‘ಕೋವಿಡ್ ಮತ್ತೆ ಏರಿಕೆ’: ಸರಕಾರ-ಜನತೆ ಜಾಗೃತರಾಗಿರಲು ಎಸ್.ಡಿ.ಪಿ.ಐ ಕರೆ

Update: 2021-07-31 18:16 GMT

ಬೆಂಗಳೂರು, ಜು.31: ಕಳೆದ ಎರಡು ವಾರಗಳಿಂದ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳ ಕಂಡುಬಂದಿದ್ದು ಸರಕಾರ ಮತ್ತು ಜನತೆ ಜಾಗೃತರಾಗಬೇಕೆಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವಿನಂತಿಸಿದೆ.

ಹೊಸದಾಗಿ ಸುಮಾರು 364 ಡೆಲ್ಟಾ ಪ್ರಕರಣ ದೃಢಪಟ್ಟಿದ್ದು ಅಲ್ಲದೆ ಬೀಟಾ ವೈರಸ್‍ನ ಸಂಖ್ಯೆ ಮತ್ತೆ 7ಕ್ಕೆ ಏರಿದೆ. ಸರಕಾರಿ ಲೆಕ್ಕಚಾರದ ಪ್ರಕಾರ ರಾಜ್ಯದಲ್ಲಿ ಸುಮಾರು 36 ಸಾವಿರಕ್ಕೂ ಹೆಚ್ಚು ಕೋವಿಡ್ ಮರಣಗಳು ದಾಖಲಾಗಿದೆ. ಈಗಲೂ ರಾಜ್ಯದಲ್ಲಿ 8416 ಕೋವಿಡ್ ಸೋಂಕಿತ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಸ್‍ಡಿಪಿಐ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಜಲೀಲ್ ಕೃಷ್ಣಾಪುರ ತಿಳಿಸಿದ್ದಾರೆ.

ಆಡಳಿತ ಪಕ್ಷದ ನಾಯಕರು ಒಳಜಗಳ ಮತ್ತು ಮಂತ್ರಿಗಿರಿ ಉಳಿಸುವಲ್ಲಿ ತಲ್ಲೀನರಾಗಿದ್ದು, ಈಗ ಜಿಲ್ಲಾಧಿಕಾರಿಗಳಿಗೆ ಒತ್ತಡ ತರುವ ಕೆಲಸ ಸರಿಯಲ್ಲ. ಸರಕಾರ, ಆರೋಗ್ಯ ಸಂಘಟನೆ ಮತ್ತು ದೇಶದ ಜನತೆ ಕೋವಿಡ್ ಮುಂಜಾಗೃತಾ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಾಗಿದೆ ಎಂದು ಅವರು ಕೋರಿದ್ದಾರೆ.

ನಾಗರಿಕರು ಹೆಚ್ಚು ಜವಾಬ್ದಾರಿಯುತರಾಗಿ ನಡೆದುಕೊಳ್ಳಬೇಕು. ಜನಜಂಗುಳಿ ಸೇರುವ ಧಾರ್ಮಿಕ, ಸಾಮಾಜಿಕ, ರಾಜಕೀಯ, ಮದುವೆ ಸಮಾರಂಭ ಮುಂತಾದ ಕಾರ್ಯಕ್ರಮಗಳಲ್ಲಿ ಕಟ್ಟು ನಿಟ್ಟಿನ ನಿಯಂತ್ರಣ ಪಾಲಿಸಬೇಕು. ಮೂರನೇ ಅಲೆ ಮತ್ತೆ ಬಂದರೆ ಅನಿವಾರ್ಯವಾಗಿ ಲಾಕ್‍ಡೌನ್ ಹೇರಿ ಜನಜೀವನ ದುಸ್ತರವಾಗಬಹುದು ಎಂದು ಅಬ್ದುಲ್ ಜಲೀಲ್ ಕೃಷ್ಣಾಪುರ ಹೇಳಿದ್ದಾರೆ.

ಆದುದರಿಂದ, ಎಲ್ಲ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತ್ತು ಧಾರ್ಮಿಕ ಮುಖಂಡರು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕೆಂದು ಅವರು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News