನ್ನು ಧರಿಸುವ ಅಗತ್ಯವಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದನ್ನು ಬೆಟ್ಟು ಮಾಡಿದರು.

ಭಾರತದಲ್ಲಿ ಒಟ್ಟು 4,20,000 ಕೋವಿಡ್ ಸಾವುಗಳ ಅಧಿಕೃತ ಸಂಖ್ಯೆಯ ಐದು ಅಥವಾ ಆರು ಪಟ್ಟು ಸಾವುಗಳು ಸಂಭವಿಸಿವೆ ಎನ್ನುವುದನ್ನು ತಾನು ಮಿಚಿಗನ್ ವಿವಿಯಲ್ಲಿ ಮಾಡಿದ್ದ ಲೆಕ್ಕಾಚಾರಗಳು ತೋರಿಸಿವೆ. ಅಂದರೆ 20 ಲ.ದಿಂದ 25 ಲ.ಸಾವುಗಳು ಸಂಭವಿಸಿವೆ ಮತ್ತು ಕೋವಿಡ್ ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ 50 ಕೋ.ಯಿಂದ 60 ಕೋ.ಯಷ್ಟಿದೆ ಎಂದು ಹೇಳಿದ ಮುಖರ್ಜಿ, ಎರಡನೇ ಅಲೆಗಿಂತ ಮೊದಲ ಅಲೆಯಲ್ಲಿ ಹೆಚ್ಚು ಸಾವುಗಳು ಸಂಭವಿಸಿರುವ ಸಾಧ್ಯತೆಯಿದೆ ಎಂದು ವಾಷಿಂಗ್ಟನ್‌ನ ಸೆಂಟರ್ ಫಾರ್ ಗ್ಲೋಬಲ್ ಡೆವಲಪ್‌ಮೆಂಟ್‌ನ ಇತ್ತೀಚಿನ ಅಧ್ಯಯನ ವರದಿಯು ಹೇಳಿರುವುದನ್ನು ತಿರಸ್ಕರಿಸಿದರು.

ಭಾರತವು ಇಂದು ಎದುರಿಸುತ್ತಿರುವ ಸ್ಥಿತಿಯ ಬಗ್ಗೆ ಮಾತನಾಡಿದ ಅವರು, ಆರ್ ನಂಬರ್(ಸಾಂಕ್ರಾಮಿಕದ ಹರಡುವ ಸಾಮರ್ಥ್ಯ) 1ರ ಆಸುಪಾಸಿನಲ್ಲಿದ್ದು ಭಾರತವು ಗಂಭೀರ ಸ್ಥಿತಿಯನ್ನು ಅನುಭವಿಸುತ್ತಿದೆ. ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ನಿರ್ಲಕ್ಷಿಸಿ ಹೊಣೆಗೇಡಿತನವನ್ನು ಪ್ರದರ್ಶಿಸಿದರೆ ಆರ್ ನಂಬರ್ ಸುಲಭವಾಗಿ 1ನ್ನು ದಾಟಿ ಮುನ್ನಡೆಯುತ್ತದೆ ಮತ್ತು ಸಾಂಕ್ರಾಮಿಕವು ಅತ್ಯಂತ ವೇಗವಾಗಿ ಹರಡತೊಡಗುತ್ತದೆ. ಇನ್ನೊಂದೆಡೆ ಆರ್ ನಂಬರ್ ಕಡಿಮೆಯಾಗುವ ಸಾಧ್ಯತೆಯೂ ಇದೆ. ಎಲ್ಲವೂ ಜನರ ನಡವಳಿಕೆಯನ್ನು ಅವಲಂಬಿಸಿದೆ ಎಂದರು.

ಮೂರನೇ ಅಲೆಯ ಕುರಿತಂತೆ ಅವರು, ಮಿಚಿಗನ್ ವಿವಿಯಲ್ಲಿಯ ತನ್ನ ಗಣಿತೀಯ ಅಂದಾಜುಗಳು ಆಗಸ್ಟ್ ಕೊನೆಯಲ್ಲಿ ಅಥವಾ ಸೆಪ್ಟೆಂಬರ್ ಪೂರ್ವಾರ್ಧದಲ್ಲಿ ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಉತ್ತುಂಗಕ್ಕೇರುವ ಬದಲು ಹೆಚ್ಚಳ ಕಂಡು ಬರಲಿದೆ ಎನ್ನುವುದನ್ನು ತೋರಿಸಿವೆ ಮತ್ತು ಜನರು ಕಾಳಜಿ ವಹಿಸದಿದ್ದರೆ ಈ ಹೆಚ್ಚಳವು ಸುಲಭವಾಗಿ ಉತ್ತುಂಗಕ್ಕೇರಲಿದೆ ಎಂದರು. ಕೇರಳದಲ್ಲಿನ ಸ್ಥಿತಿಯ ಕುರಿತು ಮಾತನಾಡಿದ ಅವರು, ದೇಶದಲ್ಲಿಯ ಒಟ್ಟು ಪ್ರಕರಣಗಳ ಶೇ.40ರಷ್ಟು ಕೇರಳದಲ್ಲಿ ವರದಿಯಾಗುತ್ತಿದ್ದು ಅದು ಅಪಾಯದ ಕೇಂದ್ರಬಿಂದುವಾಗಿದೆ ಎಂಬ ಮಾಧ್ಯಮ ವರದಿಗಳಿಗೆ ಭಿನ್ನವಾಗಿ ಆ ರಾಜ್ಯದಲ್ಲಿ ಸಮತೋಲನದ ಚಿತ್ರಣವಿದೆ. ರಾಷ್ಟ್ರೀಯ ಮಟ್ಟದಲ್ಲಿಯ ಶೇ.7ಕ್ಕೆ ಹೋಲಿಸಿದರೆ ಕೇರಳದ ಜನಸಂಖ್ಯೆಯ ಶೇ.20ರಷ್ಟು ಜನರು ಸಂಪೂರ್ಣವಾಗಿ ಲಸಿಕೆಯನ್ನು ಪಡೆದುಕೊಂಡಿದ್ದಾರೆ ಮತ್ತು ರಾಷ್ಟ್ರೀಯ ಮಟ್ಟದಲ್ಲಿಯ ಶೇ.68ಕ್ಕೆ ಹೋಲಿಸಿದರೆ ಅಲ್ಲಿ ಸಿರೊ-ಪಾಸಿಟವಿಟಿ ದರ ಕೇವಲ ಶೇ.43ರಷ್ಟಿದೆ. ಇತರ ರಾಜ್ಯಗಳಿಗಿಂತ ಕೇರಳದ ಜನರು ಹೆಚ್ಚಿನ ಸುರಕ್ಷತೆಯನ್ನು ಹೊಂದಿದ್ದಾರೆ ಎನ್ನುವುದನ್ನು ಇದು ತೋರಿಸುತ್ತದೆ ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News