ಎಚ್.ಡಿ. ದೇವೇಗೌಡರನ್ನು ಭೇಟಿಯಾದ ಸಿಎಂ ಬಸವರಾಜ ಬೊಮ್ಮಾಯಿ

Update: 2021-08-01 12:18 GMT

ಬೆಂಗಳೂರು, ಆ. 1: ಬಸವರಾಜ ಬೊಮ್ಮಾಯಿ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಬಳಿಕ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.

ರವಿವಾರ ಮಧ್ಯಾಹ್ನ ಇಲ್ಲಿನ ಪದ್ಮನಾಭ ನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ತೆರಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮಾಜಿ ಪ್ರಧಾನಿ ದೇವೇಗೌಡ ಅವರ ಕಾಲಿಗೆ ನಮಸ್ಕರಿಸಿ, ಆಶೀರ್ವಾದ ಪಡೆದರು. ಈ ವೇಳೆ ದೇವೇಗೌಡರು ನೂತನ ಸಿಎಂಗೆ ಶಾಲು ಹೊದಿಸಿ, ಹೂವಿನಹಾರ ಹಾಕಿ ಸನ್ಮಾನ ಮಾಡಿದರು.

ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, `ಮಾಜಿ ಪ್ರಧಾನಿ ದೇವೇಗೌಡ ಅವರು ರಾಜ್ಯ ಮತ್ತು ದೇಶದ ಧೀಮಂತ ನಾಯಕರು. ಅವರ ಆಶೀರ್ವಾದ ಪಡೆದಿದ್ದೇನೆ. ಅವರು ನಮ್ಮ ತಂದೆಯೊಂದಿಗೆ ಒಡನಾಟಹೊಂದಿದ್ದ ಅಪರೂಪದ ಮುತ್ಸದ್ದಿ. ಈ ಇಳಿ ವಯಸ್ಸಿನಲ್ಲಿಯೂ ಅವರು ಅತ್ಯಂತ ಉತ್ಸಾಹದಿಂದ ಇದ್ದಾರೆ. ಅವರ ಮಾರ್ಗದರ್ಶನ ರಾಜ್ಯಕ್ಕೆ ಅತ್ಯಗತ್ಯ' ಎಂದು ಹೇಳಿದರು.

`ರಾಜ್ಯದ ನೆಲ, ಜಲ ಹಾಗೂ ಜನರ ಸಮಸ್ಯೆಗಳ ಬಗ್ಗೆ ಅವರ ಮಾರ್ಗದರ್ಶನ ಅಗತ್ಯ. ರಾಜ್ಯದ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಜೆಡಿಎಸ್ ರಾಜಭವನಕ್ಕೆ ಪಾದಯಾತ್ರೆ ನಡೆಸಿರುವುದನ್ನು ನಾನು ಗಮನಿಸಿದ್ದೇನೆ. ರಾಜ್ಯದ ನೆಲ, ಜಲದ ವಿಚಾರದಲ್ಲಿ ಸರ್ವಪಕ್ಷ ಒಂದೇ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ಅವರ ಆಶೀರ್ವಾದ ಪಡೆದಿದ್ದೇನೆ' ಎಂದು ತಿಳಿಸಿದರು.

`ಜನತಾ ಪರಿವಾದಲ್ಲಿದ್ದಾಗಿನ ಒಡನಾಟ, ಹಳೆ ನೆನಪುಗಳನ್ನು ಮೆಲುಕು ಹಾಕಿದೆವು. ಸಿಕ್ಕಿರುವ ಅವಕಾಶ ಸಮರ್ಥವಾಗಿ ಬಳಸಿಕೊಂಡು, ರಾಜ್ಯಕ್ಕೆ ಉತ್ತಮವಾಗಿ ಆಡಳಿತ ನೀಡುವಂತೆ ಮಾರ್ಗದರ್ಶನ ನೀಡಿದರು. ಆ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ಹಾಗೂ ಮಾರ್ಗದರ್ಶನ ಮಾಡುವ ಭರವಸೆ ನೀಡಿದ್ದಾರೆ' ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ವಿ.ಸೋಮಣ್ಣ, ಎಚ್.ಡಿ.ರೇವಣ್ಣ ಸೇರಿದಂತೆ ಇನ್ನಿತರರು ಹಾಜರಿದ್ದರು.

`ಸಿಎಂ ಬಸವರಾಜ ಬೊಮ್ಮಾಯಿ ನಾನು ದಿಲ್ಲಿಯಲ್ಲಿದ್ದಾಗಲೇ ಭೇಟಿಗೆ ಬರುವುದಾಗಿ ಹೇಳಿದ್ದರು. ಕಾರ್ಯ ಒತ್ತಡ ಇದುದ್ದರಿಂದ ಭೇಟಿ ಸಾಧ್ಯವಾಗಿರಲಿಲ್ಲ. ಮಾಜಿ ಸಚಿವ ರೇವಣ್ಣ ಸಿಎಂ ಸ್ವಾಗತ ಮಾಡಿ ಮನೆಗೆ ಕರೆದುಕೊಂಡು ಬಂದರು. ಅವರ ತಂದೆ ಎಸ್.ಆರ್.ಬೊಮ್ಮಾಯಿ ಮತ್ತು ನಾನು ಒಟ್ಟಾಗಿ ಕೆಲಸ ಮಾಡಿದ್ದೇವೆ. ಅವರ ತಂದೆ ಕಾಲದ ಹಿರಿಯ ಮನುಷ್ಯ ನಾನೊಬ್ಬನೇ. ಹೀಗಾಗಿ ಆಶೀರ್ವಾದ ಪಡೆಯಲು ಬಂದಿದ್ದರು. ಮಾಜಿ ಸಿಎಂ ಬಿಎಸ್‍ವೈ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ನಾವು ಹೇಳಿಲ್ಲ. ಅವರ ಪಕ್ಷದಲ್ಲಿ 75 ವರ್ಷದ ನಿಬಂಧನೆ ಇದೆ. ಹೀಗಾಗಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ'

-ಎಚ್.ಡಿ.ದೇವೇಗೌಡ ಮಾಜಿ ಪ್ರಧಾನಿ

`ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ದೇವೇಗೌಡರು ಅತ್ಯಂತ ಖುಷಿಯಿಂದ ಶುಭ ಹಾರೈಸಿದ್ದಾರೆ. ನನ್ನ ಹಾಗೂ ಬಸವರಾಜ್ ಬೊಮ್ಮಾಯಿ ಅವರ ನಡುವೆ ಹಲವು ವರ್ಷದ ಗೆಳೆತನವಿದೆ. ನಾವಿಬ್ಬರು ಒಳ್ಳೆಯ ಸ್ನೇಹಿತರು. ಈಗ ರಾಜ್ಯದಲ್ಲಿ ಎದುರಾಗಿರುವ ಪ್ರವಾಹ ಪರಿಸ್ಥಿತಿ, ಕೋವಿಡ್ ಸಂಕಷ್ಟವನ್ನು ನಿಭಾಯಿಸುತ್ತಾರೆ. ಕೋವಿಡ್ ಮೂರನೆ ಅಲೆ ತಡೆಗೆ ಈಗಲೇ ಕ್ರಮ ವಹಿಸಬೇಕು. ಅವರು ಜನತಾ ಪರಿವಾರದ ಮುಖ್ಯಮಂತ್ರಿ ಎಂಬ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸುವಷ್ಟು ನಾನು ದೊಡ್ಡವನಲ್ಲ'

-ಎಚ್.ಡಿ.ರೇವಣ್ಣ ಮಾಜಿ ಸಚಿವ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News