ಒಲಿಂಪಿಕ್ಸ್: ಪದಕ ಖಚಿತಪಡಿಸಿದ ಭಾರತದ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್

Update: 2021-07-30 04:50 GMT

ಟೋಕಿಯೊ: ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿ ಆಡುತ್ತಿರುವ ಭಾರತದ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್  ಮಹಿಳಾ ಬಾಕ್ಸಿಂಗ್ ನ 69 ಕೆಜಿ ವಿಭಾಗದಲ್ಲಿ ಸೆಮಿ ಫೈನಲ್ ಪ್ರವೇಶಿಸುವ ಮೂಲಕ ಕನಿಷ್ಠ ಕಂಚಿನ ಪದಕವನ್ನು ಖಚಿತಪಡಿಸಿದರು.

ಇದರೊಂದಿಗೆ ಭಾರತವು ಈಗ ನಡೆಯುತ್ತಿರುವ ಒಲಿಂಪಿಕ್ಸ್ ನಲ್ಲಿ ಎರಡನೇ ಪದಕ ಗೆದ್ದ ಸಾಧನೆ ಮಾಡಿದೆ. ಈ ಮೊದಲು ಮೀರಾಬಾಯಿ ಚಾನು ದೇಶಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದರು.

 ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ  23ರ ಹರೆಯದ ಅಸ್ಸಾಂ ಬಾಕ್ಸರ್ ಮಾಜಿ ವಿಶ್ವ ಚಾಂಪಿಯನ್ ಚೈನೀಸ್ ತೈಪೆಯ ನೀನ್ ಚಿನ್ ಚೆನ್ ಅವರನ್ನು 4-1 ಅಂತರದಿಂದ ಮಣಿಸಿದರು. 

ಲವ್ಲೀನಾ  ಕಳೆದ ವರ್ಷ ಕೋವಿಡ್ -19 ಸೋಂಕಿಗೆ ಒಳಗಾದ ಕಾರಣದಿಂದಾಗಿ ಯುರೋಪ್‌ಗೆ ತರಬೇತಿ ಪ್ರವಾಸದಿಂದ ವಂಚಿತರಾಗಿದ್ದರು.

ಈ ಹಿಂದೆ ಒಲಿಂಪಿಕ್ಸ್ ಗೇಮ್ಸ್ ನ  ಬಾಕ್ಸಿಂಗ್ ಸ್ಪರ್ಧೆಯಲ್ಲಿ  ವಿಜೇಂದರ್ ಸಿಂಗ್ (2008) ಹಾಗೂ  ಎಂ. ಸಿ .ಮೇರಿ ಕೋಮ್ (2012) ಭಾರತಕ್ಕೆ ಪದಕ ಗೆದ್ದುಕೊಟ್ಟಿದ್ದರು. ಈ ಇಬ್ಬರೂ ಕಂಚಿನ ಪದಕಗಳನ್ನು ಗೆದ್ದಿದ್ದರು. ಬೊರ್ಗೊಹೈನ್ ಬೆಳ್ಳಿ ಇಲ್ಲವೇ ಚಿನ್ನ ಗೆಲ್ಲುವ ವಿಶ್ವಾಸ ಮೂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News