ಪ್ರತ್ಯೇಕ ಸೈಕಲ್ ಟ್ರ್ಯಾಕ್ ನಿರ್ಮಾಣಕ್ಕೆ ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2021-08-01 13:45 GMT

ಬೆಂಗಳೂರು, ಆ. 1: `ಮನುಷ್ಯ ಅತ್ಯಂತ ಸಹಜವಾಗಿ ರೂಢಿಸಿಕೊಳ್ಳುವ ಸೈಕಲ್ ಸವಾರಿ, ಆತನ ದೇಹಕ್ಕೆ ಹೊಂದುವ, ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಲು ಅನುಕೂಲವಾಗುವಂತಹ ಸಂಚಾರ ಸಾಧನವೂ ಹೌದು. ಹೀಗಾಗಿ ನಗರದಲ್ಲಿ ಸೈಕಲ್ ಸವಾರರಿಗೆ ಅನುಕೂಲಕ್ಕಾಗಿ ಪ್ರತ್ಯೇಕ ಸೈಕಲ್ ಟ್ರಾಕ್‍ಗಳನ್ನು ನಿರ್ಮಿಸಲು ಸರಕಾರ ಕ್ರಮ ವಹಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ.

ರವಿವಾರ ಬೆಳಗ್ಗೆ ವಿಧಾನಸೌಧದ ಮುಂಭಾಗದಲ್ಲಿ `ಚಿಯರ್ ಫಾರ್ ಇಂಡಿಯಾ' ಧ್ಯೇಯ ಘೋಷದಡಿ ಬಿಜೆಪಿ ಯುವಮೋರ್ಚಾ ಹಮ್ಮಿಕೊಂಡಿದ್ದ `ಒಲಿಂಪಿಕ್ಸ್‍ನಲ್ಲಿ ಪಾಲ್ಗೊಂಡಿರುವ ದೇಶದ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ' ಸೈಕಲ್ ರ್‍ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು,`ಯುವ ಜನರು ರಾಜ್ಯ ಹಾಗೂ ದೇಶದ ಭವಿಷ್ಯ. ಇಂದು ದೇಶದಲ್ಲಿ 56 ಸಾವಿರ ಜನರು ಸೈಕ್ಲಿಂಗ್ ಮಾಡುತ್ತಿದ್ದಾರೆ. ಯುವ ಜನರಲ್ಲಿ ಎನರ್ಜಿ ಇರುತ್ತದೆ, ಆದರೆ, ಶಿಸ್ತು ರೂಢಿಸಿಕೊಳ್ಳಬೇಕು. ಹೀಗಾಗಿ, ಸೈಕಲ್ ರ್ಯಾಲಿ ಆಯೋಜನೆ ಮಾಡಿರುವುದು ಒಳ್ಳೆಯ ವಿಷಯ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

`ಪ್ರಧಾನಿ ಮೋದಿಯವರು ಪ್ರತಿ ವಿಷಯ ಹಾಗೂ ಪ್ರತಿಯೊಂದು ಅಂಶಗಳಿಗೆ ಅತ್ಯಂತ ಸೂಕ್ಷ್ಮವಾಗಿ ಸ್ಪಂದಿಸುತ್ತಿದ್ದಾರೆ. ಭಾರತ ಮತ್ತು ಭಾರತೀಯತೆಗೆ ಸದಾ ತುಡಿಯುತ್ತಾರೆ, ಪ್ರತಿ ಹೆಜ್ಜೆಗೂ ಯುವ ಜನತೆಗೆ ಸ್ಫೂರ್ತಿ ತುಂಬುತ್ತಿದ್ದಾರೆ. ಸ್ವಚ್ಛ ಭಾರತದಿಂದ ಹಿಡಿದು ಪ್ರತಿ ಕಾರ್ಯಕ್ರಮದಲ್ಲಿ ಮೋದಿಯವರ ಸೂಕ್ಷ್ಮ ಸಂವೇದನೆ ಎದ್ದು ಕಾಣುತ್ತದೆ. `ಖೇಲೋ ಇಂಡಿಯಾ' ಮೂಲಕ ಕ್ರೀಡಾ ಚಟುವಟಿಕೆಗಳಿಗೆ ಆದ್ಯತೆ ನೀಡಿದರೆ, ಜೀತೋ ಇಂಡಿಯಾ ಮೂಲಕ ಕ್ರೀಡಾಪಟುಗಳನ್ನು ಹುರಿದುಂಬಿಸುತ್ತಿದ್ದಾರೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಖೇಲೋ ಇಂಡಿಯಾ ಭಾಗವಾಗಿ ದೇಶಾದ್ಯಂತ ನಡೆಯುತ್ತಿರುವ ಸೈಕಲ್ ರ್‍ಯಾಲಿ ಏರ್ಪಡಿಸಿದ್ದು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಒಟ್ಟು 56 ಸಾವಿರ ಮಂದಿ ಯುವಜನರು ಪಾಲ್ಗೊಳ್ಳುತ್ತಿದ್ದಾರೆ ಎಂದ ಅವರು, ಮನುಷ್ಯ ಸಹಜ ಮತ್ತು ಬಹಳ ಸುಲಭವಾಗಿ ರೂಢಿಸಿಕೊಳ್ಳುವ ಸಂಗತಿಗಳಲ್ಲಿ ಸೈಕ್ಲಿಂಗ್ ಕೂಡ ಒಂದು. ಸೈಕಲ್ ಸವಾರಿಯಿಂದ ನಮ್ಮ ದೇಹ ಆರೋಗ್ಯವಾಗಿರುತ್ತದೆ. ಇದೊಂದು ವೈಜ್ಞಾನಿಕ ಸಾಧನವೂ ಹೌದು ಎಂದು ಹೇಳಿದರು.

ನಾನು ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಯುವ ಸಮೂಹ ಏರ್ಪಡಿಸಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತಸ ಉಂಟುಮಾಡಿದೆ ಎಂದ ಅವರು, ಐಟಿ-ಬಿಟಿ ಸಿಟಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಬೆಳೆದಿದ್ದರೂ, ಸ್ಥಳೀಯತೆಯನ್ನು ಉಳಿಸಿಕೊಂಡಿದೆ. ಆ ನಿಟ್ಟಿನಲ್ಲಿ ಇತರರಿಗೆ ಮಾದರಿ ಆಗುವ ದೃಷ್ಟಿಯಿಂದ ಪರಿಸರ ಸಂರಕ್ಷಣೆಗೆ ಸೈಕಲಿಂಗ್‍ಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ, ಸಂಸದ ಪಿ.ಸಿ.ಮೋಹನ್, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯಾಧ್ಯಕ್ಷ ತೇಜಸ್ವಿ ಸೂರ್ಯ, ಮಾಜಿ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News