ಬೆಂಗಳೂರಿಗೆ ನೂತನ ಪೊಲೀಸ್ ಆಯುಕ್ತ?
ಬೆಂಗಳೂರು, ಆ.1: ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಅಧಿಕಾರ ಸ್ವೀಕರಿಸಿ ಇಂದಿಗೆ ಒಂದು ವರ್ಷ ಪೂರ್ಣಗೊಳ್ಳುವ ಹಿನ್ನೆಲೆ ರಾಜ್ಯ ಸರಕಾರ ನೂತನ ಆಯುಕ್ತರನ್ನು ನೇಮಕ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಗುಪ್ತಚರ ವಿಭಾಗದ ಬಿ.ದಯಾನಂದ್, ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪ್ರತಾಪ್ ರೆಡ್ಡಿ, ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪಾಲ್ ಹಾಗೂ ರಾಜ್ಯ ಆಡಳಿತ ವಿಭಾಗದ ಎಡಿಜಿಪಿ ಎಂ.ಎ.ಸಲೀಂ ಪೈಕಿ ಒಬ್ಬರು ಹಾಲಿ ಆಯುಕ್ತ ಕಮಲ್ ಪಂತ್ ಅವರ ಸ್ಥಾನಕ್ಕೆ ನೇಮಕವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
1994ರ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿರುವ ದಯಾನಂದ್ ಪ್ರಸ್ತುತ ಎಡಿಜಿಪಿಯಾಗಿ ರಾಜ್ಯ ಗುಪ್ತಚರ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದೇ ರೀತಿ, 1993ರ ಬ್ಯಾಚ್ ಐಪಿಎಸ್ ಅಧಿಕಾರಿ ಸಲೀಂ ಈ ಹಿಂದೆ ಅಪರಾಧ ವಿಭಾಗದ ಎಡಿಜಿಪಿ ಹಾಗೂ ಪೂರ್ವ ವಲಯದ ಐಜಿಪಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ತಮ್ಮದೇ ಆದ ಕಾರ್ಯಶೈಲಿಯಿಂದ ದಕ್ಷ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಇಬ್ಬರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿವೆ.