ಪೆಗಾಸಸ್ ಗೂಢಚಾರಿಕೆ ವಿವಾದ: ಕುದುರೆಯೊಂದಿಗೆ ಮೆರವಣಿಗೆ ನಡೆಸಿ ಟಿಎಂಸಿ ಪ್ರತಿಭಟನೆ

Update: 2021-07-29 20:15 GMT
Photo: indiatoday.in

ಕೋಲ್ಕತಾ: ಪೆಗಾಸಸ್ ಗೂಢಚಾರಿಕೆ ವಿರುದ್ಧ ಕೋಲ್ಕತಾದಲ್ಲಿ ಟಿಎಂಸಿ ಕಾರ್ಯಕರ್ತರು ಕುದುರೆಯೊಂದಿಗೆ ಮೆರವಣಿಗೆ ನಡೆಸಿ ಪ್ರತಿಭಟಿಸಿದ್ದಾರೆ. ಪ್ರತಿಭಟನಾ ಮೆರವಣಿಗೆಯಲ್ಲಿ ಹಿರಿಯ ಟಿಎಂಸಿ ಮುಖಂಡ ಮದನ್ ಮಿತ್ರ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಭಾಗವಹಿಸಿದ್ದರು ಎಂದು ಮೂಲಗಳು ಹೇಳಿವೆ.

ಪೆಗಾಸಸ್ ಸ್ಪೈವೇರ್ ಬಳಸಿ ಕೇಂದ್ರ ಸರಕಾರ ರಾಜಕಾರಣಿಗಳ, ಪತ್ರಕರ್ತರ, ನ್ಯಾಯಾಧೀಶರ ಸಹಿತ ಹಲವರ ಮೇಲೆ ನಿಗಾ ಇರಿಸಿದ್ದು ದೇಶದ ಜನರ ಸಾಂವಿಧಾನಿಕ ಹಕ್ಕನ್ನು ಸರಕಾರ ಉಲ್ಲಂಘಿಸಿದೆ ಎಂದು ಪ್ರತಿಭಟನಾ ಮೆರವಣಿಗೆಯ ಸಂದರ್ಭ ಘೋಷಣೆ ಕೂಗಿ, ಬ್ಯಾನರ್ ಪ್ರದರ್ಶಿಸಲಾಯಿತು.

ಈ ಮಧ್ಯೆ, ಪೆಗಾಸಸ್ ಗೂಢಚಾರಿಕೆ ಆರೋಪದ ಬಗ್ಗೆ ತನಿಖೆ ನಡೆಸಲು ಇಬ್ಬರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿರುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಹೇಳಿದ್ದಾರೆ. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಎಂಬಿ ಲೋಕುರ್ ಮತ್ತು ಕಲ್ಕತಾ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಾಧೀಶ ಜ್ಯೋತಿರ್ಮಯಿ ಭಟ್ಟಾಚಾರ್ಯ ನೇತೃತ್ವದ ಸಮಿತಿ ಪಶ್ಚಿಮ ಬಂಗಾಳದಲ್ಲಿ ಮೊಬೈಲ್ ಫೋನ್‌ಗಳ ಅಕ್ರಮ ಹ್ಯಾಕಿಂಗ್ ಬಗ್ಗೆ ತನಿಖೆ ನಡೆಸಲಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News