ಚ. ಸರ್ವಮಂಗಳರಿಗೆ ಅಭಿಮಾನಿಗಳ ಪ್ರೀತಿಯ ಅಭಿವಂದನೆ

Update: 2021-07-29 19:30 GMT

ಚ. ಸರ್ವಮಂಗಳ ಅವರು ನೆನಪಾದರೆ ಅವರೊಳಗಿನ ಕವಯಿತ್ರಿ, ಮಹಿಳಾಪರ ಹೋರಾಟಗಾರ್ತಿ, ಕನ್ನಡದ ಪ್ರಾಧ್ಯಾಪಕಿ, ರಂಗದ ಮೇಲಿನ ನಟಿಯಾಗಿ ಚಲನಶೀಲ ವ್ಯಕ್ತಿತ್ವದ ಚಿಲುಮೆಯಾಗಿ ಕಣ್ಮುಂದೆ ನಿಲ್ಲುತ್ತಾರೆ.

ಮಹಾರಾಜ ಕಾಲೇಜಿನಲ್ಲಿ ಕನ್ನಡ ಪಾಠ ಮಾಡುತ್ತ ತನ್ನ ಸೊಗಸಾದ, ದಿಟ್ಟತನದ ಮಾತುಗಳಿಂದ ವಿದ್ಯಾರ್ಥಿಗಳ ಮನಸ್ಸನ್ನು ಆವರಿಸಿಕೊಂಡು ಸಾಂಸ್ಕೃತಿಕ ಚಟುವಟಿಕೆಗಳಿಗೆ ಬೆನ್ನೆಲುಬಾಗಿದ್ದ ಸರ್ವಮಂಗಳ ಅವರು ತಮ್ಮ ಬರಹ, ಹೋರಾಟ, ಬೋಧನೆ, ನಟನೆ, ಸಾಹಿತ್ಯ, ಓದು, ಬರಹ ಹಾಗೂ ವಿಮರ್ಶಾತ್ಮಕ ದೃಷ್ಟಿಕೋನದಲ್ಲಿ ಪಾತ್ರಗಳನ್ನು ಚಿತ್ರಿಕೆಗಳಾಗಿ ಕಣ್ಮುಂದೆ ನಿಲ್ಲಿಸುವಂತಹವರು. ಕಲ್ಪನಾ ವಿಲಾಸಗಳನ್ನು ವಿದ್ಯಾರ್ಥಿಗಳ ಮುಂದೆ ಚಿತ್ರಿಸುವಂತಹ ಬೋಧಕರಾಗಿದ್ದ ಸರ್ವಮಂಗಳ ಅವರು ನಿವೃತ್ತಿಯಾಗಿ ಒಂದು ದಶಕ ತುಂಬಿದ್ದರೂ ಅವರನ್ನು ನೆನಪಿಸಿಕೊಂಡು ಪ್ರೀತಿಯ ಅಭಿವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಜುಲೈ 31, 2021ರಂದು ಬೆಳಗ್ಗೆ 11 ಗಂಟೆಗೆ ಮೈಸೂರಿನ 'ರಮಾಗೋವಿಂದ ರಂಗಮಂದಿರ'ದಲ್ಲಿ ಚ. ಸರ್ವಮಂಗಳ ಅವರ ಅಭಿಮಾನಿಗಳು, ಅವರ ಸಹಪಾಠಿಗಳು, ಮಹಾರಾಜ ಕಾಲೇಜಿನ ಹಳೆ ವಿದ್ಯಾರ್ಥಿಗಳ ಬಳಗ, 'ನೆಳಲು ಬೆಳಕು' ತಂಡದ ಗೆಳೆಯರೆಲ್ಲ ಸೇರಿ ರೂಪಿಸಿರುವ ಈ ಕಾರ್ಯಕ್ರಮದಲ್ಲಿ ಚ. ಸರ್ವಮಂಗಳ ಅವರಿಗೆ ಅಕ್ಷರ ಬಾಗಿನ ನೀಡಲು 'ಕದಳಿಯ ಬೆರಗು' ಕೃತಿ ಸಮರ್ಪಿಸಲಿದ್ದಾರೆ. ಈ ಕೃತಿಯಲ್ಲಿ ಸರ್ವಮಂಗಳ ಅವರ ವ್ಯಕ್ತಿತ್ವವನ್ನು ಮಾತ್ರ ನೆನಪಿಸದೆ, ಅವರ ಬರಹಗಳ ಜೊತೆಗೆ ಮೈಸೂರಿನ ಮಹಿಳಾ ಹೋರಾಟ, ನಾಟಕ, ಸಾಹಿತ್ಯ, ಶೈಕ್ಷಣಿಕ ಚರಿತ್ರೆಗಳೆಲ್ಲ ದಾಖಲಿಸುವ ಜೊತೆಗೆ ಸರ್ವಮಂಗಳಾ ಅವರ ಕ್ರಿಯಾಶೀಲತೆ ಕೂಡ ದಾಖಲಾಗಿದೆ

ಚ. ಸರ್ವಮಂಗಳ ಅವರು ಹುಟ್ಟಿದ್ದು ಎಪ್ರಿಲ್ 6, 1948. ಡಾ ಭುಜಂಗರಾವ್ ಮಹಾಲಕ್ಷ್ಮೀ ದಂಪತಿಗೆ. ಬೆಳೆದದ್ದು ಶಿವಮೊಗ್ಗದ ನೋಣಿಗರ ಬೀದಿಯಲ್ಲಿ. ಅಣ್ಣ ಭೀಮರಾವ್, ತಂಗಿ ಕೌಸಲ್ಯ, ತಮ್ಮ ಧನಂಜಯ ಅವರೊಂದಿಗೆ ಎರಡನೇ ಮಗಳಾಗಿದ್ದ ಚ. ಸರ್ವಮಂಗಳ ಅವರು ಅಜ್ಜಿ ತುಳಸಿಬಾಯಿ ಸೋದರತ್ತೆ ಗಂಗತ್ತೆಯವರೊಂದಿಗೆ ಬೆಳೆದ ಪರಿಯನ್ನು, ಅತ್ತೆಯಂದಿರ ಪ್ರಭಾವಗಳನ್ನು ಇವರ ಕಾವ್ಯದಲ್ಲಿಯೂ ಕಾಣಬಹುದಾಗಿದೆ.

ಕಾಲೇಜಿನಲ್ಲಿ ಓದುತ್ತಿದ್ದಾಗ ಸಾ.ಶಿ. ಮರುಳಯ್ಯ, ಜಿ. ಎಸ್. ಸಿದ್ದಲಿಂಗಯ್ಯ, ಪಿ. ಲಂಕೇಶ್‌ರವರ ಶಿಷ್ಯೆ. ಇವರೆಲ್ಲ ಸಾಹಿತ್ಯಾಸಕ್ತಿಯನ್ನು ಮೂಡಿಸಲು ಕಾರಣರಾಗಿದ್ದರೆ ತನ್ನೊಳಗಿನ ಅಭಿನೇತ್ರಿಯನ್ನು ಗುರುತಿಸಿದ್ದು ಸಾ.ಶಿ. ಮರುಳಯ್ಯನವರೆಂದು ಚ. ಸರ್ವಮಂಗಳ ನೆನಪಿಸಿಕೊಂಡಿದ್ದಾರೆ.

ವಿದ್ಯಾರ್ಥಿ ದೆಸೆಯಿಂದಲೇ ನಾಟಕಾಭಿನಯದಲ್ಲಿ ತೊಡಗಿದ್ದ ಸರ್ವಮಂಗಳ, ಅಧ್ಯಾಪಕಿಯಾಗಿ ಲಲಿತಕಲೆಗಳ ಕಾಲೇಜಿನಲ್ಲಿ 'ನರ್ತಕಿ ಪೂಜೆ' ನಾಟಕದಲ್ಲಿ ವೇಶ್ಯೆ ಪಾತ್ರದಲ್ಲಿ ಅಭಿನಯಿಸಿದ್ದರು. 'ಸ್ವಪ್ನ ವಾಸವದತ್ತ' ನಾಟಕದ ಮೂಲಕ ನಾಟಕರಂಗಕ್ಕೆ ಕಾಲಿಟ್ಟ ಸರ್ವಮಂಗಳ ಅವರು 'ರಕ್ತಾಕ್ಷಿ', 'ತಿರುಗುಮುರುಗು', 'ತಾಯಿ', 'ಹಯವದನ', 'ಸದ್ದು ವಿಚಾರಣೆ ನಡೆಯುತ್ತಿದೆ', 'ಮಂಥರೆ', 'ಸಂಕ್ರಾಂತಿ', 'ಸಾಯೋ ಆಟ', 'ಬರ', 'ಸತ್ತವರ ನೆರಳು', 'ಕದಡಿದ ನೀರು', 'ರುಡಾಲಿ' ಮುಂತಾದ ನಾಟಕಗಳಲ್ಲಿ ಅಭಿನಯಿಸಿ ನಾಟಕ ರಂಗದಲ್ಲಿ ತನ್ನದೇ ಛಾಪನ್ನು ಮೂಡಿಸಿದ್ದಾರೆ.

ದೇವನೂರ ಮಹಾದೇವ, ಕಿಕ್ಕೇರಿ ನಾರಾಯಣ್, ರಾಮಚಂದ್ರದೇವ, ಒ.ಎಲ್. ನಾಗಭೂಷಣ ಸ್ವಾಮಿ ಸೇರಿದಂತೆ ಕವಿತಾರತ್ನ, ಜಯರಾಮ ರಾಯಪುರ, ವಾಸುದೇವ ಶರ್ಮ, ಪ್ರಸಾದ್ ಕೂದೂರ್, ರಾವಂದೂರ್ ಪ್ರಕಾಶ್, ಮಂದಾಕಿನಿ ರುದ್ರಣ್ಣ ಹರ್ತಿಕೋಟೆ ಮುಂತಾದ ಸಾವಿರಾರು ಪ್ರತಿಭಾವಂತರನ್ನು ರೂಪಿಸಿದ ಕೀರ್ತಿ ಸರ್ವಮಂಗಳ ಅವರದ್ದು.

ಪಿ. ಲಂಕೇಶ್, ಶ್ರೀಕೃಷ್ಣ ಆಲನಹಳ್ಳಿ, ಯು.ಆರ್. ಅನಂತಮೂರ್ತಿ, ಬಿ.ಸಿ. ರಾಮಚಂದ್ರ ಶರ್ಮ, ಶಾಂತಿನಾಥ ದೇಸಾಯಿ, ಕೆ.ವಿ. ತಿರುಮಲೇಶ್, ಟಿ.ಪಿ. ಅಶೋಕ, ಪೋಲಂಕಿ ರಾಮಮೂರ್ತಿ, ಗೋಪಾಲಕೃಷ್ಣ ಅಡಿಗ, ಎಚ್.ಎಂ. ಚೆನ್ನಯ್ಯ, ಜಿ.ಎಚ್. ನಾಯಕ, ಕೆ. ನ. ಶಿವತೀರ್ಥನ್, ಲಕ್ಷ್ಮಣರಾವ್, ಎಲ್. ಬಸವರಾಜು, ಸುಜನಾ, ಪ್ರಭುಶಂಕರ, ಎ.ಕೆ. ರಾಮಾನುಜನ್ ಮುಂತಾದವರ ಒಡನಾಟದಲ್ಲಿ ವೈಚಾರಿಕ ಪ್ರಜ್ಞೆಯನ್ನು ವಿಸ್ತರಿಸಿಕೊಂಡಿದ್ದ ಚ. ಸರ್ವಮಂಗಳ ಅವರು ಪ್ರಬುದ್ಧ ಚಿಂತಕಿಯಾಗಿ, ಕವಿಯಾಗಿ, ವಾಗ್ಮಿಯಾಗಿ, ಹೋರಾಟಗಾರರಾಗಿ ಹಾಗೂ ಈ ಎಲ್ಲಾ ಒಡನಾಟಗಳ ಫಲವಾಗಿ ಅತ್ತುತ್ಯಮ ಕ್ರಿಯಾಶೀಲ ಅಧ್ಯಾಪಕಿಯಾಗಿ ವಿದ್ಯಾರ್ಥಿಗಳ ಮನದಲ್ಲಿ ನೆಲೆಗೊಂಡ ಪರಿಣಾಮವಾಗಿ ಇಂತಹ ಸಾರ್ವಜನಿಕ ಕಾರ್ಯಕ್ರಮವನ್ನು ಮಂಗಳಾ ಅವರ ಅರಿವಿಗೆ ಬಾರದಂತೆ ರೂಪಿಸಲು ಕಾರಣವಾಗಿದ್ದು. ಅವರ 'ನಿರಾಕರಣ ಮನಸ್ಥಿತಿ'ಯಿಂದಾಗಿ ಇಡೀ ಜೀವನದುದ್ದಕ್ಕೂ ಪ್ರಕಟವಾಗಿರುವುದು 'ಅಮ್ಮನ ಗುಡ್ಡ' ಏಕೈಕ ಕವಿತಾ ಸಂಕಲನ. ಮೂರು-ನಾಲ್ಕು ಪತ್ರಿಕಾ ಸಂದರ್ಶನಗಳು, ಕೆಲವೇ ಕೆಲವು ಭಾಷಣಗಳು. ಚದುರಿಹೋಗಿರುವ ಅವರ ಬರಹಗಳನ್ನು ಪ್ರಕಟಿಸಲು ಬೇಕಾದ ಜವಾಬ್ದಾರಿ ಕೂಡ ಅವರ ಮೇಲಿದ್ದರೂ ಅವರದ್ದು ಮಾತ್ರ 'ನಿರಾಕರಣ ಮನಸ್ಥಿತಿ'.

ಇವೆಲ್ಲ ಏನೇ ಇರಲಿ ಸರ್ವಮಂಗಳ ಅವರು ಲಂಕೇಶ್ ಪತ್ರಿಕೆಗಾಗಿ ಕತೆಗಾರ ಡಾ. ಮೊಗಳ್ಳಿ ಗಣೇಶ್ ಅವರು ನಡೆಸಿದ ಸಂದರ್ಶನವೊಂದರಲ್ಲಿ ಹೆಣ್ಣಿನ ಬಗ್ಗೆ ಅಭಿಪ್ರಾಯ ಕೇಳಿದಾಗ ''ಹೆಣ್ಣಿಗೆ ಅವಳ ದೇಹವೇ ದೊಡ್ಡ ತಡೆಯಾಗಿದೆ. ಹೆಣ್ಣನ್ನು ಮಾನದ ಮಡಕೆಯಲ್ಲಿ ಬಂಧಿಸುವಂತಹ ಕ್ರೂರತೆ ಬೇರೆ ಯಾವುದಿದೆ'' ಎಂದು ಪ್ರಶ್ನಿಸುತ್ತಾರೆ. ಹೀಗೆ ನೇರವಾಗಿ, ದಿಟ್ಟವಾಗಿ ಮಾತನಾಡುತ್ತಿದ್ದ ಮಂಗಳ ಅವರಿಗೆ 'ಕಾಡುವ ಲೇಖಕ'ನಾಗಿ ಪಿ. ಲಂಕೇಶ್ ಇದ್ದರೆ, ಅನಂತಮೂರ್ತಿಯವರು ಸ್ನೇಹಿತರಾಗಿದ್ದರಂತೆ. ತನ್ನೆಲ್ಲ ಕಷ್ಟ ಸುಖಗಳನ್ನು ಮಹಾರಾಜ ಕಾಲೇಜಿನಲ್ಲಿದ್ದ ಸಹಪಾಠಿ ಗೆಳತಿ ಕಾವೇರಿಯವರಲ್ಲಿ ಹಂಚಿಕೊಳ್ಳುತ್ತಿದ್ದರಂತೆ.

ಹೀಗೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಪಡೆದು, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಕನ್ನಡ ಎಂ.ಎ. ಮಾಡಿ, ಬೋಧಕರಾಗಿ ವೃತ್ತಿ ಪ್ರಾರಂಭಿಸಿ, ಕವಿಯಾಗಿ, ಹೋರಾಟಗಾರರಾಗಿ, ಅಭಿನೇತ್ರಿಯಾಗಿ ಮಹಾರಾಜ ಕಾಲೇಜಿನ ಪ್ರಾಂಶುಪಾಲರಾಗಿ ದಕ್ಷತೆ, ನೇರ ನಡೆ -ನುಡಿಗಳಿಂದ ಜೀವನದುದ್ದಕ್ಕೂ 'ಪ್ರೀತಿಯನ್ನು ಎರಚಿ', ನಾಳೆ ಪ್ರೀತಿಪಾತ್ರರ ಅಭಿವಂದನೆಗಳನ್ನು ಸ್ವೀಕರಿಸುತ್ತಿರುವ ನನ್ನ 'ಮಂಗಳ ಮೇಡಂ' ನನ್ನೊಳಗಿದ್ದಾರೆ. ನನ್ನಂತಹ ಅನೇಕರ ಮನದಲ್ಲಿದ್ದಾರೆ.

Writer - ಡಾ. ಲೋಕೇಶ್ ಮೊಸಳೆ

contributor

Editor - ಡಾ. ಲೋಕೇಶ್ ಮೊಸಳೆ

contributor

Similar News