ಅಸ್ಸಾಂ-ಮಿಜೋರಾಂ ಘರ್ಷಣೆ: ಒಕ್ಕೂಟ ವ್ಯವಸ್ಥೆಗೆ ಧಕ್ಕೆ

Update: 2021-07-31 07:55 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಅಸ್ಸಾಂ ಮತ್ತು ಮಿಜೋರಾಂ ಗಡಿ ವಿವಾದ ಹಿಂಸೆಗೆ ತಿರುಗಿ ಎರಡೂ ರಾಜ್ಯಗಳ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಘರ್ಷಣೆಯಲ್ಲಿ ಅಸ್ಸಾಮಿನ ಐವರು ಪೊಲೀಸರು ಹಾಗೂ ಒಬ್ಬ ನಾಗರಿಕನ ಸಾವು ಸಂಭವಿಸಿದೆ. ನಿಜಕ್ಕೂ ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಭಾರತ ಒಕ್ಕೂಟದಲ್ಲಿ ಅಂತರ್‌ರಾಜ್ಯ ಗಡಿ ವಿವಾದಗಳು ಹೊಸದಲ್ಲ. ನದಿ ನೀರಿನ ಹಂಚಿಕೆ, ಭಾಷಾ ಸಮಸ್ಯೆ, ಗಡಿ ಗುರುತಿಸುವಿಕೆ ಹೀಗೆ ಹಲವಾರು ಕಾರಣಗಳಿಂದ ವಿಭಿನ್ನ ರಾಜ್ಯಗಳ ನಡುವೆ ವಿವಾದಗಳು ಸ್ಫೋಟಗೊಳ್ಳುತ್ತಲೇ ಇವೆೆ. ಕಳೆದ ಒಂದು ವಾರದಿಂದ ಅಸ್ಸಾಂ ಮತ್ತು ಮಿಜೋರಾಂ ನಡುವಿನ ಗಡಿ ವಿವಾದ ಅತಿರೇಕದ ಸ್ವರೂಪ ಪಡೆದಿದೆ. ನಿಜಕ್ಕೂ ಇದು ಅಹಿತಕರ ವಿದ್ಯಮಾನವಾಗಿದೆ.

ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ತಮ್ಮ ನಡುವಿನ ಗಡಿ ವಿವಾದ ಬಗೆಹರಿಸಿಕೊಳ್ಳಲು ಹಿಂಸೆಯ ಮಾರ್ಗ ಹಿಡಿಯುವುದು ಕಳವಳಕಾರಿ ಸಂಗತಿ. ಎರಡು ರಾಜ್ಯಗಳ ನಡುವಿನ ಗಡಿವಿವಾದವನ್ನು ಕಾನೂನಿನ ಮಾರ್ಗದ ಮೂಲಕ ಬಗೆಹರಿಸಿಕೊಳ್ಳಬೇಕೇ ಹೊರತು ಗುಂಡಿನ ಚಕಮಕಿಯಿಂದಲ್ಲ. ಮಿಜೋರಾಂ ಜೊತೆಗೆ ಮಾತ್ರವಲ್ಲ ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಮೇಘಾಲಯಗಳ ಜೊತೆಗೂ ಅಸ್ಸಾಂ ಗಡಿ ವಿವಾದವನ್ನು ಹೊಂದಿದೆ. ಆದರೆ ಈ ಬಾರಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಎಲ್ಲ ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಗಡಿ ವಿವಾದ ಹಾಗೂ ಇತರ ಸಮಸ್ಯೆಗಳ ಸಂಬಂಧ ಮಾತುಕತೆ ನಡೆಸಿದ ಎರಡೇ ದಿನಗಳಲ್ಲಿ ಈ ಘರ್ಷಣೆ ಸಂಭವಿಸಿದ್ದು ಅಚ್ಚರಿಯನ್ನುಂಟು ಮಾಡಿದೆ. ಈ ಘರ್ಷಣೆ ನಡೆದು ಸಾವು-ನೋವುಗಳು ಸಂಭವಿಸಿದ ನಂತರ ಅಸ್ಸಾಂ ಮತ್ತು ಮಿಜೋರಾಂ ಮುಖ್ಯಮಂತ್ರಿಗಳ ನಡುವೆ ಟ್ವಿಟರ್ ಸಮರ ಆರಂಭವಾಗಿದೆ.

ಅಸ್ಸಾಂ ಮತ್ತು ಮಿಜೋರಾಂ ನಡುವಿನ ಗಡಿ ವಿವಾದ ನಿನ್ನೆ ಮೊನ್ನೆಯದಲ್ಲ. ಇದಕ್ಕೆ ಒಂದೂವರೆ ಶತಮಾನದ ಇತಿಹಾಸವಿದೆ. ಬ್ರಿಟಿಷರ ಆಡಳಿತದ ಕಾಲದಲ್ಲಿ ಮಿಜೋರಾಂನ್ನು ಲುಶೈ ಗುಡ್ಡುಗಾಡು ಜಿಲ್ಲೆಯೆಂದು ಹೆಸರಿಸಲಾಗಿತ್ತು. ದೇಶಕ್ಕೆ ಸ್ವಾತಂತ್ರ ದೊರೆತ ನಂತರ ಆ ಜಿಲ್ಲೆ ಅಸ್ಸಾಂ ರಾಜ್ಯಕ್ಕೆ ಸೇರ್ಪಡೆಗೊಂಡಿತು. 1972ರಲ್ಲಿ ಕೇಂದ್ರಾಡಳಿತದ ಸ್ಥಾನಮಾನ ದೊರೆಯಿತು. 1986ರಲ್ಲಿ ಮಿಜೋರಾಂಗೆ ರಾಜ್ಯದ ಸ್ಥಾನಮಾನ ನೀಡಲಾಯಿತು. ಅಸ್ಸಾಂ ರಾಜ್ಯ 1950ರಲ್ಲೇ ಅಸ್ತಿತ್ವಕ್ಕೆ ಬಂದಿತು. ಈ ನಡುವೆ ಮೊದಲು ರಾಜ್ಯದ ಸ್ಥಾನಮಾನ ಪಡೆದ ಅಸ್ಸಾಂ ಹಾಗೂ ಆನಂತರ ಅಸ್ತಿತ್ವಕ್ಕೆ ಬಂದ ಮಿಜೋರಾಂ ರಾಜ್ಯಗಳ ನಡುವೆ ಗಡಿ ವಿವಾದ ಉಂಟಾಯಿತು. ಈ ವಿವಾದವು ಎರಡು ರಾಜ್ಯಗಳ ನಡುವೆ ನಿರಂತರ ಭುಗಿಲೇಳುತ್ತಲೇ ಇದೆ. 2020ರಲ್ಲೂ ಘರ್ಷಣೆ ನಡೆದು ಮಿಜೋರಾಂ ಗಡಿಯಲ್ಲಿನ ಗುಡಿಸಲುಗಳು ಬೆಂಕಿಗೆ ಆಹುತಿಯಾಗಿದ್ದವು. ಈಗ ಇದು ವಿಪರೀತಕ್ಕೆ ಹೋಗಿ ಅಸ್ಸಾಮಿನ ಪೊಲೀಸರು ಹಾಗೂ ನಾಗರಿಕ ಕೊಲ್ಲಲ್ಪಟ್ಟಿದ್ದಾರೆ.

ಸೋಮವಾರ ಅಸ್ಸಾಮಿನ ಐಜಿಪಿ ನೇತೃತ್ವದಲ್ಲಿ ಸುಮಾರು 200 ಪೊಲೀಸರ ತಂಡ ಮಿಜೋರಾಂನ ವೈರೆಂಗ್ಟೆ ಪ್ರದೇಶವನ್ನು ಪ್ರವೇಶಿಸಿದೆ. ಇದು ಬಲಾತ್ಕಾರದ ಪ್ರವೇಶ ಎಂದು ಮಿಜೋರಾಂನ ಆಕ್ಷೇಪವಾಗಿದೆ. ಇದು ಘರ್ಷಣೆಗೆ ಕಾರಣವಾಗಿ ಸಾವು-ನೋವುಗಳು ಉಂಟಾಗಿವೆ.

 ಭಾರತ ಒಕ್ಕೂಟ ವಿಭಿನ್ನ ಭಾಷೆಗಳನ್ನು ಆಡುವ, ವಿಭಿನ್ನ ಸಾಂಸ್ಕೃತಿಕ ಹಿನ್ನೆಲೆ ಹೊಂದಿದ ವಿಭಿನ್ನ ಧರ್ಮಗಳ ಜನ ಸಮುದಾಯಗಳನ್ನು ಒಳಗೊಂಡಿದೆ. ಆದಿವಾಸಿ ಜನ ಸಮುದಾಯಗಳೂ ಇಲ್ಲಿವೆ. ಸ್ವಾತಂತ್ರಾನಂತರ ಭಾಷೆಯ ಆಧಾರದಲ್ಲಿ ರಾಜ್ಯಗಳು ರಚನೆಗೊಂಡಾಗ ಕೆಲ ರಾಜ್ಯಗಳ ನಡುವಿನ ಗಡಿ ಸಮಸ್ಯೆಗಳು ಉದ್ಭವಿಸಿ ಹಾಗೇ ಉಳಿದುಕೊಂಡು ಬಂದಿವೆ. ಉದಾಹರಣೆಗೆ ಬೆಳಗಾವಿ, ನಿಪ್ಪಾಣಿಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರಗಳ ನಡುವಿನ ಗಡಿ ವಿವಾದ ಆಗಾಗ ಭುಗಿಲೇಳುತ್ತಲೇ ಇದೆ. ಬಹುಮುಖಿ ಸಂಸ್ಕೃತಿ, ಭಾಷೆಗಳನ್ನು ಹೊಂದಿದ ಒಕ್ಕೂಟ ವ್ಯವಸ್ಥೆಯಲ್ಲಿ ಇದು ಸಹಜ.

ಭಾರತ ಎಂಬುದು ರಾಜ್ಯಗಳ ಒಕ್ಕೂಟ. ಒಕ್ಕೂಟ ವ್ಯವಸ್ಥೆಯನ್ನು ಅಂಗೀಕರಿಸಿದ ನಂತರ ರಾಜ್ಯಗಳು ತಮ್ಮ ನಡುವಿನ ಗಡಿ ವಿವಾದವನ್ನು ಸಂವಿಧಾನದ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಬೇಕು. ಸಂವಿಧಾನಾತ್ಮಕ ಪರಿಹಾರ ಮಾರ್ಗಗಳನ್ನು ಬಿಟ್ಟು ಘರ್ಷಣೆಯ ಮಾರ್ಗವನ್ನು ಅನುಸರಿಸುವುದು ಸರಿಯಲ್ಲ.

ಅಸ್ಸಾಂ ರಾಜ್ಯವು ಮಿಜೋರಾಂ ಜೊತೆಗೆ ಮಾತ್ರವಲ್ಲ, ತನ್ನೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಮೇಘಾಲಯ, ನಾಗಾಲ್ಯಾಂಡ್‌ಗಳ ಜೊತೆಗೂ ಗಡಿ ವಿವಾದವನ್ನು ಹೊಂದಿದೆ. ಈ ಎಲ್ಲ ರಾಜ್ಯಗಳು ತನ್ನ ಗಡಿಯನ್ನು ಒತ್ತುವರಿ ಮಾಡಿವೆ ಎಂಬುದು ಅದರ ಆಕ್ಷೇಪಣೆಯಾಗಿದೆ. ಈ ಮೂರು ರಾಜ್ಯಗಳ ಜೊತೆಗೆ ಅಸ್ಸಾಂ ಘರ್ಷಣೆ ನಡೆಸುತ್ತಲೇ ಬಂದಿದೆ. ಅಸ್ಸಾಮಿನಲ್ಲಿ ಬಿಜೆಪಿ ಸರಕಾರವಿದೆ. ಮಿಜೋರಾಂನಲ್ಲಿ ಬಿಜೆಪಿ ನೇತೃತ್ವದ ಈಶಾನ್ಯ ಭಾರತ ಪ್ರಜಾಸತ್ತಾತ್ಮಕ ಒಕ್ಕೂಟದ ಮಿಜೋ ನ್ಯಾಷನಲ್ ಪಾರ್ಟಿ ಅಧಿಕಾರದಲ್ಲಿದೆ. ಹೀಗಿದ್ದರೂ ಈ ಘರ್ಷಣೆ ಭುಗಿಲೆದ್ದಿರುವುದು ಆತಂಕದ ಸಂಗತಿಯಾಗಿದೆ.

ಈ ವಿದ್ಯಮಾನಗಳ ಪರಿಣಾಮವಾಗಿ ಅಸ್ಸಾಂ ಸರಕಾರ ಗಡಿ ಜಿಲ್ಲೆಗಳಲ್ಲಿ ರಾಜ್ಯ ಕಮಾಂಡೊ ಪಡೆಯ ತುಕಡಿಗಳನ್ನು ನಿಯೋಜನೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಮಿಜೋರಾಂ ಸರಕಾರ ಗಡಿ ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ರವಾನಿಸಿದೆ.ಅಸ್ಸಾಮಿನಲ್ಲಿ ಮೂರು ದಿನಗಳ ಶೋಕಾಚರಣೆಗೆ ಕರೆ ನೀಡಲಾಗಿದೆ. ಗಡಿ ಭಾಗದಲ್ಲಿ ಮಿಜೋರಾಂ ತನ್ನ ಅರಣ್ಯ ಪ್ರದೇಶಗಳನ್ನು ಒತ್ತುವರಿ ಮಾಡಿದೆ, ಇದನ್ನು ತೆರವು ಮಾಡಿಸಿ ಎಂದು ಅಸ್ಸಾಂ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಲು ತೀರ್ಮಾನಿಸಿದೆ. ಮಿಜೋರಾಂ ಜೊತೆ ಗಡಿ ಹಂಚಿಕೊಂಡಿರುವ ಅಸ್ಸಾಮಿನ ಗಡಿ ಜಿಲ್ಲೆಗಳ ಜನರು ಮಿಜೋರಾಂಗೆ ಆರ್ಥಿಕ ದಿಗ್ಬಂಧನದ ಬೆದರಿಕೆ ಹಾಕಿದ್ದಾರೆ.

ಇತರ ದೇಶಗಳ ನಾಗರಿಕರಿಗೆ ಕೋಮು ಆಧಾರದಲ್ಲಿ ಭಾರತದ ಪೌರತ್ವ ಕೊಡಲು ಕಾನೂನು ರಚಿಸಲು ಮುಂದಾದ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರಕಾರ ಒಕ್ಕೂಟ ವ್ಯವಸ್ಥೆಯಲ್ಲಿನ ಎರಡು ರಾಜ್ಯಗಳ ನಡುವಿನ ಗಡಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವಲ್ಲಿ ವಿಫಲಗೊಂಡಿದೆ ಎಂದರೆ ಅತಿಶಯೋಕ್ತಿಯಲ್ಲ. ಸರಕಾರದ ಹೊಣೆ ಹೊತ್ತವರು ಜನರ ನಡುವೆ ದ್ವೇಷ ಮತ್ತು ಅಪನಂಬಿಕೆಯ ವಿಷ ಬೀಜ ಬಿತ್ತಿರುವುದರ ಪರಿಣಾಮವಾಗಿ ಭಾರತ ಇಂದು ಬಿಕ್ಕಟ್ಟಿನ ಸುಳಿಗೆ ಸಿಲುಕಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ.

ಈಗಲಾದರೂ ಒಕ್ಕೂಟ ಸರಕಾರ ಸಂಬಂಧಿಸಿದ ರಾಜ್ಯಗಳ ಮುಖ್ಯಮಂತ್ರಿಗಳ ತುರ್ತು ಸಭೆಯನ್ನು ಕರೆದು ಸಮಾಲೋಚಿಸಿ ಸೌಹಾರ್ದ ಪರಿಹಾರವನ್ನು ಕಂಡು ಹಿಡಿಯಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News