ಪಿಪಿಇ ಕಿಟ್ ಖರೀದಿಯಲ್ಲಿ ಮತ್ತೊಂದು ಹಗರಣ: ಕೆ ಆರ್ ಎಸ್ ಆರೋಪ

Update: 2021-07-31 17:54 GMT

ಬೆಂಗಳೂರು, ಜು.31: ಕೋವಿಡ್-19 ಸಂದರ್ಭದಲ್ಲಿ ಕಳೆದ ವರ್ಷ ಮೊದಲನೆ ಅಲೆಯ ಸಂದರ್ಭದಲ್ಲಿ ಕರ್ನಾಟಕ ಡ್ರಗ್ಸ್ ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ಸಂಸ್ಥೆಯು ಪಿಪಿಇ ಕಿಟ್, ಸ್ಯಾನಿಟೈಸರ್, ಔಷಧಿ, ಉಪಕರಣ ಮತ್ತು ಇತರೆ ಪರಿಕರಗಳ ಖರೀದಿಯಲ್ಲಿ ನೂರಾರು ಕೋಟಿ ಹಗರಣ ನಡೆದಿರುವ ಬಗ್ಗೆ ಕೆ.ಆರ್.ಎಸ್.ಪಕ್ಷವು ಬಹಿರಂಗ ಮಾಡಿ ಎಸಿಬಿ ಹಾಗೂ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮತ್ತು ಕಾಗದಪತ್ರಗಳ ಸಮಿಗೆ ದೂರು ನೀಡಿತ್ತು ಎಂದು ಕೆಆರ್‍ಎಸ್ ಪ್ರಧಾನ ಕಾರ್ಯದರ್ಶಿ ಸಿ.ಎನ್. ದೀಪಕ್ ತಿಳಿಸಿದ್ದಾರೆ.

ಶನಿವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಈ ದೂರಿನ ಆಧಾರದ ಮೇಲೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಂದಿನ ಅಧ್ಯಕ್ಷರಾಗಿದ್ದ ಎಚ್.ಕೆ. ಪಾಟೀಲ್ ನೇತೃತ್ವದ ಸಮಿತಿಯು ವಿಚಾರಣೆ ಕೈಗೆತ್ತಿಕೊಂಡು, ತನ್ನ ವಿಚಾರಣಾ ವರದಿಯನ್ನು ವಿಧಾನಸಭಾಧ್ಯಕ್ಷರಿಗೆ ಸಲ್ಲಿಸಿದೆ ಎಂದರು.

ಕೋವಿಡ್-19 ಸಂಬಂಧಿತ ಬಹುತೇಕ ಖರೀದಿ ಪ್ರಕ್ರಿಯೆಗಳಲ್ಲಿ ಅಕ್ರಮ ಮತ್ತು ಅವ್ಯವಹಾರ ನಡೆದಿರುವುದು ನಿರಂತರವಾಗಿ ಕಂಡುಬಂದಿದೆ. ಇವೆಲ್ಲದರ ಬಗ್ಗೆ ಸರಕಾರ ಯಾವುದೇ ತನಿಖೆ ನಡೆಸದೆ ಅಕ್ರಮಗಳಲ್ಲಿ ಭಾಗಿಯಾಗಿರುವವರ ರಕ್ಷಣೆಗೆ ನಿಂತಿದೆ. ಇದರ ಮುಂದಿನ ಮುಂದುವರಿದ ಭಾಗವೇ ನಾವು ಇಂದು ಬಹಿರಂಗ ಮಾಡುತ್ತಿರುವ ಮತ್ತೊಂದು ಖರೀದಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆಯಲು ಕಾರಣವಾಗಿದೆ ಎಂದು ಅವರು ಹೇಳಿದರು.

ಇತ್ತೀಚಿಗೆ ಕೋವಿಡ್-19 ಎರಡನೇ ಅಲೆ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮ ಕೋವಿಡ್ ವಾರಿಯರ್‍ಗಳಿಗೆ 12 ಲಕ್ಷ ಪಿಪಿಇ ಕಿಟ್ ಖರೀದಿಗಾಗಿ 2000ರ ಎಪ್ರಿಲ್ 26ರಂದು ದರಪಟ್ಟಿ ಆಹ್ವಾನಿಸಿತ್ತು. ಅನೇಕ ಸರಬರಾಜುದಾರರು ಮತ್ತು ಕಂಪನಿಗಳು ತಮ್ಮ ದರಪಟ್ಟಿಯನ್ನು ಇದಕ್ಕೆ ಪ್ರತಿಯಾಗಿ ಸಲ್ಲಿಸಿವೆ. ಇದರಲ್ಲಿ ಎಚ್ ಅಂಡ್ ಝೆಡ್ ಅಪಾರೆಲ್ಸ್ ಕಂಪನಿ ಒಂದು ಪಿಪಿಇ ಕಿಟ್‍ಗೆ 498 ರೂ.ಗಳ ದರ ಪಟ್ಟಿ ಸಲ್ಲಿಸಿ ಎಲ್1 ಸ್ಥಾನದಲ್ಲಿದೆ ಎಂದು ಅವರು ಹೇಳಿದರು.

ಯುಕ್ಬಾ ಫ್ಯಾಷನ್ಸ್ 520 ರೂ.ಗಳ ದರ ನೀಡಿ 4ನೇ ಸ್ಥಾನದಲ್ಲಿವೆ. ಆದರೆ ಎಚ್ ಅಂಡ್ ಝೆಡ್ ಅಪಾರೆಲ್ಸ್ ಸರಬರಾಜು ವೇಳಾಪಟ್ಟಿಯನ್ನು ನೀಡಿರುವುದಿಲ್ಲ. ಆದುದರಿಂದ, ನಿಯಮದ ಪ್ರಕಾರ ಅವರನ್ನು ಖರೀದಿ ಪ್ರಕ್ರಿಯಿಯಿಂದ ಹೊರಗಿಡಬೇಕಾಗಿರುತ್ತದೆ. ಮುಂದುವರಿದು, ಪ್ರಸಕ್ತ ಸಾಲಿನ ಜು.14ರಂದು ಕೆಎಸ್‍ಎಂಎಸ್‍ಸಿಎಲ್ ಆನ್‍ಲೈನ್ ದರ ಸಂಧಾನ ಸಭೆ ಕರೆದು ತಮ್ಮ ದರಗಳನ್ನು ಪುನರ್ ವಿಮರ್ಶಿಸಲು ಕೇಳಿಕೊಳ್ಳುತ್ತಾರೆ ಎಂದು ಅವರು ತಿಳಿಸಿದರು.

ತದನಂತರ ಜು.21ರಂದು ಕೆಎಸ್‍ಎಂಎಸ್‍ಸಿಎಲ್ ಎಲ್ಲ ಸರಬರಾಜುದಾರರಿಗೆ ಇ-ಮೇಲ್ ಮುಖಾಂತರ ಪಿಪಿಇ ಕೀಟ್‍ಗಳ ದರವನ್ನು 370 ರೂಪಾಯಿಗಳಿಗೆ ನಿಗದಿ ಮಾಡುತ್ತಾರೆ. ಇದಕ್ಕೆ ಪ್ರತಿಯಾಗಿ ನಾಲ್ಕನೇ ಸ್ಥಾನದಲ್ಲಿದ್ದ ಯುಕ್ಬಾ ಫ್ಯಾಷನ್ಸ್ ರವರು ಜು.22ರಂದು 385(ರೂ 367+ ಜಿಎಸ್ ಟಿ) ರೂಪಾಯಿಗಳಿಗೆ ಸರಬರಾಜು ಮಾಡುವುದಾಗಿ ಮತ್ತು ಎಚ್ ಅಂಡ್ ಝೆಡ್ ಅಪಾರೆಲ್ಸ್ ನವರು 400 ರೂ.ಗಳಿಗೆ ಸರಬರಾಜು ಮಾಡುವುದಾಗಿ ಇ-ಮೇಲ್ ಮುಖಾಂತರ ಅದೇ ದಿನ ತಿಳಿಸುತ್ತಾರೆ ಎಂದು ದೀಪಕ್ ವಿವರಿಸಿದರು.

ಅಂತಿಮವಾಗಿ ಕೆಎಸ್‍ಎಂಎಸ್‍ಸಿಎಲ್ ಜು.3ರಂದು 4 ಲಕ್ಷ ಪಿಪಿಇ ಕಿಟ್‍ಗಳ ಖರೀದಿಗೆ 16 ಕೋಟಿ ರೂ.ಗಳ ಖರೀದಿ ಆದೇಶವನ್ನು ಹೊರಡಿಸಿದೆ. ಈ ಖರೀದಿ ಆದೇಶದ ಮೇಲೆ ಇಲ್ಲಿಯವರೆಗೂ ಎಚ್ ಅಂಡ್ ಝೆಡ್ ಅಪಾರೆಲ್ಸ್ 2 ಲಕ್ಷ ಪಿಪಿಇ ಕಿಟ್‍ಗಳನ್ನು ಸರಬರಾಜು ಮಾಡಿದೆ. ಇವರು ಸರಬರಾಜು ಮಾಡಿರುವ ಪಿಪಿಇ ಕಿಟ್ ಗಳೂ ಕಳಪೆ ಗುಣಮಟ್ಟದ್ದಾಗಿದ್ದು ನಿಗದಿಪಡಿಸಿರುವ ಮಾನದಂಡದಿಂದ ಕೂಡಿಲ್ಲ ಎಂದು ಅವರು ದೂರಿದರು.

ಮೊದಲನೇ ಖರೀದಿ ಆದೇಶದಿಂದ ಸರಕಾರಕ್ಕೆ 60 ಲಕ್ಷ ರೂ.ಗಳ ನಷ್ಟ ಉಂಟಾಗಿದ್ದು ಜೊತೆಗೆ ಕಳಪೆ ಗುಣಮಟ್ಟದ ಪಿಪಿಕೆ ಕಿಟ್ ಸರಬರಾಜಾಗಿದೆ. ಉಳಿದ 8 ಲಕ್ಷ ಪಿಪಿಪಿ ಕಿಟ್‍ಗಳ ಸರಬರಾಜು ಆದೇಶ ನೀಡಿದ್ದರೆ, ಸರಕಾರಕ್ಕೆ ಒಟ್ಟಾರೆ 1 ಕೋಟಿ 80 ಲಕ್ಷ ರೂ.ನಷ್ಟ ಉಂಟಾಗುತ್ತದೆ. ಈ ಅಕ್ರಮದಲ್ಲಿ ಕೆಎಸ್‍ಎಂಎಸ್‍ಸಿಎಲ್ ಅಧಿಕಾರಿಗಳು ನೇರವಾಗಿ ಭಾಗಿಯಾಗಿದ್ದಾರೆ ಎಂದು ದೀಪಕ್ ಆರೋಪಿಸಿದರು.

ನಿಗಮದ ವ್ಯವಸ್ಥಾಪಕ ನಿರ್ದೇಶಕರಿಂದ ಹಲವಾರು ಮಾಹಿತಿಗಳನ್ನು ಮರೆಮಾಚಿ ಖರೀದಿ ಪ್ರಕ್ರಿಯೆ ನಡೆಸಲಾಗಿದೆ. ಯಾವ ಕಾರಣಕ್ಕಾಗಿ ಯುಕ್ಬಾ ಫಾಶನ್ಸ್ ರವರನ್ನು ಕೈಬಿಡಲಾಗಿದೆ ಎಂದು ಕಾರಣ ನೀಡದೆ ಎಚ್ ಅಂಡ್ ಝೆಡ್ ಅಪಾರೆಲ್ಸ್‍ಗೆ ಖರೀದಿ ಆದೇಶ ನೀಡಲಾಗಿದೆ ಎಂದು ತಿಳಿಸಿಲ್ಲ ಎಂದು ಅವರು ಹೇಳಿದರು.

ಈ ಹಿಂದೆ ನಾವು ನೀಡಿರುವ ದೂರಿನ ಆಧಾರದ ಮೇಲೆ ತನಿಖೆ ನಡೆಸಲು ಮುಂದಾದ ಸಂದರ್ಭದಲ್ಲಿ, ವಿಚಾರಣೆಗೆ ತಡೆಯೊಡ್ಡುವ ಉದ್ದೇಶದಿಂದ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕೋವಿಡ್-19 ಕಾರಣ ನೀಡಿ ಎಲ್ಲ ವಿಧಾನಮಂಡಲದ ಸಮಿತಿಗಳು ಯಾವುದೇ ಪರಿಶೀಲನಾ ಭೇಟಿ ನೀಡಬಾರದೆಂದು ಆದೇಶಿಸಿ ತನಿಖೆ ನಡೆಯದಂತೆ ನೋಡಿಕೊಂಡಿದ್ದರು. ನಂತರ ಕೋವಿಡ್ ಹಾವಳಿ ಕಡಿಮೆಯಾದರೂ ಈ ಆದೇಶವನ್ನು ಅವರು ಹಿಂಪಡೆಯಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ಕೋವಿಡ್ ಸಂದರ್ಭದಲ್ಲಿನ ಖರೀದಿ ಸೇರಿದಂತೆ ಅನೇಕ ಅಕ್ರಮಗಳ ಕಾರಣಕ್ಕಾಗಿಯೇ ಪತನವಾಯಿತು ಎಂಬುದನ್ನು ನಾವು ಗಮನಿಸಬೇಕು. ಯಡಿಯೂರಪ್ಪ ನೇತೃತ್ವದ ಸರಕಾರವು ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ಎಲ್ಲ ಪತ್ರಿಕೆಗಳಿಗೆ ಜಾಹೀರಾತು ನೀಡಿ ತಮ್ಮ ಸಾಧನೆಗಳನ್ನು ಹೇಳಿಕೊಂಡಿದ್ದರು. ಆದರೆ ಇದರಲ್ಲಿ ಔಷಧಿ ಖರೀದಿ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಜಾಹೀರಾತು ಯಾಕೆ ನೀಡಿಲ್ಲವೆಂದು ತಿಳಿದಿಲ್ಲ ಅವರು ತಿಳಿಸಿದರು.

ಸರಕಾರವು ಎಲ್ಲ ಖರೀದಿ ಪ್ರಕ್ರಿಯೆಗಳನ್ನು ಪಾರದರ್ಶಕ ಮಾಡಬೇಕು, ಖರೀದಿ ಆದೇಶಗಳನ್ನು, ಆದೇಶ ಹೊರಡಿಸಿದ ತಕ್ಷಣ ವೆಬ್ ಸೈಟಿನಲ್ಲಿ ಪ್ರಕಟಿಸಬೇಕು, ಇಲ್ಲಿಯವರೆಗೆ ಕೆಎಸ್‍ಎಂಸಿಎಲ್ ನಡೆದಿರುವ ಖರೀದಿಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಮತ್ತು ಹಾಲಿ ಹೈಕೋರ್ಟ್ ನ್ಯಾಯಾಧೀಶರ ಉಸ್ತುವಾರಿಯಲ್ಲಿ ತನಿಖೆ ನಡೆಸಬೇಕು ಎಂದು ಕೆ.ಆರ್.ಎಸ್. ಪಕ್ಷ ಆಗ್ರಹಿಸುತ್ತದೆ ಎಂದು ದೀಪಕ್ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News